ಕಲಬುರಗಿ: ಗ್ರಾಪಂ ಮಹಿಳಾ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಸುಗ್ರಾಮ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ- ಕರ್ನಾಟಕ ಪ್ರತಿಭಟನಾ ಪ್ರದರ್ಶನ ಮಾಡಿತು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ.
ಸಕಾಲದಲ್ಲಿ ಸಭೆ ನಡೆಸಲು ಕ್ರಮ ಕೈಗೊಳ್ಳುವಂತೆ, ಸದಸ್ಯೆಯರಿಗೆ ವಿವಿಧ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸುವಂತೆ, ಪಂಚಾಯಿತಿಗಳಲ್ಲಿ ಮಹಿಳಾ ಸದಸ್ಯೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸುವಂತೆ, ಸ್ಥಾಯಿ ಸಮಿತಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪಂಚಾಯಿತಿ ಸಭೆಯ ನಡಾವಳಿ, ಠರಾವು ಪ್ರತಿಗಳು ಎಲ್ಲ ಸದಸ್ಯರಿಗೂ ದೊರಕುವಂತೆ, ಭಂಕೂರ, ಲಾಡ್ಲಾಪುರ, ಮುಗುಳನಾಗಾವಿ, ಹರಸೂರ, ಕಿಣ್ಣಿಸಡಕ್, ಜೀವಣಗಿ, ನಾಗೂರ, ಬಬಲಾದ್ (ಐಕೆ), ಮರತೂರ, ಕಮರವಾಡಿ, ಭಾಗೋಡಿ, ರಾವೂರ, ಕರದಾಳ, ಹೊನಗುಂಟಾ ಸೇರಿ ಪಂಚಾಯಿತಿ ಸದಸ್ಯೆಯರಿಗೆ ಸಭಾ ಭತ್ಯೆ ದೊರೆಯುತ್ತಿಲ್ಲ. ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಈಗಾಗಲೇ ಕೃಷಿ ಕಾರ್ಯ ಚಟುವಟಿಕೆಗಳು ಮುಗಿದಿವೆ. ಕೂಡಲೇ ಕಾಮಗಾರಿ ಆರಂಭಿಸುವಂತೆ, ಸದಸ್ಯರಿಗೆ ನೀಡುವ ಗೌರವಧನವನ್ನು 500ರೂ.ಗಳಿಂದ 10,000ರೂ.ಗಳಿಗೆ ಹೆಚ್ಚಿಸಲಾಗಿದ್ದರೂ ನೀಡುತ್ತಿಲ್ಲ.
ಸೂಕ್ತ ಕ್ರಮ ಕೈಗೊಳ್ಳುವಂತೆ, ಅವಧಿ ಪೂರ್ಣಗೊಳಿಸಿದ ಸದಸ್ಯರಿಗೆ ಪಿಂಚಣಿ ಸೌಲಭ್ಯ ಒದಗಿಸುವಂತೆ, ಸದಸ್ಯರಿಗೆ ಉಚಿತ ಬಸ್ ಪಾಸ್ ಕಲ್ಪಿಸುವಂತೆ, ಪ್ರತಿಯೊಂದು ಶಾಲೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವಂತೆ, ಗ್ರಾಪಂ ಅಧ್ಯಕ್ಷರಿಗೆ ವಾಹನದ ವ್ಯವಸ್ಥೆ ಕಲ್ಪಿಸುವಂತೆ, ಪಂಚಾಯಿತಿಗಳಲ್ಲಿ ಖಾತೆ ಬದಲಾವಣೆಗೆ ಸಾರ್ವಜನಿಕರು ಪರದಾಡುತ್ತಿದ್ದು, ಸರಳೀಕರಿಸುವಂತೆ, ಆರೋಗ್ಯ ಉಪ ಕೇಂದ್ರಗಳಲ್ಲಿ ಸಿಬ್ಬಂದಿಗಳು ಅಲ್ಲಿಯೇ ಇದ್ದು ಸಮರ್ಪಕ ಸೇವೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.
ಸುಗ್ರಾಮ ಸಂಘಟನೆ ಜಿಲ್ಲಾಧ್ಯಕ್ಷೆ ಶ್ರೀಮತಿ ಪರವೀನ್ ಬೇಗಂ, ಅಕ್ಕಮಹಾದೇವಿ ಹರಸೂರ, ಸಂತೋಷಿ ಅರಳಗುಂಡಗಿ, ಹೀರಾಬಾಯಿ ಪವಾರ, ವಿಜಯಲಕ್ಷಿ ಎಸ್. ವಗ್ಗನ್, ಸವಿತಾ ಪಾಟೀಲ, ಗೌರಮ್ಮ ಯಮನಪ್ಪ ರಾವೂರ್, ಮಂಜುಳಾ ಶಿವಲಿಂಗ ರಾವೂರ್, ಶಾಂತಾ ತುಕಾರಾಮ ಪವಾರ, ನೀಲಾ ಶರಣಬಸಪ್ಪ, ಮಹಾದೇವಿ ರಾಜೇಂದ್ರ, ಮಹಾದೇವಿ ಸಾಹೇಬಗೌಡ, ರುದ್ರಮ್ಮ ಕಾಶೀನಾಥ, ಸಂಪೂರ್ಣಬಾಯಿ ದತ್ತು ಪಾಲ್ಗೊಂಡಿದ್ದರು.