ನಿಡಗುಂದಿ: ಪಟ್ಟಣದಲ್ಲಿ ಪ್ರಸ್ತುತ ಪ್ರತಿ ವಾರಕ್ಕೊಮ್ಮೆ ನಡೆಯುತ್ತಿರುವ ಶನಿವಾರದ ವಾರದ ಸಂತೆ ಸ್ಥಳವನ್ನು ಕೆಳಬಾಜು ಸ್ಥಳಾಂತರಿಸಿ, ಪಟ್ಟಣದ ಮೂಲ ಕಿರಾಣಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕೆಂಬ ಮನವಿ ಮೇರೆಗೆ ತಾಲೂಕಾಡಳಿತ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಸಭೆ ನಡೆಸಿತು.
ಪಪಂ ಸದಸ್ಯ ಶಿವಾನಂದ ಮುಚ್ಚಂಡಿ ಮಾತನಾಡಿ, ಈಗಿನ ಶನಿವಾರದ ಸಂತೆ ಸ್ಥಳವನ್ನು ರೇಣುಕಾ ಮೆಡಿಕಲ್ ಶಾಪ್‌ನಿಂದ ಬದಲು, ಮಹಾದೇವಪ್ಪನ ದೇವಸ್ಥಾನದ ಕೆಳ ಬಾಜುವಿನಿಂದ ಆರಂಭಿಸಬೇಕು. ಇದರಿಂದ ಸಂತೆ ವ್ಯಾಪ್ತಿ ಪಟ್ಟಣದ ಕೆಳಬಾಜು ವಿಸ್ತಾರವಾಗಲಿದೆ. ಹಲವು ದಶಕಗಳಿಂದ ಅಲ್ಲಿ ಕಿರಾಣಿ ನಡೆಸುತ್ತಿರುವ ಪಟ್ಟಣ ಮೂಲ ಕಿರಾಣಿ ವ್ಯಾಪಾರಸ್ಥರಿಗೂ ಇದರಿಂದ ಅನುಕೂಲವಾಗುತ್ತದೆ. ಮೊದಲು ವಾರದ ಸಂತೆ ಇದೇ ಭಾಗದಲ್ಲಿ ನಡೆಯುತ್ತಿತ್ತು. ಕಾಲಕ್ರಮೇಣ ಪಟ್ಟಣ ಬೆಳೆಯುತ್ತಿದ್ದಂತೆ ಅದು ಮೇಲ್ಭಾಗಕ್ಕೆ ಸ್ಥಳಾಂತರವಾಗಿದೆ ಎಂದರು.
ಸದ್ಯ ನಡೆಯುತ್ತಿರುವ ಶನಿವಾರದ ಸಂತೆಯಿಂದ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಚೇರಿಗೆ ಹೋಗಲು ಸಾರ್ವಜನಿಕರು ಪರದಾಡಬೇಕಾಗುತ್ತದೆ ಎಂದರು.
ತಹಶೀಲ್ದಾರ್ ಸತೀಶ ಕೂಡಲಗಿ ಹಾಗೂ ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಮಾತನಾಡಿ, ಸಭೆಗೆ ಹಾಜರಾಗುವಂತೆ ತರಕಾರಿ ವ್ಯಾಪಾರಸ್ಥರಿಗೂ ನೋಟಿಸ್ ನೀಡಲಾಗಿತ್ತು. ಅದರೆ ಅವರು ಯಾರೂ ಬಂದಿಲ್ಲ. ತರಕಾರಿ ವ್ಯಾಪಾರಸ್ಥರ ವಿಶ್ವಾಸ ಪಡೆದು ಶೀಘ್ರದಲ್ಲಿಯೇ ಮತ್ತೊಂದು ಸಭೆ ನಡೆಸಿ ಸಾಧಕ, ಬಾಧಕಗಳನ್ನು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳೋಣ ಎಂದರು.
ಪೊಲೀಸ್ ಇಲಾಖೆ ಹಾಗೂ ಪಪಂ ಸಿಬ್ಬಂದಿ ಸಹಕಾರ ಪಡೆದು ತರಕಾರಿ ವ್ಯಾಪಾರಸ್ಥರ ಮನವೊಲಿಸಿ ಸ್ಥಳಾಂತರ ಮಾಡೋಣ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಶಶಿಕಾಂತ ರೇವಡಿ, ಸಂಗಮೇಶ ರೂಡಗಿ, ಸದಾನಂದ ಯಾಳವಾರ, ಶಂಕರ ಶಿವಣಗಿ ಇನ್ನೀತರರು ಇದ್ದರು.