ಕೋಲಾರ: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಪಾಧ್ಯಕ್ಷ ಹಾರೋಹಳ್ಳಿ ಎಚ್.ವೆಂಕಟೇಶಪ್ಪರಿಗೆ ಯಾವುದಾದರೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕರ್ನಾಟಕ ಮಾದಿಗ ದಂಡೋರ ಜಿಲ್ಲಾ ಸಮಿತಿ ಆಗ್ರಹಿಸಿದೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ದಂಡೋರ ಜಿಲ್ಲಾ ಸಮಿತಿ ಮುಖಂಡ ಸಾಹುಕಾರ್ ಶಂಕರಪ್ಪ ಇತರರು, ಎಚ್.ವೆಂಕಟೇಶಪ್ಪರಿಗೆ ಯಾವುದಾದರೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಹಾರೋಹಳ್ಳಿ ಎಚ್.ವೆಂಕಟೇಶಪ್ಪರಿಗೆ ನಿಗಮ ಮಂಡಳಿ ಜೊತೆಗೆ ಕೆಜಿಎಫ್ ಶಾಸಕಿ ರೂಪಕಲಾ, ವಿಧಾನ ಪರಿಷತ್ ಸದಸ್ಯರಾದ ಧರ್ಮಸೇನ, ಆರ್.ಬಿ.ತಿಮ್ಮಾಪುರ್‌ರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೂ ಮಾದಿಗ ಸಮಾಜದವರ ಮೇಲೆ ಕಳಕಳಿ ಇಲ್ಲದಿರುವುದು ಕಂಡು ಬರುತ್ತಿದೆ, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಮಾದಿಗ ಸಮಾಜದ ಮತ ಬ್ಯಾಂಕುಗಳಾಗಿ ಮಾಡಿಕೊಂಡಿದ್ದಾರೆಯೇ ಹೊರತು ಅಭಿವೃದ್ಧಿಯ ಹೆಸರಿನಲ್ಲಿ ವಂಚಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ದಲಿತರಲ್ಲೇ ಅತಿ ಹಿಂದುಳಿದ ಸಮಾಜಕ್ಕೆ ಸೇರಿದ ಮಾದಿಗ ಜನಾಂಗವನ್ನು ಕಡೆಗಣಿಸುತ್ತಿರುವುದು ಎದ್ದುಕಾಣುತ್ತಿದೆ. ಮಾದಿಗ ಸಮಾಜಕ್ಕೆ ಸಿಗಬೇಕಾದ ಎಂಎಲ್‌ಎ, ಎಂಎಲ್‌ಸಿ ಹಾಗೂ ನಿಗಮ ಮಂಡಳಿ ಸ್ಥಾನಮಾನಗಳು ಸಂಪೂರ್ಣವಾಗಿ ಕೈತಪ್ಪಿ ಹೋಗಿ ಪರಿಶಿಷ್ಟ ಜಾತಿಯ ಬೇರೆ ಸಮುದಾಯಗಳ ಪಾಲಾಗುತ್ತಿವೆ ಎಂದು ದೂರಿದರು.
ಹಾರೋಹಳ್ಳಿ ಎಚ್.ವೆಂಕಟೇಶಪ್ಪ ಮಾತನಾಡಿ, ತಾವು ಜೆಡಿಎಸ್‌ನ ನಿಷ್ಠಾವಂತರಾಗಿದ್ದು, ಹಿಂದೆಯೂ ಮುಖಂಡರು ಅನೇಕ ಹುದ್ದೆಗಳ ವಾಗ್ಧಾನ ಮಾಡಿದ್ದರು. ಈ ಬಾರಿ ಸಮ್ಮಿಶ್ರ ಸರಕಾರದಲ್ಲಿ ಅವಕಾಶ ಕಲ್ಪಿಸಬೇಕೆಂದರು. ಮುಖಂಡರಾದ ಪ್ರದೀಪ್‌ಕುಮಾರ್, ಚನ್ನಸಂಗ್ರ ವೆಂಕಟೇಶಪ್ಪ, ಜಯಚಂದ್ರ, ವಿ.ರಾಜೇಶ್, ಚಂಜಿಮಲೆ ನಾರಾಯಣಸ್ವಾಮಿ ಉಪಸ್ಥಿತರಿದ್ದರು.