Advertisement

ರಾಕ್ಷಸರ ಮುದ್ದೆಯೂಟ!

06:00 AM Jul 26, 2018 | |

“ರತ್ನಗಿರಿ ಎನ್ನುವ ಬೆಟ್ಟದ ಬಳಿ ಕೆಲವು ವಿಶಿಷ್ಟವಾದ ಪಕ್ಷಿಗಳಿವೆಯಂತೆ. ಅವು ಹಾಕುವ ಹಿಕ್ಕೆಯಲ್ಲಿ ಅಪೂರ್ವವಾದ ರತ್ನಗಳಿರುತ್ತವಂತೆ. ಆದರೆ ಆ ಕಾಡಿನಲ್ಲಿ ಭಯಂಕರ ರಾಕ್ಷಸರಿರುವುದರಿಂದ ಯಾರೂ ಆ ಕಡೆ ಸುಳಿಯುವುದಿಲ್ಲ’ ಎಂದು ಪಿಸುಗುಟ್ಟಿದನು.

Advertisement

ಒಂದು ಊರಲ್ಲಿ ಶಂಕರಯ್ಯನೆಂಬ ಒಬ್ಬ ವರ್ತಕನಿದ್ದ. ಅವನಿಗೆ ರಾಮ, ಭೀಮ, ಸೋಮ, ಶ್ಯಾಮ ಅಂತ ನಾಲ್ಕು ಜನ ಗಂಡು ಮಕ್ಕಳು. ಮಕ್ಕಳೆಲ್ಲಾ ಬೆಳೆದು ದೊಡ್ಡವರಾಗಿ ತಂದೆ ಜೊತೆ ವ್ಯಾಪಾರಕ್ಕೆ ಬಂದಿರ್ತಾರೆ. ಒಂದು ದಿನ ಶಂಕರಯ್ಯ ಮಕ್ಕಳನ್ನು ಕರೆದು, “ನನಗೂ ವಯಸ್ಸಾಗುತ್ತಾ ಬಂತು. ನೀವು ನಾಲ್ಕೂ ಜನ ಲೋಕಜ್ಞಾನ ಪಡೆಯಬೇಕು ಎನ್ನುವುದು ನನ್ನ ಆಸೆ. ಆದ್ದರಿಂದ ನೀವೆಲ್ಲಾ ಕೆಲ ತಿಂಗಳು ದೇಶ ಪರ್ಯಟನೆ ಮಾಡಿಕೊಂಡು ಬನ್ನಿ’ ಎಂದನು. 

ತಂದೆಯ ಮಾತಿನಂತೆ ಮಕ್ಕಳು ದೇಶ ಪರ್ಯಟನೆಗೆ ಹೊರಟರು. ದಾರಿ ಮಧ್ಯ ಕತ್ತಲಾದಾಗ ಊರೊಂದರ ದೇವಸ್ಥಾನದಲ್ಲಿ ಠಿಕಾಣಿ ಹೂಡಿದರು. ಅಲ್ಲಿ ಇಬ್ಬರು ಹಿರಿಯರು ಮಾತಾಡಿಕೊಳ್ಳುತ್ತಿದ್ದರು. ಅವರಲ್ಲೊಬ್ಬ “ರತ್ನಗಿರಿ ಎನ್ನುವ ಬೆಟ್ಟದ ಬಳಿ ಕೆಲವು ವಿಶಿಷ್ಟವಾದ ಪಕ್ಷಿಗಳಿವೆಯಂತೆ. ಅವು ವರ್ಷಕ್ಕೊಮ್ಮೆ ಒಂದು ತಿಂಗಳು ಆ ಅಡವಿಯಲ್ಲಿದ್ದು ಮೊಟ್ಟೆಯಿಟ್ಟು ಮರಿಮಾಡಿಕೊಂಡು ನಂತರ ಹೊರಟು ಬಿಡುತ್ತವಂತೆ. ಅವು ಹಾಕುವ ಹಿಕ್ಕೆಯಲ್ಲಿ ಅಪೂರ್ವವಾದ ರತ್ನಗಳಿರುತ್ತವೆ. ಆದರೆ ಆ ಕಾಡಿನಲ್ಲಿ ಭಯಂಕರ ರಾಕ್ಷಸರಿರುವುದರಿಂದ ಯಾರೂ ಆ ಕಡೆ ಸುಳಿಯುವುದಿಲ್ಲ’ ಎಂದು ಪಿಸುಗುಟ್ಟಿದನು, ಯಾರಾದರೂ ಕೇಳಿಸಿಕೊಂಡಾರು ಎಂಬಂತೆ. ಈ ಮಾತುಗಳು ಅಣ್ಣತಮ್ಮಂದಿರ ಕಿವಿಗೆ ಬಿದ್ದವು.

ಆ ದಿನ ರಾತ್ರಿ ಅವರೆಲ್ಲರೂ ಸಮಾಲೋಚನೆ ನಡೆಸಿದರು. ಹೇಗಾದರೂ ಮಾಡಿ ಆ ಕಾಡನ್ನು ಪ್ರವೇಶಿಸಿ ರತ್ನಗಳನ್ನು ಪಡೆದುಕೊಳ್ಳಬೇಕೆಂದು ಅವರು ನಿಶ್ಚಯಿಸಿದರು. ಒಂದು ತಿಂಗಳಿಗಾಗುವಷ್ಟು ಆಹಾರ, ಆಯುಧ ಮುಂತಾದ ಸಲಕರಣೆಗಳನ್ನು ಚೀಲದಲ್ಲಿ ತುಂಬಿಕೊಂಡು ನಾಲ್ವರೂ ಕಾಡನ್ನು ಪ್ರವೇಶಿಸಿದರು.

ಪಕ್ಷಿಗಳ ಜಾಡು ಸಿಗಲು ಸುಮಾರು ಎರಡು ದಿನಗಳ ಕಾಲ ನಡೆದಿದ್ದರು. ಪಕ್ಷಿಗಳ ಪುಕ್ಕಗಳು ಅಲ್ಲೆಲ್ಲಾ ಹರಡಿದ್ದವು. ನೆಲದಲ್ಲಿ ಹಿಕ್ಕೆಗಳೂ ಕಂಡುಬಂದವು. ಆದರೆ ರತ್ನಗಳ ಸುಳಿವು ಮಾತ್ರ ಸಿಗಲಿಲ್ಲ. ಅಷ್ಟರಲ್ಲಿ ಕತ್ತಲಾಗಿದ್ದರಿಂದ ಅಲ್ಲಿಯೇ ಗುಡಾರ ಹಾಕಿಕೊಂಡು ತಂಗಿದರು. ಬೆಳಗ್ಗೆ ಎದ್ದು ನೋಡಿದಾಗ ಗುಡಾರದ ಸುತ್ತಲೂ ಅಪರೂಪದ ರತ್ನಗಳು ಕಂಡವು. ಹಿಂದಿನ ದಿನ ಕತ್ತಲಾಗಿದ್ದರಿಂದ ಏನೂ ಕಾಣಿಸಿರಲಿಲ್ಲ. ಬೆಳಕು ಹರಿಯುತ್ತಿದ್ದಂತೆ ಮುತ್ತು ರತ್ನಗಳು ಕಣ್ಣಿಗೆ ಬಿದ್ದಿದ್ದವು. ಕೈಗೆ ಸಿಕ್ಕಷ್ಟನ್ನೂ ಚೀಲದೊಳಕ್ಕೆ ತುಂಬಿಕೊಂಡರು. ಅಣ್ಣ ತಮ್ಮಂದಿರು ಸಂತೋಷದಿಂದ ಬಂದ ಕೆಲಸ ಆಯೆ¤ಂದು ಹಿಂತಿರುಗಿ ಹೊರಟರು. ಆದರೆ ನಿಜವಾದ ಸವಾಲು ಮುಂದೆ ಇತ್ತು. 

Advertisement

ಇದುವರೆಗೂ ರಾಕ್ಷಸರು ಕಾಣದೇ ಇದ್ದುದರಿಂದ ಅದು ಕಟ್ಟು ಕತೆ ಇದ್ದಿರಬಹುದೆಂದು ರಾಮ ಹೇಳಿದ. ಪಕ್ಷಿಗಳು ಮತ್ತು ಮುತ್ತುರತ್ನಗಳನ್ನು ಕಾಪಾಡಲು ಹಿರಿಯರು ರಾಕ್ಷಸರ ಕಟ್ಟುಕತೆಯನ್ನು ಸೃಷ್ಟಿಸಿದರಬಹುದು ಎಂದನು ಸೋಮ. ಆದರೆ ಅವರೆಲ್ಲರ ಲೆಕ್ಕಾಚಾರ ಸುಳ್ಳಾಗುವಂತೆ ರಾಕ್ಷಸರು ಅವರ ಕಣ್ಣಿಗೆ ಬಿದ್ದರು. ದೈತ್ಯರಾಗಿದ್ದ ಅವರನ್ನು ನೋಡಿ ಎಲ್ಲರ ಧೈರ್ಯ ಹಾರಿ ಹೋಯಿತು. ರಾಕ್ಷಸರೊಡನೆ ಕಾದಾಡಲು ಶ್ಯಾಮ ಚೀಲದಿಂದ ಆಯುಧ ತೆಗೆದ. ಅಷ್ಟರಲ್ಲಿ ಆಶ್ಚರ್ಯಕಾರಿ ಘಟನೆಯೊಂದು ನಡೆದುಹೋಯಿತು. 

ಅವರು ಆಹಾರವನ್ನು ದಾಸ್ತಾನಿರಿಸಿದ್ದ ಚೀಲದಿಂದ ಘಂ ಎಂಬ ಸುವಾಸನೆ ಬರುತ್ತಿತ್ತು. ಅಣ್ಣ ತಮ್ಮಂದಿರು ರೋಷಾವೇಶದಿಂದ ಹೊಡೆದಾಟಕ್ಕೆ ಸಿದ್ಧರಾಗುತ್ತಿದ್ದರೆ ರಾಕ್ಷಸರು ನಿಧಾನವಾಗಿ ಚೀಲದ ಬಳಿ ಬಂದು ಗಂಟನ್ನು ತೆರೆದರು. ಮುದ್ದೆ ಮತ್ತು ಹುರುಳಿ ಸಾರು ಘಮ್‌ ಎಂದು ಪರಿಮಳ ಸೂಸುತ್ತಿತ್ತು. ರಾಕ್ಷಸರು ನೆಲದ ಮೇಲೆ ಕೂತು ಪಟ್ಟಾಗಿ ಮುದ್ದೆಯೂಟ ಮಾಡಿದರು. ಇತ್ತ ಅಣ್ಣ ತಮ್ಮಂದಿರಿಗೆ ಆಶ್ಚರ್ಯವೋ ಆಶ್ಚರ್ಯ. ಅವರಿಗೆ ತಮ್ಮ ಕಣ್ಣುಗಳನ್ನು ತಾವೇ ನಂಬಲು ಸಾಧ್ಯವಾಗಲಿಲ್ಲ. 

ಮುದ್ದೆಯೂಟ ಮಾಡಿದ ರಾಕ್ಷಸರಿಗೆ ಜಗಳ ಮಾಡುವ ಉತ್ಸಾಹವೇ ಇರಲಿಲ್ಲ. ಬದಲಾಗಿ ಅವರು ಅಣ್ಣ ತಮ್ಮಂದಿರಿಗೆ ಸಹಾಯ ಮಾಡಲು ಮುಂದಾದರು. ರಾಕ್ಷಸರು, ಕಾಡಿನ ಅಂಚಿನವರೆಗೂ ಚೀಲಗಳನ್ನು ಹೊತ್ತು ಅವರನ್ನು ಬೀಳ್ಕೊಟ್ಟರು. ಮನೆಗೆ ಹಿಂದಿರುಗಿದ ಅಣ್ಣ ತಮ್ಮಂದಿರು ತಂದೆಯ ಬಳಿ ನಡೆದುದೆಲ್ಲವನ್ನೂ ವಿವರಿಸಿದರು. ಸಂತಸಗೊಂಡ ತಂದೆ ಹೆಮ್ಮೆಯಿಂದ ಮಕ್ಕಳನ್ನು ಆಲಂಗಿಸಿಕೊಂಡನು.

ತುಳಸಿ ವಿಜಯಕುಮಾರಿ

Advertisement

Udayavani is now on Telegram. Click here to join our channel and stay updated with the latest news.

Next