Advertisement

ಸೇವೆಗೆ ತಕ್ಕ ಸಂಬಳ ನೀಡಲು ಒತ್ತಾಯಿಸಿ ಮೆರವಣಿಗೆ

05:46 PM Jul 18, 2022 | Team Udayavani |

ಶಹಾಪುರ: ಅಂಗನವಾಡಿ ನೌಕರರನ್ನು ಕಾಯಂ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಅಲ್ಲದೆ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದು, ಕೇಂದ್ರದ ವಿರುದ್ಧ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಸುನಂದ ಸರ್ಕಾರದ ವಿರುದ್ಧ ಕಿಡಿಕಾರಿದರು.

Advertisement

ನಗರದ ಟೌನ್‌ ಹಾಲ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ 4ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗನವಾಡಿ ನೌಕರರಿಗೆ ಕೂಡಲೇ ಪಿಂಚಣಿ ನೀಡುವ ವ್ಯವಸ್ಥೆ ಮಾಡಬೇಕು. ಮಹಿಳಾ ನೌಕರರಿಗೆ ರಕ್ಷಣೆ ಇಲ್ಲದಾಗಿದೆ. ಕೋಮು ವಿಷ ಬೀಜ ಬಿತ್ತುವ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿದೆ ಎಂದು ಆರೋಪಿಸಿದರು.

ಅಂಗನವಾಡಿ ನೌಕರರಿಂದ ಸರ್ಕಾರ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸೇವೆ ಪಡೆಯುತ್ತದೆ. ಆದರೆ ಸಮರ್ಪಕವಾಗಿ ತಿಂಗಳ ವೇತನ ನೀಡುತ್ತಿಲ್ಲ. ಸೇವೆ ಹೆಸರಿನಲ್ಲಿ ಅಂಗನವಾಡಿ ನೌಕರರನ್ನು ದುಡಿಸಿಕೊಂಡು ಶ್ರಮಕ್ಕೆ ತಕ್ಕ ಗೌರವವು ನೀಡುತ್ತಿಲ್ಲ. ಕೂಡಲೇ ಸರ್ಕಾರ ಇತ್ತ ಗಮನಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಅನಿವಾರ್ಯವಾಗಲಿದೆ. ಅದಕ್ಕೆ ಎಲ್ಲರೂ ಸಿದ್ಧರಾಗಿರಬೇಕೆಂದು ಕರೆ ನೀಡಿದರು.

ಸಂಘದ ರಾಜ್ಯ ಉಪಾಧ್ಯಕ್ಷೆ ಶಾಂತಾ ಗುಂಟೆ ಮಾತನಾಡಿ, ಮಕ್ಕಳಲ್ಲಿ ಉಂಟಾಗುವ ಅಪೌಷ್ಟಿಕತೆ ನಿವಾರಿಸುವಲ್ಲಿ ಮುತುವರ್ಜಿವಹಿಸಿ ಕೆಲಸ ಮಾಡುವ ಅಂಗನವಾಡಿ ನೌಕರರೇ ಇಂದು ಅಪೌಷ್ಟಿಕತೆಯಿಂದ ಬಳಲುವಂತಾಗಿದೆ. ಸರ್ಕಾರ ನೌಕರರ ಯೋಗಕ್ಷೇಮ ವಿಚಾರಿಸಬೇಕು. ಶ್ರಮಕ್ಕೆ ತಕ್ಕ ಸಂಬಳ ನೀಡಬೇಕೆಂದು ಆಗ್ರಹಿಸಿದರು.

Advertisement

ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿ, ಮಹಿಳೆಯರ ಹಕ್ಕು ದಮನ ಮಾಡಲು ಬಂಡವಾಳಶಾಹಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಮಹಿಳೆಯರ ಮೇಲಿನ ದಾಳಿ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕೆಲಸದಲ್ಲಿ ಕನಿಷ್ಟ ವೇತನ, ಭದ್ರತೆ ಸಿಗುತ್ತಿಲ್ಲ. ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದ್ದು, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಇದಕ್ಕೂ ಮುಂಚೆ ನಗರದ ಪ್ರಮುಖ ಬೀದಿಗಳ ಮೂಲಕ ಟೌನ್‌ ಹಾಲ್‌ವರೆಗೆ ಬೃಹತ್‌ ಮೆರವಣಿಗೆ ಜರುಗಿತು. ಸಂಘದ ಪ್ರಮುಖರಾದ ಸುರೇಖಾ ಕುಲಕರ್ಣಿ, ತಾಲೂಕು ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ, ಕಾರ್ಯದರ್ಶಿ ಯಮುನಮ್ಮ, ವಡಗೇರಾ ತಾಲೂಕು ಅಧ್ಯಕ್ಷೆ ಇಂದಿರಾ ಕೊಂಕಲ್‌, ಯಾದಗಿರಿ ತಾಲೂಕು ಅಧ್ಯಕ್ಷ ಅನೀತಾ ಹಿರೇಮಠ, ಖಜಾಂಚಿ ಕವಿತಾ, ಸುರಪುರ ತಾಲೂಕು ಅಧ್ಯಕ್ಷೆ ಬಸಮ್ಮ ಆಲಾಳ, ಖಜಾಂಚಿ ನಶಿಮಾ ಸೇರಿದಂತೆ ಅಕ್ಷರ ದಾಸೋಹ ನೌಕರ ಸಂಘದ ತಾಲೂಕು ಅಧ್ಯಕ್ಷ ಸುನಂದ ಹಿರೇಮಠ, ಕಾರ್ಯದರ್ಶಿ ಈರಮ್ಮ ಹೈಯಾಳಕರ್‌, ಖಜಾಂಚಿ ಮಂಜುಳ ಹೊಸಮನಿ, ಅರಣ್ಯ ಇಲಾಖೆ ನೌಕರ ಸಂಘದ ತಾಲೂಕು ಅಧ್ಯಕ್ಷ ಮರ್ಲಿಂಗಪ್ಪ ಮಕಾಶಿ, ಸುರಪುರ ಅಧ್ಯಕ್ಷ ದೂಲಾಸಾಬ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next