Advertisement

ಗೌರವ ಧನ ಹೆಚ್ಚಳಕ್ಕೆ ಆಗ್ರಹ

09:35 PM Jul 06, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ವೇತನ ನೀಡಬೇಕು, ಬಾಕಿ ಇರುವ 10 ತಿಂಗಳ ವೇತನ ಪಾವತಿ ಮಾಡುವುದು ಸೇರಿದಂತೆ ಕಾರ್ಯಕರ್ತರು ಎದುರಿಸುತ್ತಿರುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜು.18 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಎದುರು ಜಿಲ್ಲೆಯ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಪಕ್ಕದ ಆಂಧ್ರಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ವೇತನ ನಿಗದಿಪಡಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಕೇವಲ ಆಶಾ ಕಾರ್ಯಕರ್ತಯರನ್ನು ದುಡಿಸಿಕೊಂಡು ಶೋಷಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

12 ಸಾವಿರ ನಿಗದಿಗೆ ಆಗ್ರಹ: ದೇಶದಲ್ಲಿ ಮೊದಲ ಬಾರಿಗೆ ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ಸಂಬಳ ಕೊಟ್ಟ ರಾಜ್ಯ ಕರ್ನಾಟಕ. ಆದರೆ ಪ್ರಸ್ತುತ ದೇಶದಲ್ಲಿ ಆಶಾ ಕಾರ್ಯಕರ್ತೆಯರು ಕಡಿಮೆ ವೇತನ ಪಡೆಯುತ್ತಿದ್ದಾರೆ. ಸಂಸದರು, ಶಾಸಕರ ಸಂಬಳವನ್ನು ಪ್ರತಿ ವರ್ಷ ಹೆಚ್ಚಿಸಿಕೊಳ್ಳುವ ಸರ್ಕಾರಗಳು, ಆಶಾ ಕಾರ್ಯಕರ್ತೆಯರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಕಳೆದ 10 ತಿಂಗಳಿಂದ ವೇತನ ಇಲ್ಲದೇ ಆಶಾ ಕಾರ್ಯಕರ್ತೆಯರು ಪರದಾಡುತಿದ್ದಾರೆ. ರಾಜ್ಯದಲ್ಲಿ ಕನಿಷ್ಠ 12 ಸಾವಿರ ರೂ. ವೇತನ ನಿಗದಿಪಡಿಸಬೇಕು ಎಂದರು.

ಆಶಾ ವೇತನ ರದ್ಧತಿ ಮಾಡಿ: ಸರ್ಕಾರ ಹೊಸದಾಗಿ ವೇತನ ವಿಧಾನವನ್ನು ಬದಲಾವಣೆ ಮಾಡಿದ್ದು, ಯಾವುದೇ ಹೊಸ ವಿಧಾನ ಜಾರಿ ಮಾಡಬೇಕಾದರೆ ಪೂರ್ವ ತಯಾರಿ ಇರಬೇಕು. ಆದರೆ ತಯಾರಿ ಇಲ್ಲದೇ ಹೊಸ ವಿಧಾನದಲ್ಲಿ ವೇತನ ಜಾರಿಗೆ ಮುಂದಾಗಿರುವುದರಿಂದ ಬಡ ಆಶಾ ಕಾರ್ಯಕರ್ತೆಯರಿಗೆ ಹಲವು ತಿಂಗಳಿಂದ ವೇತನ ಇಲ್ಲದಾಗಿದೆ ಎಂದರು.

2, 3 ವರ್ಷದಿಂದ ಆಶಾ ಸಾಫ್ಟ್ ವೇತನ ಮಾದರಿಯಿಂದ ಆಶಾ ಕಾರ್ಯಕರ್ತರಿಗೆ ಸಾವಿರಾರು ರೂ. ಆರ್ಥಿಕ ನಷ್ಟ ಸಂಭವಿಸಿದೆ. ಆರ್‌ಎಸಿಎಚ್‌ ಪೋರ್ಟಲ್‌ಯಿಂದಾಗಿ ಎಂಸಿಟಿಎಸ್‌ ಸೇವೆಗಳಿಗೆ, ಆಶಾಗಳಿಗೆ ಕೆಲಸ ಮಾಡಿದಷ್ಟು ವೇತನ ನೀಡುತ್ತಿಲ್ಲ. ಬದಲಾಗಿ ವಾರ್ಷಿಕ 300 ರೂ. ಮಾತ್ರ ನೀಡಲಾಗುತ್ತಿದೆ ಎಂದು ದೂರಿದರು.

Advertisement

ಬೇಡಿಕೆಗಳೇನು?: ಆಶಾ ಕಾರ್ಯಕರ್ತೆಯರಿಗೆ ಸೂಕ್ತ ರಕ್ಷಣೆ ಸಿಗುವಂತಾಗಬೇಕು, ಕಿರುಕುಳ ತಪ್ಪಿಸಬೇಕು, ಸಮಾರಂಭ ಸೇರಿ ಇತರೆ ತುರ್ತು ಕಾರಣಗಳಿಗೆ ರಜೆ ಪಡೆಯಲು ಅವಕಾಶ ಒದಗಿಸಬೇಕು. ಹೆರಿಗೆ ರಜೆ, ನಿವೃತ್ತಿ ಹೊಂದುವ ಆಶಾಗಳಿಗೆ ಪಿಂಚಣಿ ನೀಡುವ ಜೊತೆಗೆ ನಿವೃತ್ತಿ ಪರಿಹಾರ ಒದಗಿಸಬೇಕು, ಸಾಮಾಜಿಕ ಸುರಕ್ಷಾ ಯೋಜನೆ ವ್ಯಾಪ್ತಿಯ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಜಾರಿಗೊಳಿಸಬೇಕು. ಜೊತೆಗೆ ವಿಮೆ ಕಂತನ್ನು ಸರ್ಕಾರವೇ ಭರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ನಾಗಲಕ್ಷ್ಮೀ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮಮತಾರೆಡ್ಡಿ, ಮಂಜುಳಾ, ಸರಸ್ವತಮ್ಮ, ಲಕ್ಷ್ಮೀ, ಶಾಂತಮ್ಮ, ಅನುಸೂಯಮ್ಮ, ಪಾರ್ವತಿ, ಸಂಘದ ಜಿಲ್ಲಾ ಸಲಹೆಗಾರ ಜಿ.ಹನುಮೇಶ್‌ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಆಸ್ಪತ್ರೆಗಳಲ್ಲಿ ವಿಶ್ರಾಂತಿ ಕೊಠಡಿ ಒದಗಿಸಿ: ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ವೇತನ ಜಮಾಗೊಳಿಸಬೇಕು. ಜಮೆಯಾಗುವ ಆಯಾ ತಿಂಗಳ ವೇತನವನ್ನು ಆಶಾ ಪಾಸ್‌ಬುಕ್‌ನಲ್ಲಿ ನಮೂದಿಸಲು ಕ್ರಮ ಕೈಗೊಳ್ಳಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯಕರ್ತೆಯರಿಗೆ ವಿಶ್ರಾಂತಿ ಕೊಠಡಿಗಳ ನಿರ್ಮಾಣ, ಪ್ರತಿ ಮೂರು ತಿಂಗಳಿಗೊಮ್ಮೆ ಆಶಾ ಕುಂದುಕೊರತೆ ನಿವಾರಣೆ ಸಭೆ ಆಯೋಜಿಸಬೇಕು. ಕೆಲವೆಡೆ ಆಶಾಗಳಿಗೆ ನಿಗದಿ ಪಡಿಸಿದ ಕೆಲಸಗಳನ್ನು ಹೊರತುಪಡಿಸಿ ಇತರೆ ಕೆಲಸಗಳನ್ನು ಮಾಡಿಸಿಕೊಳ್ಳುವ ಕ್ರಮವನ್ನು ಕೈ ಬಿಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next