Advertisement

ಮಹಾರಾಜರು ಕೊಟ್ಟ ಆಡಳಿತವೇ ನಿಜವಾದ ಪ್ರಜಾಪ್ರಭುತ್ವ

09:09 PM Feb 15, 2020 | Lakshmi GovindaRaj |

ಮೈಸೂರು: ಮೈಸೂರು ಸಂಸ್ಥಾನದಲ್ಲಿ ರಾಜಪ್ರಭುತ್ವದೊಳಗೆ ಪ್ರಜಾಪ್ರಭುತ್ವ ಇದ್ದರೆ, ಇಂದು ಪ್ರಜಾಪ್ರಭುತ್ವದೊಳಗೆ ರಾಜಪ್ರಭುತ್ವ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರ ಮತ್ತು ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠ, ಪುರಾತತ್ವ , ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮತ್ತು ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿರುವ ಶ್ರೀ ಜಯಚಾಮರಾಜ ಒಡೆಯರ್‌ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮನ್ನು ಕಾಪಾಡಿದ ಮಹಾರಾಜರು: ಬ್ರಿಟಿಷರ ಕರಾಳ ಆಳ್ವಿಕೆಯ ಸೋಂಕು ತಗುಲದಂತೆ ಮೈಸೂರು ಮಹಾರಾಜರು ನಮ್ಮನ್ನು ಕಾಪಾಡಿದ್ದಾರೆ. ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸಿದ ರಾಜರ ಆಳ್ವಿಕೆಯಲ್ಲಿ ನಾವಿದ್ದೆವು. ಹೀಗಾಗಿ ಮೈಸೂರು ಸಂಸ್ಥಾನದಲ್ಲಿ ಹುಟ್ಟಿರುವ ನಾವು ಸೌಭಾಗ್ಯವಂತರು ಎಂದರು.

ನಿಜವಾದ ಪ್ರಜಾಪ್ರಭುತ್ವ: ಇದು ಪ್ರಜಾಪ್ರಭುತ್ವದ ಕಾಲ, ಅಂದಿನ ಮಹಾರಾಜರ ರಾಜಪ್ರಭುತ್ವದಲ್ಲಿ ರಾಜರ ಬಗ್ಗೆ ಪ್ರಜೆಗಳಿಗೆ ಗೌರವ ಇತ್ತು. ರಾಜರಿಗೆ ಪ್ರಜೆಗಳ ಬಗ್ಗೆ ಪ್ರೀತಿ ಇತ್ತು. ಅದು ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವ ಇದ್ದ ಕಾಲ. ಆದರೆ, ಈಗ ಪ್ರಜಾಪ್ರಭುತ್ವದಲ್ಲೂ ರಾಜಪ್ರಭುತ್ವವಿದೆ. ಮೈಸೂರು ಮಹಾರಾಜರು ಕೊಟ್ಟ ಆಡಳಿತವೇ ನಿಜವಾದ ಪ್ರಜಾಪ್ರಭುತ್ವ ಎಂದು ಹೇಳಿದರು.

ಹೆಮ್ಮೆಯ ಸಂಗತಿ: ಮೈಸೂರು ಮಹಾರಾಜರು ಸಂಸ್ಥಾನವನ್ನು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿಸಿದ್ದಾರೆ. ಇಂದು ಎಲ್ಲಕ್ಕೂ ಪೇಟೆಂಟ್‌, ಬ್ರಾಂಡಿಂಗ್‌ನಂತಹ ವ್ಯಾಪಾರೀಯುಗದಲ್ಲಿದ್ದೇವೆ. ಅವತ್ತಿನ ಕಾಲದಲ್ಲೇ ಮಹಾರಾಜರು ಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡಿಂಗ್‌ ಮಾಡಿದ್ದರು. ಅದಕ್ಕಿಂತ ಹೆಮ್ಮೆಯ ಸಂಗತಿ ಇನ್ನೇನು ಬೇಕು ಎಂದರು.

Advertisement

ಒಕ್ಕೂಟ ವ್ಯವಸ್ಥೆಗೆ ವಿಲೀನ: ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಕಿಕೊಟ್ಟ ಮಾರ್ಗವನ್ನು ಜಯಚಾಮರಾಜ ಒಡೆಯರ್‌ ಚಾಚೂ ತಪ್ಪದೇ ಪಾಲಿಸಿದ್ದಾರೆ. ತಲೆತಲಾಂತರದಿಂದ ಬಂದ 600 ವರ್ಷಗಳ ಇತಿಹಾಸವಿರುವ ಸಿಂಹಾಸನವನ್ನು ಆಲೋಚನೆ ಮಾಡದೇ ಬಿಟ್ಟುಕೊಟ್ಟು, ಮೈಸೂರು ಸಂಸ್ಥಾನವನ್ನು ಒಕ್ಕೂಟ ವ್ಯವಸ್ಥೆಗೆ ವಿಲೀನಮಾಡಿದರು. ಮೈಸೂರು ಸಂಸ್ಥಾನ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನವಾಗದೆ ರಾಜಪ್ರಭುತ್ವವೇ ಮುಂದುವರಿದಿದ್ದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದುತ್ತಿತ್ತು ಎಂದು ಹೇಳಿದರು.

ಮಹಾರಾಜರಲ್ಲಿ ದೂರದೃಷ್ಟಿತ್ವ, ಪ್ರಾಮಾಣಿಕತೆ ಇತ್ತು. ಇಂದು ದೂರದೃಷ್ಟಿತ್ವ ಇಲ್ಲದಂತಾಗಿದ್ದು, ಚುನಾವಣೆಗಳಲ್ಲಿ ಹಣ ಮತ್ತು ಜಾತಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ಜಿಜ್ಞಾಸೆಯಲ್ಲಿದ್ದೇವೆ ಎಂದು ವಿಷಾದಿಸಿದರು.

ಪ್ರಾಮುಖ್ಯತೆ ಸಿಕ್ಕಿಲ್ಲ: ಸ್ವತಂತ್ರ ಭಾರತದ ಇತಿಹಾಸದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸೇರಿದಂತೆ ಬಹಳಷ್ಟು ಮಂದಿಗೆ ಪ್ರಾಮುಖ್ಯತೆ ಸಿಕ್ಕಿಲ್ಲ. ಇತಿಹಾಸ ಕೂಡ ಮಾರುಕಟ್ಟೆಯ ಸರಕಾಗಿದೆ. ಸಾಧನೆಗಳ ಬದಲು ಜಾತಿಯ ಬಲದಲ್ಲಿ ಇತಿಹಾಸವನ್ನು ಅವಲೋಕಿಸಲಾಗುತ್ತಿದೆ. ಮತಬ್ಯಾಂಕ್‌ಗಾಗಿ ಕೆಲವರ ಜಯಂತಿಯನ್ನು ಆಚರಿಸುವ ಸ್ಥಿತಿಗೆ ತಲುಪಿದ್ದೇವೆ ಎಂದರು.

ಹಲವು ಪ್ರಥಮಗಳಿಗೆ ಕಾರಣೀಭೂತ: ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ನೀರಾವರಿ ಯೋಜನೆಗಳ ಅನುಷ್ಠಾನ, ಕೈಗಾರಿಕಾಭಿವೃದ್ಧಿ, ಮೀಸಲಾತಿ ಜಾರಿ ಸೇರಿದಂತೆ ಹಲವು ಪ್ರಥಮಗಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾರಣೀಭೂತರಾಗಿದ್ದಾರೆ. ಜಯಚಾಮರಾಜ ಒಡೆಯರ್‌ ಅವರು ತಮ್ಮ ಎಂಟು ವರ್ಷಗಳ ಆಳ್ವಿಕೆಯಲ್ಲಿ ಮಾಡಿದ ಸಾಧನೆಯನ್ನು ಇಂದಿನ ವ್ಯವಸ್ಥೆಯಲ್ಲಿ ಆಳುವವರಿಗೆ 15 ವರ್ಷ ಕಾಲಾವಕಾಶ ಕೊಟ್ಟರು ಸಾಧಿಸಲಾಗುವುದಿಲ್ಲ ಎಂದರು.

ನಿರೀಕ್ಷೆಗೂ ಮೀರಿದ ಸಾಧನೆ: ನಾಲ್ವಡಿ ಕೃಷ್ಣರಾಜ ಒಡೆಯರ್‌ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. ಆದರೆ, ಅವರ ಜಯಂತಿಯನ್ನೂ ಅದ್ಧೂರಿಯಾಗಿ ಆಚರಿಸಲು ಯಾರೂ ಮುಂದೆ ಬರುವುದಿಲ್ಲ. ಕೇವಲ ಮತಬ್ಯಾಂಕ್‌ಗಾಗಿ ಹೈದರಾಲಿ, ಟಿಪ್ಪು ಜಯಂತಿಗಳನ್ನು ಮಾಡಲು ಉತ್ಸುಕತೆ ತೋರುತ್ತಾರೆ ಎಂದು ಕುಟುಕಿದರು.

ಪರಿಸರ ಸಂರಕ್ಷಣೆಗೆ ಒತ್ತು ನೀಡಿ: ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಜಯಚಾಮರಾಜ ಒಡೆಯರ್‌ ಅವರ ಆದರ್ಶಗಳನ್ನು ಪಾಲಿಸುವುದೇ ಅವರನ್ನು ನಿಜವಾಗಿ ಸ್ಮರಿಸಿದಂತೆ ಎಂದರು. ಪರಿಸರದ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಭಾರತದ ಮೊಟ್ಟಮೊದಲ ವನ್ಯಜೀವಿ ಸಂರಕ್ಷಣಾ ಮಂಡಳಿ ಅಧ್ಯಕ್ಷರಾಗಿದ್ದರು ಎಂದು ಸ್ಮರಿಸಿದರು.

ಪರಿಸರ ಸಂರಕ್ಷಣೆಗೆ ಇಂದು ಒತ್ತು ನೀಡಬೇಕಿದೆ. ಮೈಸೂರು ನಗರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು ಸಮಸ್ಯೆಯಾಗಿದೆ. ಪ್ಲಾಸ್ಟಿಕ್‌ ಸಮಸ್ಯೆ ಅಗಾಧವಾಗಿ ಬೆಳೆಯುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆ ಮತ್ತು ಜೀವ ವೈವಿಧ್ಯತೆ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದರು.

ಆಶೀರ್ವಚನ ನೀಡಿದ ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್‌ ಸಂಸ್ಥೆ ವ್ಯಾಪಕವಾಗಿ ಬೆಳೆಯುವಲ್ಲಿ ಮಹಾರಾಜರ ಕೊಡುಗೆ ಅಪಾರವಿದೆ. ಜಯ ಚಾಮರಾಜ ಒಡೆಯರ್‌ ಮತ್ತು ರಾಜೇಂದ್ರ ಶ್ರೀಗಳಿಗಿದ್ದ ಬಾಂಧವ್ಯದಿಂದಾಗಿ ಶ್ರೀಮಠದಿಂದ ಜಯಚಾಮರಾಜ ಒಡೆಯರ್‌ರವರ ಜನ್ಮ ಶತಮಾನೋತ್ಸವ ಆಚರಿಸಲಾಗುತ್ತಿದೆ ಎಂದರು. ಮೈಸೂರು ಮಹಾನಗರಪಾಲಿಕೆ ಮೇಯರ್‌ ತಸ್ಲಿಮ್‌, ನಗರಪಾಲಿಕೆ ಸದಸ್ಯೆ ವೇದಾವತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next