ನೆಲಮಂಗಲ: ತಾಲೂಕಿನ ಖಾಸಗಿ ಕಂಪನಿಗಳು ಕಡ್ಡಾಯವಾಗಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಬೇಕು ಎಂಬ ಆದೇಶ ಪಾಲಿಸದ ಕಂಪನಿಗಳ ವಿರುದ್ದ ಜಿಲ್ಲಾಧಿಕಾರಿ ಕರೀಗೌಡ ಕೆಂಡಮಂಡಲವಾಗಿ ನೋಟಿಸ್ ನೀಡುವಂತೆ ಆದೇಶ ನೀಡಿದ್ದಾರೆ. ಪಟ್ಟಣ ಸಮೀಪದ ವಿಶ್ವೇಶ್ವರಪುರದಲ್ಲಿರುವ ಟಿಬೆಟಿಯನ್ ವಸತಿ ನಿಲಯಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಂಪನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳೆ ನೀರು ಕೊಯ್ಲು ಕಡ್ಡಾಯ: ಅಂತರ್ಜಲದ ಸಂಪೂರ್ಣ ಕುಸಿದಿದೆ. ಮುಂದಿನ ದಿನಗಳಲ್ಲಿ ನೀರಿನ ತೊಂದರೆ ಎದುರಾಗಲಿದೆ. ಹೀಗಾಗಿ ಮಳೆ ನೀರು ಕೊಯ್ಲು ಅನಿವಾರ್ಯವಾಗಿದೆ. ಆದ್ದರಿಂದ ತಾಲೂಕಿನ ಎಲ್ಲಾ ಕಂಪನಿಗಳು, ಗೋಡೋನ್, ಪಾರ್ಮ್ ಹೌಸ್‌ಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹಣೆ ಮಾಡುವ ಮೂಲಕ ಅದೇ ನೀರನ್ನು ಕಂಪನಿಗಳಿಗೆ ಬಳಸಬೇಕು. ಸಮಾಜದಿಂದ ಅನುಕೂಲ ಪಡೆಯುವ ಕಂಪನಿಗಳು ಸಮಾಜಕ್ಕೆ ಕೊಡುಗೆ ನೀಡುವುದು ಅನಿವಾರ್ಯ. ಮಳೆನೀರು ಕೊಯ್ಲು ಮೂಲಕ ಪರಿಸರಕ್ಕೆ ಸಹಾಯ ಮಾಡಲಿ. ಈಗಾಗಲೇ ಮಳೆನೀರು ಕೊಯ್ಲು ಮಾಡುವಂತೆ ಕಂಪನಿಗಳ ಗಮನಕ್ಕೆ ತರಲಾಗಿದ್ದರೂ, ಆದೇಶ ಪಾಲಿಸದ ಕಂಪನಿಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದರು.
ಕಂಪನಿಗಳ ವಿರುದ್ಧ ಕೆಂಡಾ ಮಂಡಲ: ತಾಲೂಕಿನ ಖಾಸಗಿ ಕಂಪನಿಗಳಿಗೆ ನಾಲ್ಕು ಬಾರಿ ಮಳೆನೀರು ಕೊಯ್ಲು ಮಾಡುವಂತೆ ತಿಳಿಸಿದ್ದೇವೆ. ಆದರೂ ಕೆಲ ಕಂಪನಿಗಳು ಆದೇಶ ಪಾಲಿಸಿಲ್ಲ ಎಂಬುದು ತಿಳಿಯಿತು. ಇದರಿಂದಾಗಿ ಕೆಂಡಾಮಂಡಲವಾದ ಜಿಲ್ಲಾಧಿಕಾರಿ ಕರೀಗೌಡರು, ಆದೇಶ ಪಾಲಿಸದ ಕಂಪನಿಗಳಿಗೆ ತಕ್ಷಣ ನೋಟಿಸ್ ನೀಡುವಂತೆ ಆದೇಶ ನೀಡಿ ಸಭೆಯಿಂದ ಅರ್ಧಕ್ಕೆ ಹೊರನಡೆದರು.
ಅಧಿಕಾರಿಗಳು ಜೋಕರ್‌ಗಳೇ?: ಅಧಿಕಾರಿಗಳು ನಿಮಗೆ ಜೋಕರ್‌ಗಂತೆ ಕಾಣಿಸುತ್ತಾರೆಯೇ? ನಾಲ್ಕು ಬಾರಿ ಸೂಚಿಸಿದರೂ ಆದೇಶ ಪಾಲಿಸದೆ ಮತ್ತದೇ ತಪ್ಪು ಮಾಡಿದ್ದೀರಲ್ಲ ಎಂದು ಮಳೆ ನೀರು ಕೊಯ್ಲು ಅನುಷ್ಠಾನ ಗೊಳಿಸದ ಕಂಪನಿಗಳನ್ನು ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಜತೆಗೆ ನಿಯಮ ಪಾಲಿಸದ ಕಂಪನಿಗಳಿಗೆ ತಕ್ಷಣ ನೋಟಿಸ್ ನೀಡಿ, ಕಾನೂನಿನ ಪ್ರಕಾರ ಸೂಕ್ತ ಕ್ರಮಕೈಗೊಳ್ಳಲು ಆದೇಶ ನೀಡಿ ಸಭೆಯನ್ನು ಮಟಕುಗೊಳಿಸುತ್ತಿದ್ದಂತೆ ಕಂಪನಿ ಅಧಿಕಾರಿಗಳು ವಿಚಲಿತರಾದರು.
ರಾಜೀಯ ಪ್ರಶ್ನೆಯೇ ಇಲ್ಲ: ತಾಲೂಕಿನ ಖಾಸಗಿ ಕಂಪನಿಗಳು ಹಾಗೂ ಗೋಡಾನ್‌ಗಳು ಶೀಘ್ರವಾಗಿ ಮಳೆನೀರುಕೊಯ್ಲು ಪ್ರಾರಂಭಿಸುವಂತೆ ರಾಜಸ್ವನಿರೀಕ್ಷಕರು ಹಾಗೂ ಲೆಕ್ಕಾಧಿಕಾರಿಗಳ ಪರಿಶೀಲನೆ ನಡೆಸಿ ಮಾಹಿತಿ ತಿಳಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಅಂತರ್ಜಲ ಹೆಚ್ಚಿಸಿ ನೀರಿನ ಉಳಿತಾಯದ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಮಳೆನೀರು ಕೊಯ್ಲು ಯೋಜನೆ ಪ್ರಾರಂಭಿಸುವಂತೆ ಎಲ್ಲಾ ಕಂಪನಿ ಹಾಗೂ ಗೋಡಾನ್‌ಗಳಿಗೆ ತಿಳಿಸಲಾಗಿದೆ. ಇದರಲ್ಲಿ ರಾಜೀ ಪ್ರಶ್ನೆಯೇ ಇಲಜ. ಕಡ್ಡಾಯವಾಗಿ ಮಳೆ ನೀರು ಕೊಯ್ಲಿ ಮಾಡಬೇಕು ಎಂದು ಆಗ್ರಹಿಸಿದರು.
ಪುರಸಭೆಯಿಂದ ಮನವಿ: ಪಟ್ಟಣ ಪುರಸಭೆಯಲ್ಲಿ ಘನತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವ ವಾಹನಗಳ ಡ್ರೆçವರ್, ಹೆಲ್ಪರ್, ಯಂತ್ರೋಪಕರಣಗಳ ಆಪರೇಟರ್‌ಗಳನ್ನು ನೇಮಕಾತಿ ಮಾಡಲು ಆಡಳಿತಮಂಡಳಿ ರಚನೆಯಾಗದ ಹಿನ್ನಲೆ ನೇರ ಪಾವತಿ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ತಾಂತ್ರಿಕ ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿ ಕರೀಗೌರಲ್ಲಿ ಪುರಸಭೆ ನೂತನ ಸದಸ್ಯರು ಮನವಿ ಸಲ್ಲಿಸಿದರು.
ತಹಶೀಲ್ದಾರ್ ಕೆ.ಎನ್.ರಾಜಶೇಖರ್, ಪರಿಸರ ಅಧಿಕಾರಿ ರಮೇಶ್, ರಾಜಸ್ವ ನಿರೀಕ್ಷಕರು, ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು, 40ಕ್ಕೂ ಹೆಚ್ಚು ಕಂಪನಿಯ ವಿವಿಧ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು.