ಒಂದೂರಿನಲ್ಲಿ ಒಬ್ಬ ಬಡ ಖರ್ಜೂರದ ವ್ಯಾಪಾರಿಯಿದ್ದ. ಒಂದು ದಿನ ಸಂಜೆ ವ್ಯಾಪಾರ ಮುಗಿಸಿ ಮನೆಗೆ ವಾಪಸಾಗುತ್ತಿದ್ದ. ದಿನವಿಡೀ ನಿಂತೇ ವ್ಯಾಪಾರ ಮಾಡಿದ್ದ ಕಾರಣ, ಅವನಿಗೆ ತುಂಬಾ ಸುಸ್ತಾಗಿತ್ತು. ಹಾಗಾಗಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಮರವೊಂದರ ಕೆಳಗೆ ಕುಳಿತುಕೊಳ್ಳುತ್ತಾನೆ. ನಂತರ ತನ್ನ ಜೇಬಿನೊಳಗಿಂದ ಖರ್ಜೂರ ಹಣ್ಣನ್ನು ತೆಗೆದು ತಿನ್ನತೊಡಗುತ್ತಾನೆ. ಖರ್ಜೂರ ತಿನ್ನುತ್ತಾ, ಅದರ ಬೀಜವನ್ನು ಮರದ ಹಿಂದಕ್ಕೆ ಎಸೆಯುತ್ತಿರುತ್ತಾನೆ.
ಅಷ್ಟರಲ್ಲಿ, ಭಯಾನಕ ಶಬ್ದ… ಆ ಶಬ್ದಕ್ಕೆ ಇಡೀ ಭೂಮಿಯೇ ಅದುರಿದಂತಾಗುತ್ತದೆ. ಭಯಭೀತನಾದ ವ್ಯಾಪಾರಿ ಅತ್ತಿತ್ತ ನೋಡುವಾಗ, ಅವನ ಮುಂದೆ ರಾಕ್ಷಸನೊಬ್ಬ ಪ್ರತ್ಯಕ್ಷವಾಗುತ್ತಾನೆ. ವ್ಯಾಪಾರಿಯ ಕೈಕಾಲುಗಳು ನಡುಗತೊಡಗುತ್ತವೆ. ಆಗ ರಾಕ್ಷಸನು, “ಹೇ ಮೂರ್ಖ, ನನ್ನ ಮೇಲೆ ಕಲ್ಲೆಸೆಯುವಷ್ಟು ಧೈರ್ಯವೇ ನಿನಗೆ? ನಿನ್ನಿಂದಾಗಿ ನನ್ನ ನಿದ್ರೆಗೆ ಭಂಗವಾಯಿತು. ಮಾಡಿದ ತಪ್ಪಿಗಾಗಿ ನೀನು ಶಿಕ್ಷೆ ಅನುಭವಿಸಲೇಬೇಕು,’ ಎಂದು ಬೊಬ್ಬಿರಿಯುತ್ತಾನೆ.
ಆಗ ವ್ಯಾಪಾರಿ, “ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನಿಮ್ಮ ಮೇಲೆ ಕಲ್ಲೆಸೆದಿಲ್ಲ. ಖರ್ಜೂರ ತಿಂದು ಅದರ ಬೀಜಗಳನ್ನು ಗೊತ್ತಿಲ್ಲದೇ ಎಸೆಯುತ್ತಿದ್ದೆ. ನಿಮಗೆ ತೊಂದರೆ ಕೊಡಬೇಕೆಂಬ ಉದ್ದೇಶವೂ ನನಗಿಲ್ಲ. ನನ್ನನ್ನು ಬಿಟ್ಟುಬಿಡಿ’ ಎಂದು ಗೋಗರೆಯುತ್ತಾನೆ. ಅದಕ್ಕೊಪ್ಪದ ರಾಕ್ಷಸ, “ಎಲವೋ ಮಾನವ. ಮೋಸದ ಮಾತುಗಳಿಂದ ನನ್ನನ್ನು ಮರುಳು ಮಾಡಬೇಡ. ನಿನಗೆ ಸಾವೇ ಗತಿ. ಈಗಲೇ ನಿನ್ನನ್ನು ಮುಗಿಸಿಬಿಡುವೆ’ ಎನ್ನುತ್ತಾ ಕತ್ತಿ ಬೀಸಲು ಮುಂದಾಗುತ್ತಾನೆ. ಆಗ ವ್ಯಾಪಾರಿ ಅಳುತ್ತಾ, “ಕೊಲ್ಲುವ ಮೊದಲು ನನ್ನ ಕೊನೇ ಆಸೆಯನ್ನಾದರೂ ಪೂರೈಸು’ ಎಂದು ಬೇಡುತ್ತಾನೆ. ಅದಕ್ಕೆ ರಾಕ್ಷಸ “ಅದೇನು ಹೇಳು’ ಎನ್ನುತ್ತಾನೆ.
“ಒಂದು ಬಾರಿ ಮನೆಗೆ ಹೋಗಲು ಬಿಡು. ನಾನು ಹಲವರಿಂದ ಸಾಲ ಪಡೆದಿದ್ದೇನೆ. ಅದನ್ನೆಲ್ಲ ಮರಳಿಸಬೇಕು. ನನ್ನ ಪತ್ನಿ, ಮಕ್ಕಳನ್ನು ನೋಡಿ ಕಣ್ತುಂಬಿಕೊಳ್ಳಬೇಕು’ ಎಂದು ಹೇಳುತ್ತಾನೆ ವ್ಯಾಪಾರಿ. ಮನಸ್ಸಿಲ್ಲದಿದ್ದರೂ ವ್ಯಾಪಾರಿಯ ಕೋರಿಕೆಗೆ ರಾಕ್ಷಸ ಒಪ್ಪುತ್ತಾನೆ. ಆದರೆ, “ನಾಳೆ ಇದೇ ಸಮಯಕ್ಕೆ ವಾಪಸ್ ಬಂದಿರಬೇಕು’ ಎಂದು ಷರತ್ತು ಹಾಕಿ ವ್ಯಾಪಾರಿಯನ್ನು ಹೋಗಲು ಬಿಡುತ್ತಾನೆ. ಅಂತೆಯೇ ವ್ಯಾಪಾರಿ ಮನೆಗೆ ಹೋಗಿ ಸಾಲದ ಹಣವನ್ನು ಮರಳಿಸಿ, ನಡೆದಿದ್ದನ್ನೆಲ್ಲ ಮನೆಯವರಿಗೆ ವಿವರಿಸುತ್ತಾನೆ. ಅಲ್ಲದೆ, ರಾಕ್ಷಸನಿಗೆ ಕೊಟ್ಟ ಮಾತಿನಂತೆ ನಾಳೆ ನಾನು ಹೋಗಲೇಬೇಕು ಎಂದು ಮನೆಯವರನ್ನು ಸಮಾಧಾನಪಡಿಸಿ, ಮಾರನೇ ದಿನವೇ ರಾಕ್ಷಸನಿದ್ದಲ್ಲಿಗೆ ಬರುತ್ತಾನೆ.
ಅವನ ಬರುವಿಕೆಯನ್ನೇ ಕಾಯುತ್ತಿದ್ದ ರಾಕ್ಷಸನಿಗೆ ಆಶ್ಚರ್ಯವಾಗುತ್ತದೆ. ಇವನ ಪ್ರಾಮಾಣಿಕತೆಯನ್ನು ಪರೀಕ್ಷಿಸಬೇಕು ಎಂದು ಭಾವಿಸಿ, “ನೀನು ಬಂದಿದ್ದು ನನಗೆ ಖುಷಿಯಾಯಿತು. ಆದರೆ, ಈಗ ಇಲ್ಲಿಂದ ಹಾದುಹೋಗುವ ಮೊದಲ 3 ಮಂದಿಯಲ್ಲಿ ನಿನ್ನ ಬಗ್ಗೆ ಕೇಳುತ್ತೇನೆ. ಅವರು ನಿನ್ನ ಬಗ್ಗೆ ಏನು ಹೇಳುತ್ತಾರೆ ಎಂದು ನೋಡಿ ನಿನ್ನನ್ನು ಬಿಡಬೇಕೋ, ಶಿಕ್ಷಿಸಬೇಕೋ ಎಂದು ನಿರ್ಧರಿಸುತ್ತೇನೆ’ ಎನ್ನುತ್ತಾನೆ. ಅದಕ್ಕೆ ವ್ಯಾಪಾರಿ ಒಪ್ಪುತ್ತಾನೆ.
ಅಷ್ಟರಲ್ಲಿ ಆ ದಾರಿಯಲ್ಲಿ ಅಜ್ಜನೊಬ್ಬ ಬರುತ್ತಾನೆ. ಅವನನ್ನು ತಡೆದು ನಿಲ್ಲಿಸುವ ರಾಕ್ಷಸ, “ನಿನಗೆ ಈ ವ್ಯಾಪಾರಿಯ ಬಗ್ಗೆ ಏನಾದರೂ ಗೊತ್ತಿದೆಯೇ’ ಎಂದು ಕೇಳುತ್ತಾನೆ. ಅದಕ್ಕೆ ಅಜ್ಜ, “ಓ, ಈತ ತುಂಬಾ ಒಳ್ಳೆಯವನು. ನನ್ನ ಮೇಲೆ ದರೋಡೆಕೋರರು ದಾಳಿ ನಡೆಸಿದ್ದಾಗ ನನ್ನನ್ನು ರಕ್ಷಿಸಿದ್ದು ಇವನೇ’ ಎನ್ನುತ್ತಾನೆ. ರಾಕ್ಷಸ ಆ ಅಜ್ಜನನ್ನು ಕಳಿಸಿ, ಎರಡನೇ ವ್ಯಕ್ತಿಯ ಬರುವಿಕೆಗೆ ಕಾಯುತ್ತಾನೆ. ಆಗ ಅಲ್ಲಿಗೆ ನ್ಯಾಯಾಧೀಶರೊಬ್ಬರು ಬರುತ್ತಾರೆ. ಅವರಲ್ಲಿ ವ್ಯಾಪಾರಿ ಬಗ್ಗೆ ಕೇಳಿದಾಗ, “ವ್ಯಾಪಾರದಲ್ಲಿ ಮೋಸ ಮಾಡಿದ ವ್ಯಕ್ತಿಯೊಬ್ಬನನ್ನು ಈ ವ್ಯಾಪಾರಿ ನನ್ನ ಮುಂದೆ ಕರೆತಂದಿದ್ದ. ನಾನು ಅವನಿಗೆ ಶಿಕ್ಷೆ ಘೋಷಿಸಿದ್ದೆ. ಆದರೆ, ಈತ ಆ ವ್ಯಾಪಾರಿಯನ್ನು ಕ್ಷಮಿಸಿ, ಶಿಕ್ಷೆಯಾಗದಂತೆ ತಡೆದಿದ್ದ,’ ಎನ್ನುತ್ತಾರೆ. ಅವರನ್ನೂ ರಾಕ್ಷಸ ಕಳುಹಿಸುತ್ತಾನೆ. ಆ ದಾರಿಯಲ್ಲಿ ಬರುವ ಮೂರನೇ ವ್ಯಕ್ತಿ ದೊಡ್ಡ ಶ್ರೀಮಂತ. ಇವನಲ್ಲೂ ರಾಕ್ಷಸ ಅದೇ ಪ್ರಶ್ನೆ ಕೇಳುತ್ತಾನೆ. ಅದಕ್ಕೆ ಆ ಶ್ರೀಮಂತ, “ಓ… ಈತನೇ? ನನಗೆ ಚೆನ್ನಾಗಿ ಗೊತ್ತು. ನಾನು ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಕಷ್ಟಕಾಲದಲ್ಲಿದ್ದಾಗ ನನಗೆ ಸ್ವಲ್ಪ ಹಣಕಾಸು ನೆರವು ನೀಡಿದ್ದು ಇವನೇ. ಇವನಿಂದಾಗಿ ನಾನೀಗ ವ್ಯಾಪಾರದಲ್ಲಿ ಸುಧಾರಿಸಿ, ದೊಡ್ಡ ಶ್ರೀಮಂತನಾಗಿದ್ದೇನೆ,’ ಎಂದು ಹೇಳುತ್ತಾ ಕೈ ಮುಗಿಯುತ್ತಾನೆ. ಇದನ್ನು ಕೇಳುತ್ತಿದ್ದಂತೆ ರಾಕ್ಷಸನ ಮನಸ್ಸು ಕರಗುತ್ತದೆ. “ಇಂಥಾ ಒಳ್ಳೆಯ ಮನಸ್ಸು ಇರುವವನನ್ನು ಕೊಲ್ಲುವುದು ಸರಿಯಲ್ಲ’ ಎಂದು ನಿರ್ಧರಿಸಿ, ವ್ಯಾಪಾರಿಗೆ ಜೀವದಾನ ನೀಡಿ ವಾಪಸ್ ಕಳುಹಿಸುತ್ತಾನೆ.
– ಹಲೀಮತ್ ಸ ಅದಿಯ