ದಾವಣಗೆರೆ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್. ಸುರೇಶ್‌ಕುಮಾರ್ ರಾಜೀನಾಮೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಜಯದೇವ ವೃತ್ತದಲ್ಲಿ ತಲುಪಿ, ಮಾನವ ಸರಪಳಿ ರಚಿಸಿ, ಎಸ್. ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾ ಶಂಕರ್ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.
ನ.26 ರಂದು ಸಂವಿಧಾನ ದಿನಾಚರಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ. ಕರಡು ಸಮಿತಿಯಲ್ಲಿನ 299 ಸದಸ್ಯರ ವರದಿ ಜೋಡಣೆ ಮಾಡಿದ್ದಾರೆ ಎಂಬ ಅಂಶ ಪ್ರಸ್ತಾಪಿಸಿರುವುದು ಅತ್ಯಂತ ಖಂಡನೀಯ. ಇದೊಂದು ದೇಶದ್ರೋಹಕ್ಕೆ ಸಮಾನ ಪ್ರಕರಣ. ಸುತ್ತೋಲೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡಬೇಕು. ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಆಯುಕ್ತ ಜಗದೀಶ್ ಅವರನ್ನು ಅಮಾನತುಪಡಿಸಿ, ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಚಿ.ನಾ. ರಾಮು ಎಂಬ ದಲಿತ ವಿರೋಧಿ ಮೀಸಲಾತಿ ನಿಲ್ಲಿಸಬೇಕು ಎಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಪೆರಿಯಾರ್ ಮತ್ತು ಅಂಬೇಡ್ಕರ್ ಇಬ್ಬರು ದೇಶದ್ರೋಹಿಗಳು ಎಂದು ಬಾಬಾ ರಾಮದೇವ್ ಹೇಳಿಕೆ ನೀಡಿರುವುದು ಖಂಡನೀಯ. ಇಬ್ಬರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ವಿಜಯಲಕ್ಷ್ಮಿ, ಕೋಗಲೂರು ಕುಮಾರ್, ಮಂಜು ಕುಂದುವಾಡ, ಜಿಗಳಿ ಹಾಲೇಶ್, ನಿಟ್ಟೂರು ಕೃಷ್ಣಪ್ಪ, ನಾಗರಾಜ್, ಪರಮೇಶ್ ಪುರದಾಳ್, ಗೋಪನಾಳ್ ಚಂದ್ರು, ಚೌಡಪ್ಪ, ಪ್ರದೀಪ್, ಬೇತೂರು ಹನುಮಂತ, ಮಹಾಂತೇಶ್ ಇತರರು ಇದ್ದರು.