Advertisement

ಮೈಸೂರು-ಬೆಂಗಳೂರು ಹೆದ್ದಾರಿಗೆ ನಾಲ್ವಡಿ ಹೆಸರಿಡಲು ಆಗ್ರಹ

12:54 PM Jan 17, 2023 | Team Udayavani |

ಕನಕಪುರ: ಮೈಸೂರು-ಬೆಂಗಳೂರು ಹೆದ್ದಾರಿ ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರು ಇಡಬೇಕು ಎಂದು ದಮ್ಮ ದೀವಿಗೆ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಆಗ್ರಹಿಸಿದರು.

Advertisement

ನಗರದ ತಾಲೂಕು ಕಚೇರಿ ಆವರಣದಲ್ಲಿ ಜಯಕರ್ನಾಟಕ ಸಂಘಟನೆ ಮತ್ತು ಬಹುಜನ ಜಾಗೃತಿ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಗಳನ್ನು ಸರ್‌ ಎಂ.ವಿಶ್ವೇಶ್ವರಯ್ಯ ಅವರ ತಲೆಗೆ ಕಟ್ಟಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ಮೂಲೆಗುಂಪು ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಜಲಕಣ್ಣನ್ನು ಸದ್ಬಳಕೆ ಮಾಡಿಕೊಂಡು ಕನ್ನಂಬಾಡಿ ಕಟ್ಟೆ, ಗೋಪಾಲಸ್ವಾಮಿ ಜಲಾಶಯ, ತಿಪ್ಪಗೊಂಡನಹಳ್ಳಿ ಜಲಾಶಯ, ಚಿತ್ರದುರ್ಗದ ಮಾರಿ ಕಣಿವೆ ಡ್ಯಾಂ ಕಟ್ಟಿ ರೈತರ ಕೋಟ್ಯಂತರ ಎಕರೆ ಒಣ ಭೂಮಿಗೆ ನೀರು ಕಲ್ಪಿಸಿದ್ದಾರೆಂದರು.

ಕಾರ್ಖಾನೆ ಆರಂಭಿಸಿದರು: ಏಷ್ಯಾ ಖಂಡದ ಮೊಟ್ಟ ಮೊದಲ ಜಲವಿದ್ಯುತ್‌ ಯೋಜನೆ ಪ್ರಾರಂಭ ಮಾಡಿ ಕತ್ತಲಲ್ಲಿದ್ದವರಿಗೆ ಮೊಟ್ಟ ಮೊದಲು ಬೆಳಕನ್ನು ಕೊಟ್ಟ ಕೀರ್ತಿ ನಾಲ್ವಡಿ ಅವರದ್ದು. ಸಾವಿರಾರು ಶಾಲೆಗಳು, ಗ್ರಾಮ ನ್ಯಾಯಾಲಯ, ಪಂಚಾಯ್ತಿ, ದುಡಿಯುವ ಕೈಗಳಿಗೆ ಉದ್ಯೋಗ ಕೊಡಲು ಹಲವು ಕಾರ್ಖಾನೆಗಳನ್ನು ಸ್ಥಾಪಿಸಿದರು. ಜನರ ಆರೋಗ್ಯಕ್ಕಾಗಿ ಮೈಸೂರು ಮತ್ತು ಬೆಂಗಳೂರಿನಲ್ಲಿ ನೂರಾರು ಆಸ್ಪತ್ರೆ ಹೆಬ್ಟಾಳದಲ್ಲಿ ಕೃಷಿ ವಿವಿ, ತಮಿಳುನಾಡನ್ನು ಅವಲಂಬಿಸಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದಲ್ಲಿ 1916ನೇ ಇಸವಿಯಲ್ಲಿ ಮೈಸೂರು ವಿವಿ ಪ್ರಾರಂಭ ಮಾಡಿದ್ದಾರೆಂದರು. ರಾಜ್ಯದಲ್ಲಿ ಯಾರಾದರೂ ಡಿಗ್ರಿ ಪದವಿ ಪಡೆದವರು ಇದ್ದರೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರು ಹೇಳಬೇಕು. ಅವರ ಸ್ಮರಣೆ ಮಾಡಬೇಕು. ಆದರೆ, ಈ ಎಲ್ಲ ಸಾಧನೆಗಳನ್ನು ಕೊಡುಗೆಗಳನ್ನು ಸರ್‌ ಎಂ.ವಿಶೇಶ್ವರಯ್ಯ ಅವರ ಕೊಡುಗೆ ಎಂದು ಬಿಂಬಿಸಿ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಿದ್ದಾರೆಂದರು.

ದುರ್ದೈವ: ಸರ್‌ ಎಂ.ವಿಶ್ವೇಶ್ವರಯ್ಯನವರು ಎಲೆಕ್ಟ್ರಿಕಲ್‌ ಎಂಜಿನಿಯರ್‌ ಅಲ್ಲ. ಟೆಕ್ನಿಕಲ್‌ ಎಂಜಿನಿಯರ್‌ ಅಲ್ಲ. ಆದರೂ ಬೆಂಕಿಕಡ್ಡಿ ಕಾರ್ಖಾನೆಯಾದಿಯಾಗಿ ನೋಟು ಮುದ್ರಣ ಇಲಾಖೆಯಲ್ಲೂ ವಿಶ್ವೇಶ್ವರಯ್ಯ ಅವರ ಪುತ್ಥಳಿ ಫೋಟೋ ಇಟ್ಟು ಅವರನ್ನು ಅಳತೆಗೂ ಮೀರಿ ವೈಭವೀಕರಿಸಿದ್ದಾರೆ. ಇಡೀ ಸಮಾಜದ ವ್ಯವಸ್ಥೆಯನ್ನು ರೂಪಿಸಿದ ನಾಲ್ವಡಿ ಕೃಷ್ಣ ಕೃಷ್ಣರಾಜ ಒಡೆಯರ್‌ ಅವರೇ ನಿರ್ಮಾಣ ಮಾಡಿದ ರಸ್ತೆಗಳಿಗೆ ಅವರ ಹೆಸರನ್ನು ಇಡಿ ಎಂದು ಬೀದಿಗಿಳಿದು ಪ್ರತಿಭಟನೆ ಮಾಡುವ ದುಸ್ಥಿತಿ ಬಂದಿರುವುದು ದುರ್ದೈವ ಎಂದರು. ಅವಕಾಶ ಕೊಡಲ್ಲ: ಜಯ ಕರ್ನಾಟಕ ಸಂಘಟನೆ ಎ.ಪಿ.ಕೃಷ್ಣಪ್ಪ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ತಮ್ಮ ತನು ಮನ ಧನ ಸರ್ವಸ್ವವನ್ನೂ ಧಾರೆ ಎರೆದು ಇಡೀ ಸಮಾಜಕ್ಕೆ ಹಲವಾರು ಕೊಡುಗೆ ಕೊಟ್ಟಿದ್ದಾರೆ. ತಮ್ಮ ಪತ್ನಿಯ ಒಡವೆ ಅಡವಿಟ್ಟು ಕೆ.ಆರ್‌. ಎಸ್‌ ಜಲಾಶಯ ನಿರ್ಮಾಣ ಮಾಡಿದವರು. ಇಂತಹ ಮಹಾನ್‌ ನಾಯಕರ ಹೆಸರನ್ನು ಹೇಳಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಮೈಸೂರು ಬೆಂಗಳೂರು ಹೆದ್ದಾರಿ ರಸ್ತೆಗೆ ಕೆಲವು ರಾಜಕಾರಣಿಗಳ ಹೆಸರನ್ನು ಇಡಲು ಹೊರಟಿದ್ದಾರೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದರು.

ನಾಲ್ವಡಿಯವರಂತೆ ಸಮಾಜ ಸೇವೆಗೆ ಯಾವುದೇ ರಾಜಕಾರಣಿ ತೊಡಗಿಸಿಕೊಂಡವರಲ್ಲ. ಹಾಗಾಗಿ ಬೆಂಗಳೂರು -ಮೈಸೂರು ದಶಪಥ ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರನ್ನು ಇಡಬೇಕು ಎಂದು ಹೇಳಿದರು.

Advertisement

ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆ ವೀರೇಶ್‌, ರೈತ ಸಂಘದ ಮುಖಂಡ ಶ್ರೀನಿವಾಸ್‌, ರೈತ ಸಂಘದ ತಾಲೂಕು ಅಧ್ಯಕ್ಷ ಶಿವರಾಜು, ದಲಿತ ಮುಖಂಡ ನೀಲಿ ರಮೇಶ್‌, ಬರಡನಹಳ್ಳಿ ಕಿರಣ್‌, ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next