ಗೌರಿಬಿದನೂರು: ಕಳೆದ ಜನವರಿ ತಿಂಗಳಿನಿಂದ ಕುಡಿಯುವ ನೀರು, ದಿನ ಬಳಕೆಯ ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ಗೌರಿಬಿದನೂರು ನಗರ ವ್ಯಾಪ್ತಿಯ ಸದಾಶಿವ ಮತ್ತು ವಿಘ್ನೇಶ್ವರ ಬಡಾವಣೆಯ ನಿವಾಸಿಗಳು ಶನಿವಾರ ಕೊಳವೆ ಬಾವಿಗಳ ಮುಂದೆ ನಿಂತು ಪ್ರತಿಭಟಿಸಿದರು.
ಇಲ್ಲಿನ ವಾಸಿಗಳಾದ ಸುಮಲತಾ ಮಾತನಾಡಿ, ಕಳೆದ ಆರೇಳು ತಿಂಗಳಿನಿಂದ ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ನಗರಸಭೆ ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಕನಿಷ್ಟ ಒಂದು ವಾರ ಅಥವಾ 15ದಿನಗಳಿಗೊಮ್ಮೆ ನೀರು ಬಿಡಿ ಎಂದು ಹೇಳಿದ್ದರೂ ತಿಂಗಳಿಗೊಮ್ಮೆಯೂ ಬಿಡಲಿಲ್ಲ. ಈಗಾಗಲೇ 6 ತಿಂಗಳಿನಿಂದ 600 ರಿಂದ 800 ರೂ. ಪಾವತಿಸಿ ಖಾಸಗಿ ಟ್ಯಾಂಕರ್‌ಗಳಿಂದ ನೀರು ಕೊಂಡುಕೊಳ್ಳುತ್ತಿದ್ದೇವೆ ಎಂದರು.
ಇಲ್ಲಸಲ್ಲದ ಸಬೂಬು: ಸದಾಶಿವ ಬಡಾವಣೆಯಲ್ಲಿ 3 ಕೊಳವೆ ಬಾವಿಗಳಿದ್ದು, ಸಮರ್ಪಕವಾಗಿ ನೀರು ಬರುತ್ತಿದೆ. ಆದರೆ ನಮಗೆ ನೀರು ಬಿಡುತ್ತಿಲ್ಲ. ನಗರಸಭೆ ಸಿಬ್ಬಂದಿಯನ್ನು ಕೇಳಿದರೆ ವಿದ್ಯುತ್ ಸಂಪರ್ಕವಿಲ್ಲ, ಪಂಪ್ ಅಳವಡಿಸಿಲ್ಲ, ಬೋರ್‌ವೆಲ್ ಕೆಟ್ಟಿದೆ. ರಿಪೇರಿ ಆಗಬೇಕಿದೆ ಎಂಬ ಸಬೂಬುಗಳನ್ನು ಹೇಳುತ್ತಿದ್ದಾರೆ. ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿದ್ದರೂ ಸಹ ನೀರು ಬಿಡದೇ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವರ ಮಾತಿಗೂ ಬೆಲೆ ಇಲ್ಲ: ನಿವೃತ್ತ ಎಎಸ್‌ಐ ಮಲ್ಲಪ್ಪ ಮಾತನಾಡಿ, ಕಳೆದ ಜನವರಿಯಿಂದ ನಮಗೆ ನೀರು ಬಿಟ್ಟಿಲ್ಲ, ಮೂರು ಬೋರ್‌ವೆಲ್‌ಗಳಿದ್ದರೂ ಬಿಡುತ್ತಿಲ್ಲ. ಈ ಹಿಂದೆ ರಾಮಲಿಂಗೇಶ್ವರ ದೇವಾಲಯದ ಬಳಿ ಕೃಷಿ ಸಚಿವ ಶಿವಶಂಕರರೆಡ್ಡಿ ಅವರಿಗೆ ಮನವಿ ನೀಡಿದ್ದೆವು.
ಆಯುಕ್ತರಿಗೆ ಕರೆ ಮಾಡಿ ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದರೂ ನೀರಿನ ವ್ಯವಸ್ಥೆ ಮಾಡಲಾಗಿಲ್ಲ. ಈ ಬಡಾವಣೆಗಳು ಹಿಂದೆ ಗ್ರಾಮ ಪಂಚಾಯಿತಿಗೆ ಸೇರ್ಪಡೆಗೊಂಡಿತ್ತು. ಆಗ ಸಮರ್ಪಕವಾಗಿ ನೀರು ಬರುತ್ತಿತ್ತು. ಆದರೆ ನಗರಸಭೆಗೆ ಸೇರಿದ ನಂತರ ತೊಂದರೆಗೆ ಒಳಗಾಗಿದ್ದೇವೆ ಎಂದು ಅಳಲು ತೋಡಿಕೊಂಡರು.
ಹೋರಾಟ ನಿಲ್ಲಲ್ಲ: ಸ್ಥಳೀಯರಾದ ಅನಿತಾ ಮಾತನಾಡಿ, ನಮ್ಮ ಬಡಾವಣೆಯ ಬೋರ್‌ವೆಲ್‌ನಲ್ಲಿ ನೀರು ಬರುತ್ತಿದ್ದರೂ ನಮಗೆ ನೀರು ಬಿಡುತ್ತಿಲ್ಲ. ಅನಿವಾರ್ಯವಾಗಿ ನಾವು ಕೊಳವೆಬಾವಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ. ನಗರಸಭೆ ಸೂಕ್ತ ನೀರಿನ ವ್ಯವಸ್ಥೆ ಮಾಡದಿದ್ದರೆ ಜಿಲ್ಲಾಧಿಕಾರಿಗಳಿಗೆ ಹಾಗೂ ಕೃಷಿ ಸಚಿವರಿಗೆ ಮತ್ತೂಮ್ಮೆ ದೂರು ನೀಡುತ್ತೇವೆ. ನಮ್ಮ ಸಮಸ್ಯೆ ಇತ್ಯರ್ಥ ಆಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.