Advertisement

ಕೆದಿಂಜೆಯಲ್ಲಿ ತಂಗುದಾಣ ನಿರ್ಮಿಸಲು ಆಗ್ರಹ

11:31 AM Sep 20, 2022 | Team Udayavani |

ಬೆಳ್ಮಣ್‌: ಕಾರ್ಕಳ-ಪಡುಬಿದ್ರಿ ಹೆದ್ದಾರಿಯ ಮಂಜರಪಲ್ಕೆಯ ಕೆದಿಂಜೆಯಲ್ಲಿ ತಂಗುದಾಣವಿಲ್ಲದೆ ಪ್ರಯಾಣಿಕರು ಮಳೆ ಬಿಸಿಲಿನಿಂದ ಬಸವಳಿಯುತ್ತಿದ್ದು ಶೀಘ್ರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

Advertisement

ಬೋಳ-ಕಾಂತಾವರ-ಬೇಲಾಡಿ ಕಡೆಯಿಂದ ಕಾರ್ಕಳ, ಮಂಗಳೂರು, ಉಡುಪಿ ಕಡೆ ಪ್ರಯಾಣಿಸುವ ಜನ ಇಲ್ಲಿ ಬಸ್‌ಗಾಗಿ ಕಾಯುತ್ತಾರೆ. ಅಗತ್ಯವಾಗಿ ತಂಗುದಾಣ ಬೇಕಾಗಿದ್ದು ಬಹು ಕಾಲಗಳಿಂದ ಬೇಡಿಕೆ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಹಿಂದೆ ಕೆಡವಲಾಗಿತ್ತು

ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ ವಿಸ್ತರಣೆಯ ಸಂದರ್ಭ ಕೆಡವಲಾದ ಕೆದಿಂಜೆ ಮಂಜರಪಲ್ಕೆಯ ಪ್ರಯಾಣಿಕರ ತಂಗುದಾಣವನ್ನು ಮತ್ತೆ ನಿರ್ಮಿಸದೆ ಇರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಬೋಳ, ಬರಬೈಲು, ಕಾಂತಾವರ, ಬೇಲಾಡಿ, ವಂಜಾರಕಟ್ಟೆ, ಬೆಳುವಾಯಿ ಮಾರ್ಗವಾಗಿ ಮೂಡುಬಿದಿರೆ ಕಡೆಗೆ ಪ್ರಯಾಣಿಸುವ ಜನ ಬಸ್‌ ಪ್ರಯಾಣಕ್ಕಾಗಿ ಕಾಯಲು ಆಸರೆಯಿಲ್ಲದೆ ತೊಂದರೆಗೀಡಾಗಿದ್ದಾರೆ ಅಲ್ಲದೆ ಕೆದಿಂಜೆಯಿಂದ ಬೆಳ್ಮಣ್‌, ಪಡುಬಿದ್ರಿ, ಮಂಗಳೂರು ಕಡೆ ಪ್ರಯಾಣಿಸುವ ಪ್ರಯಾಣಿಕರು ರಸ್ತೆ ಬದಿ ಮಳೆ, ಬಿಸಿಲಿಗೆ ಮೈಯ್ಯೊಡ್ಡಿ ಬಸ್‌ಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಹಿಂದೆ ಬೋಳ ಹಾಗೂ ಬೆಳ್ಮಣ್‌ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಆಸರೆಯಾಗಿದ್ದ ಬಸ್‌ ತಂಗುದಾಣವನ್ನು ಹಲವು ವರ್ಷಗಳ ಹಿಂದೆ ಹೆದ್ದಾರಿ ವಿಸ್ತರಣೆಯ ಸಂದರ್ಭ ಕೆಡವಲಾಗಿದ್ದು ಇದರ ವಿರುದ್ಧ ದಿಕ್ಕಿನಲ್ಲಿ ಕಾರ್ಕಳ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಬಸ್ಸು ತಂಗುದಾಣವನ್ನು ಕೆಶಿಪ್‌ ನಿರ್ಮಿಸಿತ್ತು. ಆದರೆ ಬೋಳ, ಕಾಂತಾವರ ಹಾಗೂ ಬೆಳ್ಮಣ್‌ ಕಡೆ ಪ್ರಯಾಣಿಸುವ ಪ್ರಯಾಣಿಕರಿಗೆ ತಂಗುದಾಣವನ್ನು ನಿರ್ಮಿಸದೆ ಇದೀಗ ಪ್ರಯಾಣಿಕರಿಗೆ ಅಂಗಡಿ, ಬೇಕರಿ ಹಾಗೂ ಗೂಡಂಗಡಿಗಳೇ ಆಸರೆಯಾಗಿದೆ.

Advertisement

ಕಾರ್ಕಳ -ಪಡುಬಿದ್ರಿ ರಾಜ್ಯ ಹೆದ್ದಾರಿಯ‌ಲ್ಲಿ ಸುಮಾರು 32 ಸುಸಜ್ಜಿತ ಪ್ರಯಾಣಿಕರ ತಂಗುದಾಣ ಗಳನ್ನು ನಿರ್ಮಿಸಿರುವ ಕೆಶಿಪ್‌ ಸಂಸ್ಥೆಯವರು ಮಂಜರಪಲ್ಕೆಯಲ್ಲಿಯೂ ಒಂದು ಬಸ್‌ ತಂಗುದಾಣ ನಿರ್ಮಿಸಿಕೊಡಿ ಎನ್ನುವುದು ಜನರ ಬೇಡಿಕೆಯಾಗಿದೆ.

ಪ್ರಯಾಣಿಕರು ಹೆದ್ದಾರಿ ಪಕ್ಕದ ಬೇಕರಿ, ಅಂಗಡಿ ಹಾಗೂ ಮೆಡಿಕಲ್‌ಗ‌ಳ ಆಶ್ರಯ ಪಡೆಯುತ್ತಿದ್ದು ಇದರಿಂದ ಅಂಗಡಿಯವರಿಗೂ ವ್ಯಾಪಾರಕ್ಕೆ ತೊಂದರೆ ಉಂಟಾಗಿದೆ.

ಜಮೀನು ಸಮಸ್ಯೆ

ಹೆದ್ದಾರಿ ನಿರ್ಮಾಣದ ವೇಳೆಯಲ್ಲಿ ಹಿಂದೆ ಇದ್ದ ಪ್ರಯಾಣಿಕರ ತಂಗುದಾಣವನ್ನು ಸಂಪೂರ್ಣ ಕೆಡವಲಾಗಿತ್ತು. ಆದರೆ ಮತ್ತೆ ಅದೇ ಜಾಗದಲ್ಲಿ ತಂಗು ದಾಣವನ್ನು ನಿರ್ಮಿಸಲು ಖಾಸಗಿ ಜಾಗದ ಸಮಸ್ಯೆ ಎದುರಾಗಿದೆ. ಇದರಿಂದ ಸುತ್ತ ಮುತ್ತಲಲ್ಲಿ ಖಾಸಗಿ ಜಮೀನು ಇರುವುದರಿಂದ ಎಲ್ಲೂ ಕೂಡ ಸರಿಯಾದ ತಂಗುದಾಣವನ್ನು ನಿರ್ಮಿಸಲು ಇಲಾಖೆಯಾಗಲೀ ಸ್ಥಳೀಯಾಡಳಿತಕ್ಕಾಗಲೀ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಂದಳಿಕೆ ಗ್ರಾಮ ಪಂಚಾಯತ್‌ ಕೂಡ ಶ್ರಮಿಸಿದ್ದರೂ ಪ್ರಯೋಜನವಾಗಿಲ್ಲ.

ಬೆಳೆಯುತ್ತಿರುವ ಕೆದಿಂಜೆ ಜಂಕ್ಷನ್‌ನಲ್ಲಿ ಸೂಕ್ತ ಬಸ್‌ ತಂಗುದಾಣದ ಕೊರತೆಯನ್ನು ಇಲಾಖೆ ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಬಹು ವರ್ಷದ ಬೇಡಿಕೆ ಈಡೇರುವಲ್ಲಿ ಸ್ಥಳೀಯಾಡಳಿತ ಜತೆ ಖಾಸಗಿಯವರೂ ಕೈ ಜೋಡಿಸಬೇಕಾಗಿದೆ. ಬಿಸಿಲು ಮಳೆಯಿಂದ ಪ್ರಯಾಣಿಕರು ಆಸರೆಯನ್ನು ಪಡೆಯಲು ಕೂಡಲೇ ಕೆದಿಂಜೆಯಲ್ಲೊಂದು ತಂಗುದಾಣ ನಿರ್ಮಿಸು ವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಸ್ತೆ ಬದಿಯಲ್ಲಿ ಕಾಯಬೇಕು: ಇಲ್ಲಿ ಸುಸಜ್ಜಿತ ಬಸ್‌ ತಂಗುದಾಣದ ಅಗತ್ಯ ಇದೆ. ವಿದ್ಯಾರ್ಥಿಗಳು, ವೃದ್ಧರು, ಎಲ್ಲರೂ ಮಳೆ ಬಿಸಿಲಿಗೆ ರಸ್ತೆ ಬದಿಯಲ್ಲಿ ನಿಂತು ಬಸ್‌ಕಾಯುವಂತಾಗಿದೆ. ಮಕ್ಕಳು ಮಳೆ ಬರುವ ಸಂದರ್ಭ ಒದ್ದೆಯಾಗಿ ರಸ್ತೆ ಬದಿಯಲ್ಲೇ ನಿಂತು ಬಸ್‌ ಕಾಯುವಂತಾಗಿದೆ. –ಸಂತೋಷ್‌ ಬೋಳ, ಗ್ರಾಮಸ್ಥ

ಜಾಗದ ಸಮಸ್ಯೆ: ಇಲ್ಲಿ ಪ್ರಯಾಣಿಕರ ತಂಗುದಾಣದ ಆವಶ್ಯಕತೆಯಿದ್ದು ಹಲವಾರು ಬೇಡಿಕೆಗಳು ಬಂದಿವೆ. ಈ ಬಗ್ಗೆ ಹಲವು ಬಾರಿ ಪ್ರಯತ್ನಗಳು ನಡೆದರೂ ಇಲ್ಲಿ ಜಾಗದ ಸಮಸ್ಯೆಯಿಂದ ತಂಗುದಾಣ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿದೆ. ಖಾಸಗಿ ಜಮೀನಿನ ಮಾಲಕರು ಜಾಗ ಬಿಟ್ಟು ಕೊಟ್ಟಲ್ಲಿ ತಂಗುದಾಣವನ್ನು ನಿರ್ಮಿಸಲು ಪಂಚಾಯತ್‌ ಸಿದ್ದವಿದೆ.-ನಿತ್ಯಾನಂದ ಅಮೀನ್‌, ನಂದಳಿಕೆ ಗ್ರಾ.ಪಂ.ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next