Advertisement

ಅಪನಗದೀಕರಣ: ಜೆಪಿಸಿ ತನಿಖೆಗೆ ಕಾಂಗ್ರೆಸ್‌ ಆಗ್ರಹ

11:56 AM Jan 20, 2017 | |

ಬೆಂಗಳೂರು: ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿರುವುದರ ಹಿಂದೆ ದೊಡ್ಡ ಹುನ್ನಾರವಿದ್ದು ಇದನ್ನು ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್‌ ಆಗ್ರಹಿಸಿದ್ದಾರೆ.

Advertisement

ನೋಟು ಅಮಾನ್ಯ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ನಡೆದ ಆರ್‌ಬಿಐ ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೋಟು ಅಮಾನ್ಯದಿಂದ ದೇಶಾದ್ಯಂತ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಸ್ಥಿತಿವಂತರು ಯಾರಿಗೂ ಕಿಂಚಿತ್ತೂ ತೊಂದರೆಯಾಗಿಲ್ಲ. ಇದೊಂದು ಹಗರಣ, ಹೀಗಾಗಿ, ಜಂಟಿ ಸದನ ಸಮಿತಿ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. 

ಭ್ರಷ್ಟಾಚಾರ ಕಡಿಮೆಯಾಗಿಲ್ಲ: ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯ ಮಾಡಿದಾಗ ಆರಂಭದಲ್ಲಿ ನಾವೂ ಸ್ವಾಗತಿಸಿದ್ದೆವು. ಆಗ ಅವರು, ಕಪ್ಪು ಹಣ ನಿರ್ಮೂಲನೆ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ತಡೆಯಲು ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದರು. ಆದರೆ, ಪ್ರಧಾನಿ ಘೋಷಣೆ ಮಾಡಿ ಮೂರು ತಿಂಗಳು ಕಳೆದರೂ ಯಾವುದೂ ಕಡಿಮೆಯಾಗಿಲ್ಲ. ಸಾಮಾನ್ಯ ಜನರು ಇನ್ನೂ ಎಟಿಎಂಗಳ ಮುಂದೆ ಸಾಲು ನಿಲ್ಲುವುದು ತಪ್ಪಿಲ್ಲ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಮಾತನಾಡಿ, ನವೆಂಬರ್‌ 8 ದೇಶದ ಬಡವರಿಗೆ ಅತ್ಯಂತ ಆಘಾತ ತಂದ ದಿನ. ಪ್ರಧಾನಿ ನರೇಂದ್ರ ಮೋದಿ ದೇಶದ ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ­ ನಿರಂತರ ಬರದಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೂ ಸ್ಪಂದಿಸ­­ಲಿಲ್ಲ. 70 ವರ್ಷದಿಂದ ಸುಭದ್ರ­ವಾಗಿದ್ದ ಆರ್ಥಿಕ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಹಾಳು ಮಾಡಿದರು ಎಂದು ಆರೋಪಿಸಿದರು.  

ಇದೇ ವೇಳೆ,  ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಹೋರಾಟ ಆರಂಭಿಸಿದ್ದು, ಮೋದಿಯವನರನ್ನು ಕೆಳಗಿಳಿಸುವರೆಗೂ ನಿಲ್ಲುವುದಿಲ್ಲ ಎಂದು ಹೇಳಿದರು.  ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರ್‌ ಬಿ. ಐ ಗೌರ್ನರ್‌ ರನ್ನು ತಮ್ಮ ಕೈಗೊಂಬೆಯಾಗಿ ಮಾಡಿಕೊಂಡಿದ್ದಾರೆ. ಸಾಮಾನ್ಯ ಜನರಿಗೆ ರಿಸರ್ವ್‌ ಬ್ಯಾಂಕ್‌ ಮೇಲೆ ಇದ್ದ ಗೌರವ ಕಡಿಮೆಯಾಗಿದೆ.

Advertisement

ಅಪ ನಗದೀಕರಣದಿಂದ ಜನ ಸಾಮಾನ್ಯರಿಗೆ ಆಗಿರುವ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಿಸರ್ವ್‌ ಬ್ಯಾಂಕ್‌ ಗೌರ್ನರ್‌ ಊರ್ಜಿತ್‌ ಪಟೇಲ್‌ ಜವಾಬ್ದಾರಿ ಹೊರಬೇಕು, ಊರ್ಜಿತ್‌ ಪಟೇಲ್‌ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸಭೆ ನಂತರ ರಿಸರ್ವ್‌ ಬ್ಯಾಂಕ್‌ಗೆ ಮುತ್ತಿಗೆ ಹಾಕಲು ಫ್ರೀಡಂ ಪಾರ್ಕ್‌ ನಿಂದ ಮೆರವಣಿಗೆ ಹೊರಟ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯ­ಕರ್ತರನ್ನು ಪೊಲೀಸರು ಮಹಾರಾಣಿ ಕಾಲೇಜ್‌ ಸರ್ಕಲ್‌ ಬಳಿ ತಡೆದರು. 

ಆರ್‌ಬಿಐ ಗವರ್ನರ್‌ ರಾಜೀನಾಮೆ ನೀಡಲಿ 
ಗರಿಷ್ಠ ಮೌಲ್ಯದ ನೋಟು ಅಪನಗದೀಕರಣ ಮಾಡಿರುವುದರಿಂದ ಅರ್ಚಕರ ತಟ್ಟೆಗೆ ಚಿಲ್ಲರೆ ಹಾಕಲು ಹಣ ಇಲ್ಲದಂತಾಗಿದೆ. ನಗರಗಳಿಗೆ ಕೂಲಿಗೆ ಬಂದ ಜನರಿಗೆ ಕೂಲಿ ಸಿಗದೇ ಹಳ್ಳಿಗಳಿಗೆ ವಾಪಸ್‌ ಹೋಗುವಂತಾಗಿದೆ. ಬೀದಿ ವ್ಯಾಪಾರಸ್ಥರಿಗೆ ಉದ್ಯೋಗ ಇಲ್ಲದಂತಾಗಿದೆ. ಆರ್‌.ಬಿ. ಐ ಗೌರ್ನರ್‌ಗೆ ನೋಟು ನಿಷೇಧದ ನಂತರ ಎಷ್ಟು ಹಣ ಬಂದಿದೆ ಎಂಬ ಮಾಹಿತಿ ಇಲ್ಲ. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಆಗ್ರಹಿಸಿದರು. 

ಕ್ಯಾಶ್‌ಲೆಸ್‌ ನಿಂದ ನಷ್ಟ 
ನೋಟು ಅಮಾನ್ಯ ಕುರಿತ ತಮ್ಮ ಕಾರ್ಯ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗ ರಾಗ ಬದಲಿಸಿದ್ದು, ಕ್ಯಾಶ್‌ಲೆಸ್‌ ಸೊಸೈಟಿ ಮಾಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಲಾಭವಾಗುವುದರ ಬದಲಿಗೆ ನಷ್ಟವೇ ಹೆಚ್ಚಾಗುತ್ತದೆ. ಕ್ಯಾಶ್‌ಲೆಸ್‌ ಯೋಜನೆಯಿಂದ ಅಂತಾರಾಷ್ಟ್ರೀಯ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಕಂಪನಿಗಳಿಗೆ ಕಮಿಷನ್‌ ಮೂಲಕ ಹೆಚ್ಚಿನ ಲಾಭ ದೊರೆಯುವಂತಾಗಿದೆ. ರಿಸರ್ವ್‌ ಬ್ಯಾಂಕ್‌ ಇದರ ಜವಾಬ್ದಾರಿ ಹೊಂದಿದ್ದು, ಕಾರ್ಡ್‌ಗಳಿಗೆ ಹಾಕುವ ಕಮಿಷನ್‌ ಗೆ ತಡೆ ಹಾಕಬೇಕು ಎಂದು ಮಹಾರಾಷ್ಟ್ರ  ಮಾಜಿ ಸಿಎಂ ಪೃಥ್ವಿರಾಜ್‌ ಚೌಹಾಣ್‌ ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next