Advertisement

ಗೃಹ ಮಂಡಳಿ ಸೈಟ್‌ಗಳಿಗೆ ಬೇಡಿಕೆ ವೃದ್ಧಿ

12:02 AM Oct 24, 2020 | mahesh |

ಬೆಂಗಳೂರು: ಎಲ್ಲರಿಗೂ ಸೂರು ನೀಡುವ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯದ ಬೇರೆ ನಗರ ಪಟ್ಟಣಗಳಿಂದ ಗೃಹ ಮಂಡಳಿ ಸೈಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಯೋಜನೆಗೆ ಜಮೀನು ಒದಗಿಸುವ ರೈತರಿಗೂ ಪಾಲು ನೀಡುವ ಯೋಜನೆ ಮಂಡಳಿಯದು. ಜಮೀನು ಒದಗಿಸುವ ರೈತರ ಪಾಲನ್ನು ಶೇ. 35ರಿಂದ ಶೇ.50ಕ್ಕೇರಿಸಲಾಗಿದೆ. ಹೀಗಾಗಿ ರೈತರೂ ಈ ಯೋಜನೆಗೆ ಜಮೀನು ಬಿಟ್ಟುಕೊಡಲು ಮುಂದೆ ಬರುತ್ತಿದ್ದಾರೆ.

Advertisement

ದೇಶಾದ್ಯಂತ ಕೊರೊನಾ ಮಾರು ಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರೂ ಗೃಹ ಮಂಡಳಿಯ ಯೋಜನೆಗಳಿಗೆ ನಿರೀಕ್ಷೆಯಂತೆ ಮುಂದುವರಿಯುತ್ತಿದ್ದು, ಗ್ರಾಹಕರಿಗೆ ನಿರೀಕ್ಷಿತ ಅವಧಿಯಲ್ಲಿಯೇ ಅಭಿವೃದ್ಧಿ ಪಡಿಸಿದ ನಿವೇಶನ ಒದಗಿಸಲು ಮಂಡಳಿ ಕಾರ್ಯಪ್ರವೃತ್ತವಾಗಿದೆ.

ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೃಹ ಮಂಡಳಿಯ ಯೋಜನೆಗಳನ್ನು ಆರಂಭಿಸಿದ್ದು, ಉಡುಪಿಯ ಕೊರಂಗ್ರಪಾಡಿಯಲ್ಲಿ 11 ಎಕರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ 92 ಎಕರೆ, ಬಳ್ಳಾರಿ ಜಿಲ್ಲೆಯಲ್ಲಿ 38 ಎಕರೆ, ಆನೇಕಲ್‌ನಲ್ಲಿ 176 ಎಕರೆ, ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 72 ಎಕರೆ, ನೆಲಮಂಗಲ ತಾಲೂಕಿನ ಮಾಚೋನಾಯಕನಹಳ್ಳಿ 106 ಎಕರೆ ಪ್ರದೇಶದಲ್ಲಿ ಗೃಹ ಮಂಡಳಿಯಿಂದ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 17 ಎಕರೆ, ಮೈಸೂರಿನಲ್ಲಿ 35 ಎಕರೆ, ಗದಗ ಜಿಲ್ಲೆಯಲ್ಲಿ 43 ಎಕರೆ, ಬೆಳಗಾವಿಯಲ್ಲಿ 11 ಎಕರೆ ಪ್ರದೇಶದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಗೃಹ ಮಂಡಳಿ ಸಿದ್ಧತೆ ಮಾಡಿಕೊಂಡಿದ್ದು ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾಗಿದೆ. ನಿವೇಶನ ಅಭಿವೃದ್ಧಿಪಡಿಸಲು 11 ತಿಂಗಳ ಕಾಲಾ ವಕಾಶ ನೀಡಲಾಗುತ್ತಿದ್ದು, ನಿಗದಿತ ಅವಧಿಯಲ್ಲಿಯೇ ಯೋಜನೆ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದೆ.

ಅವಧಿ ವಿಸ್ತರಣೆಗೆ ನಿರ್ದೇಶನ
ಈ ವರ್ಷದ ಫೆಬ್ರವರಿಯಲ್ಲಿ ಕಾರ್ಯಾರಂಭ ಮಾಡಿರುವ ಯೋಜನೆಗಳು ಆರಂಭಿಕ ಹಂತ ದಲ್ಲಿಯೇ ಲಾಕ್‌ಡೌನ್‌ನಿಂದ ಸುಮಾರು 2 ತಿಂಗಳು ಸ್ಥಗಿತ ಗೊಂಡಿದ್ದರಿಂದ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ನಿವೇಶನಗಳನ್ನು ಅಭಿವೃದ್ಧಿಪಡಿಸಲು ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಆರು ತಿಂಗಳು ಹೆಚ್ಚಿನ ಕಾಲಾವಕಾಶ ನೀಡಲು ಸರಕಾರ ಗೃಹ ಮಂಡಳಿಗೆ ಆದೇಶ ನೀಡಿದೆ.

Advertisement

ಹೊಸ ಯೋಜನೆಗಳಿಗೆ ಬೇಡಿಕೆ
ಗೃಹ ಮಂಡಳಿ ಅಭಿವೃದ್ಧಿಪಡಿಸುವ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ನಿವೇಶನಗಳಿಗೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ನಿವೇಶನಗಳು ದೊರೆಯುತ್ತಿವೆ ಎನ್ನುವ ನಂಬಿಕೆ ಹೆಚ್ಚಾಗಿರುವುದರಿಂದ ಇನ್ನಷ್ಟು ಜಿಲ್ಲೆಗಳ ತಾಲೂಕು ಪ್ರದೇಶಗಳಲ್ಲಿಯೂ ನಿವೇಶನ ಅಭಿ ವೃದ್ಧಿಪಡಿಸುವಂತೆ ಬೇಡಿಕೆ ಬರುತ್ತಿದೆ. ಈ ಕುರಿತು ಗೃಹ ಮಂಡಳಿ ಅಧಿಕಾರಿಗಳು ಆಯಾ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯವಾಗಿ ಲಭ್ಯವಿರುವ ಜಮೀನು ಹಾಗೂ ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಗೃಹ ಮಂಡಳಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ರೈತರೊಂದಿಗೆ ಹಂಚಿಕೆ
ಗೃಹ ಮಂಡಳಿ ರೈತರಿಂದ ಭೂಸ್ವಾಧೀನಪಡಿಸಿಕೊಳ್ಳದೆ ರೈತರನ್ನೇ ಯೋಜನೆಯ ಭಾಗವಾಗಿ ರೈತರಿಂದ ಒಪ್ಪಿಗೆ ಪಡೆದು ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಜಮೀನು ನೀಡಿದ ರೈತರು ಮತ್ತು ಗೃಹ ಮಂಡಳಿ ನಗರದ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿದ್ದರೆ 50:50 ಅನುಪಾತ ಹಾಗೂ ನಗರದ ಯೋಜನಾ ಪ್ರದೇಶದ ವ್ಯಾಪ್ತಿಯಿಂದ ಹೊರಗಿದ್ದರೆ 60:40 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ಹಂಚಿಕೆ ಮಾಡಿಕೊಳ್ಳುವುದರಿಂದ ರೈತರಿಂದ ಯಾವುದೇ ರೀತಿಯ ಕಾನೂನಾತ್ಮಕ ಅಡ್ಡಿಯುಂಟಾಗದು. ಹೀಗಾಗಿ ಗೃಹ ಮಂಡಳಿಯ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಕೊರೊನಾ ಸಂದರ್ಭದಲ್ಲೂ ಕೆಎಚ್‌ಬಿ ಸೈಟ್‌ಗಳ ಮಾರಾಟಕ್ಕೆ ಯಾವುದೇ ತೊಂದರೆಯಾಗಿಲ್ಲ. ಕೆಎಚ್‌ಬಿ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಇರುವುದರಿಂದ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ನಮ್ಮಲ್ಲಿ ಬೇಡಿಕೆ ಆಧಾರದಲ್ಲಿ ಸೈಟ್‌ ಅಭಿವೃದ್ಧಿಪಡಿಸುವುದರಿಂದ ಯಾವುದೇ ಅಕ್ರಮದ ಕಿರಿಕಿರಿ ಇರುವುದಿಲ್ಲ.
ಆರಗ ಜ್ಞಾನೇಂದ್ರ, ಗೃಹ ಮಂಡಳಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next