ಕಲಬುರಗಿ: ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿಸಲ್ಲಿಸಿ, ಕುಮಾರನಾಯಕ ವರದಿಯಂತೆ ವಾರ್ಷಿಕ ವಿಶೇಷ ಬಡ್ತಿಯನ್ನು ಮೂಲ ವೇತನದಿಂದ ಪ್ರತ್ಯೇಕಿಸಿ ವೈಯಕ್ತಿಕ ವೇತನವೆಂದು ಪರಿಗಣಿಸಿ ಹಿಂಬಾಗಿಲಿನ ಮೂಲಕ ವಾರ್ಷಿಕ
ಬಡ್ತಿಯನ್ನು ಕಡಿತಗೊಳಿಸುತ್ತಿರುವ ಕ್ರಮವನ್ನು ಕೂಡಲೇ ಕೈಬಿಟ್ಟು ಮೂಲವೇತನದೊಂದಿಗೆ ಮುಂದುವರಿಸಲು ಒತ್ತಾಯಿಸಿದರು.
ಪ್ರಾಥಮಿಕ ಶಾಲೆಯಿಂದ ಹಾಗೂ ನೇರ ನೇಮಕಾತಿ ಮೂಲಕ ಆಯ್ಕೆಯಾಗಿ ಪ್ರೌಢಶಾಲೆ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ 400ರೂ.ಗಳ ವಿಶೇಷ ಭತ್ಯೆ ಮಂಜೂರು ಮಾಡಿ ಆರನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಒಂದು ವಿಶೇಷ ವಾರ್ಷಿಕ ಬಡ್ತಿಯನ್ನು ಮಂಜೂರು ಮಾಡುವಂತೆ, ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲಾ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಅನುಪಾತವನ್ನು 70ಃ1ರ ಬದಲಾಗಿ 50ಃ1ರಂತೆ ನಿಗದಿಪಡಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುತ್ತಿದ್ದು, ಅನುಪಾತ ಬದಲಾಯಿಸುವವರೆಗೂ ಹೆಚ್ಚುವರಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಮುಂಬಡ್ತಿ ಹೊಂದಿದ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ಹಿಂದಿನ ವೃಂದದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಸ್ವಯಂ
ಚಾಲಿತ ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡುವಂತೆ, ಕಾಲ್ಪನಿಕ ವೇತನ ಬಡ್ತಿಗೆ ಸಂಬಂಧಿಸಿದಂತೆ ಬಸವರಾಜ ಹೊರಟ್ಟಿ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ, ಪ್ರೌಢ ಶಾಲಾ ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಹುದ್ದೆಗಳಿಗೆ
ಬೆಂಗಳೂರು, ಕಲಬುರಗಿ, ಧಾರವಾಡದ ಆಯುಕ್ತಾಲಯಗಳಲ್ಲಿ ಕೂಡಲೇ ಮುಂಬಡ್ತಿ ಕೊಡುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ನೀಡುವಂತೆ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಎಸ್. ಕಟ್ಟಿಮನಿ, ಕಾರ್ಯದರ್ಶಿ ವೈ.ಬಿ. ಗುಣಕಿ, ಖಜಾಂಚಿ ರಾಜಕುಮಾರ ಧುಮ್ಮನಸೂರ್ ಹಾಗೂ ಶಿಕ್ಷಕರು ಭಾಗವಹಿಸಿದ್ದರು.