ಕುಂದಾಪುರ: ಅಯೋಧ್ಯೆಯ ಶ್ರೀರಾಮ ಮಂದಿರ ರಾಷ್ಟ್ರಕ್ಕೆ ಸಮರ್ಪಣೆಯಾಗುವ ಕಾಲ ಸನ್ನಿಹಿತವಾಗಿದೆ. ಈ ವೇಳೆ ದೇಶದ ಮೂಲೆ – ಮೂಲೆಗಳಿಂದ ಶ್ರೀರಾಮನ ದರ್ಶನಕ್ಕೆ ಭಕ್ತರಿಗೆ ಅನುಕೂಲವಾಗುವಂತೆ ವಿಮಾನ, ರೈಲು, ರಸ್ತೆಗಳ ಮೂಲಕ ಸಂಪರ್ಕಿಸುವ ಪ್ರಯತ್ನಗಳಾಗುತ್ತಿವೆ. ಅದೇ ರೀತಿ ಕರಾವಳಿ ಭಾಗವಾದ ಕುಂದಾಪುರದಿಂದಲೂ ಅಯೋಧ್ಯೆಗೆ ರೈಲು ಸಂಚಾರ ಆರಂಭಿಸುವಂತೆ ಕುಂದಾಪುರ ರೈಲು ಪ್ರಯಾಣಿಕರ ಸಮಿತಿಯು ಮತ್ತೆ ಆಗ್ರಹಿಸಿದೆ.
ಹಿಂದೂ ಪವಿತ್ರ ತಾಣಗಳಾದ ಪ್ರಯಾಗ, ಕಾಶಿ, ಅಯೋಧ್ಯೆ, ಹರಿದ್ವಾರ ಸೇರಿದಂತೆ ಎಲ್ಲ ತಾಣಗಳಿಗೂ ಕುಂದಾಪುರ ಮೂಲಕ ರೈಲು ಆರಂಭಿಸಿ ಎನ್ನುವ ಬೇಡಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಶ್ರೀರಾಮ ಮಂದಿರ ಲೋಕಾರ್ಪಣೆಯಾಗುವ ಹೊತ್ತಲ್ಲೇ ಮಂಗಳೂರು – ಉಡುಪಿ – ಕುಂದಾಪುರ ಮೂಲಕ ನೇರ ರೈಲು ಸೇವೆ ಆರಂಭಿಸಿ ಎಂದು ಕುಂದಾಪುರ ರೈಲ್ವೇ ಸಮಿತಿಯು ಕೊಂಕಣ ರೈಲ್ವೇ, ಉಡುಪಿ ಸಂಸದರು ಹಾಗೂ ರೈಲ್ವೇ ಸಚಿವರಿಗೆ ಮನವಿ ಮಾಡಿಕೊಂಡಿದೆ.
ಮಂಗಳೂರು ರೈಲು ನಿಲ್ದಾಣ ಮೇಲ್ದರ್ಜೆಗೆ ಏರುತ್ತಿದ್ದು, ಹೊಸ ರೈಲುಗಳನ್ನು ಆರಂಭಿಸಲು ಸರ್ವ ಸನ್ನದ್ಧವಾಗಿದೆ. ಕೊಂಕಣ ರೈಲ್ವೇ ಇದುವರೆಗೂ ಹೊಸ ರೈಲು ಆರಂಭಿಸಿ ಎನ್ನುವ ಮನವಿ ಈಡೇರಿಸದೇ ಇರಲು ಪ್ಲಾಟ್‌ಫಾರಂ ಸಮಸ್ಯೆ ಹೇಳುತ್ತಿದ್ದು, ಆ ಸಮಸ್ಯೆ ಈಗ ಪರಿಹಾರಗೊಂಡಿದೆ. ಹೀಗಾಗಿ ಅಯೋಧ್ಯೆಗೆ ನೇರ ರೈಲು ಆರಂಭಿಸಿ ಭಕ್ತರ ಭಾವನೆಗಳನ್ನು ಗೌರವಿಸುವಂತೆ ಸಮಿತಿ ಕೋರಿಕೊಂಡಿದೆ.
ಅಯೋಧ್ಯೆ – ಮಂಗಳೂರು ರೈಲು ಆರಂಭವಾದರೆ ಹಿಂದೂಗಳ ಪವಿತ್ರ ಸ್ಥಳಗಳಾದ ಕಾಶಿ, ಪ್ರಯಾಗ್ ಕೂಡ ಕುಂದಾಪುರದ ಜತೆ ಸಂಪರ್ಕಿಸಲ್ಪಡುತ್ತದೆ ಎಂದು ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಪ್ರಕಟನೆ ಮೂಲಕ ತಿಳಿಸಿದ್ದಾರೆ.