Advertisement

ಪ್ರಾಥಮಿಕ ಶಾಲೆ ಭೌತಿಕವಾಗಿ ಆರಂಭಿಸಿ

10:13 PM Jul 11, 2021 | Team Udayavani |

ಕೊಪ್ಪಳ: ತಜ್ಞರ ಸಮಿತಿ ಶಿಫಾರಸಿನಂತೆ ರಾಜ್ಯದಲ್ಲಿ ಕೂಡಲೇ ಪ್ರಾಥಮಿಕ ಶಾಲೆಗಳನ್ನು ಭೌತಿಕವಾಗಿ ಆರಂಭಿಸಬೇಕು ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಕ್ಷೀರ ಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟ ಆರಂಭಿಸಬೇಕು ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಒತ್ತಾಯಿಸಿದ್ದಾರೆ.

Advertisement

ಅವರು ಶಾಲೆಗಳನ್ನು ಭೌತಿಕವಾಗಿ ಆರಂಭಿಸುವಂತೆ ಒತ್ತಾಯಿಸಿ ನಗರದಲ್ಲಿ ಶನಿವಾರ ಶಿಕ್ಷಕರ ಸಂಘದ ಪ್ರತಿನಿಧಿಗಳ ಜೊತೆ ಘೋಷಣೆ ಕೂಗಿ ಸುದ್ದಿಗಾರರ ಜೊತೆ ಮಾತನಾಡಿದರು.

ಈಗಾಗಲೇ ರಾಜ್ಯಾದ್ಯಂತ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿರುವುದು ಅತ್ಯಂತ ಸಂತೋಷದ ವಿಷಯ. ತಂತ್ರಜ್ಞಾನದ ಮೂಲಕ ಕೇವಲ ಶೇ. 30ರಿಂದ 35ರಷ್ಟು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಎಲ್ಲಾ ಮಕ್ಕಳಿಗೂ ಏಕ ರೂಪ ಶಿಕ್ಷಣ ದೊರೆಯಬೇಕಿದೆ. ಟಿವಿ, ರೇಡಿಯೋ, ಆನ್‌ಲೈನ್‌, ವಾಟ್ಸ್‌ ಆ್ಯಪ್‌, ಇನ್ನಿತರ ತಂತ್ರಜ್ಞಾನದ ಮೂಲಕ ನೀಡುವ ಶಿಕ್ಷಣ ಪ್ರಾಥಮಿಕ ಹಂತದ ನಂತರ ಮಕ್ಕಳಿಗೆ ಸೂಕ್ತವಾದರೂ ಅದರಲ್ಲಿಯೂ ತೊಂದರೆಗಳು ಆಗಿವೆ. ಆ ಕಾರಣಕ್ಕೆ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸಿ 1ರಿಂದ 2ನೇ ತರಗತಿಗೆ ಒಂದು ದಿನ, 3ರಿಂದ 4ನೇ ತರಗತಿಗಳಿಗೆ ಒಂದು ದಿನ, 5ರಿಂದ 6ನೇ ತರಗತಿಗಳಿಗೆ 2 ದಿನ, 7ರಿಂದ 8ನೇ ತರಗತಿಗಳಿಗೆ 2 ದಿನ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಳವಡಿಸಿ ಶಾಲೆಗಳನ್ನು ಪ್ರಾರಂಭಿಸಬೇಕು ಎಂದರು.

ಶಿಕ್ಷಕರು ಈ ಹಿಂದೆ ಇಲಾಖೆ ಹೇಳಿದ (ನಿಗದಿ  ಪಡಿಸಿದ) ಪಾಠಗಳನ್ನು ಬೆಳಗ್ಗೆ 9:45ರಿಂದ ಸಂಜೆ 4:30ರ ವರೆಗೆ ಕೆಲಸ ನಿರ್ವಹಿಸುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಶಾಲೆಯ ಮಕ್ಕಳ ಭವಿಷ್ಯದ ಹೊಣಿಗಾರಿಕೆ ನಮ್ಮ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಜವಾಬ್ದಾರಿಯಾಗಿದೆ. ಎಸ್‌ಡಿಎಂಸಿ ಸದಸ್ಯರು, ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಆಲೋಚಿಸಿ ಕ್ರಮ ಕೈಗೊಂಡು ಕೊವೀಡ್‌-19 ನಿಯಮದಂತೆ ತರಗತಿ ಪ್ರಾರಂಭಿಸಬೇಕು. ಶಿಕ್ಷಣ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕಾಗಿದ್ದು, ಅದನ್ನು ನೀಡುವುದು ನಮ್ಮೆಲರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿ ಕಾರಿಗಳು, ಶಿಕ್ಷಣ ಪ್ರೇಮಿಗಳು, ಎಲ್ಲ ಸಂಘ, ಸಂಸ್ಥೆಗಳ ಒಟ್ಟಾಗಿ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸೋಣ. ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ತಕ್ಷಣ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಬೇಕು. ಮಕ್ಕಳಿಗೆ ಕ್ಷೀರ ಭಾಗ್ಯ, ಮಧ್ಯಾಹ್ನದ ಬಿಸಿಯೂಟ ಶಾಲೆಗಳಲ್ಲೇ ಪ್ರಾರಂಭಿಸಬೇಕೆಂದು ಅವರು ಒತ್ತಾಯಿಸಿದರು.

ಶಿಕ್ಷಕರ ಸಂಘದ ಪ್ರತಿನಿಧಿ ಗಳಾದ ಶರಬಸವನಗೌಡ ಪಾಟೀಲ್‌, ಮಂಜುನಾಥ ಬಿ., ಬಸವರಾಜ ಕಮಲಾಪುರ, ಬಾಳಪ್ಪ ಕಾಳೆ, ಗವಿಸಿದ್ದಪ್ಪ ಕೇರಿ, ಪ್ರಭು ಕಿಡದಾಳ, ಪ್ರಾಣೇಶ ಪೂಜಾರ, ಹೊಳಿಬಸಯ್ಯ, ಸುಭಾಸರಡ್ಡಿ, ಬಿಇಒ ಉಮೇಶ ಪೂಜಾರ, ಪೂರ್ಣಿಮಾ ತುಪ್ಪದ, ಸುಮತಿ ಸಿ., ಶಿವಗ್ಯಾನಮ್ಮ, ವೆಂಕಟೇಶ ಗೌಡರ, ಸೋಮನಗೌಡ ಸೇರಿ ಇತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next