Advertisement

ಬೆಂಗಳೂರಿನಿಂದಲೂ ಮೂಡೆಗೆ ಬೇಡಿಕೆ

10:01 AM Sep 02, 2018 | Team Udayavani |

ಬಜಪೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೂಡೆಗೆ ಭಾರೀ ಬೇಡಿಕೆ ಶುರುವಾಗಿದೆ. ಮೂಡೆ ತಯಾರಿ ಮಾಡುವವರ ಮನೆಗಳಲ್ಲಿ ಜನರು ನೇರವಾಗಿ ಬಂದು ಬುಕ್ಕಿಂಗ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಫೋನ್‌ ಕರೆ ಮಾಡಿ ಬುಕ್ಕಿಂಗ್‌ ಮಾಡುತ್ತಿದ್ದಾರೆ. ಇದರಿಂದ ಮೂಡೆ ಎಲೆ ಕಟ್ಟುವ ಮನೆಯವರೆಲ್ಲ ಇದರಲ್ಲಿ ಬ್ಯುಸಿಯಾಗಿದ್ದಾರೆ.

Advertisement

ಬಜಪೆ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮಳವೂರು ಗ್ರಾಮದ ನಿವಾಸಿ ಜಯಂತಿ 47 ವರ್ಷಗಳಿಂದ ಈ ವೃತ್ತಿ ಮಾಡುತ್ತಿದ್ದಾರೆ. 12ವರ್ಷದವರಿದ್ದಾಗ ಪಣಂಬೂರಿನಲ್ಲಿನ ತಾಯಿಯ ಮನೆಯಲ್ಲಿ ಮೂಡೆ ಮಾಡಲು ಕಲಿತ ಇವರು ಇಂದಿಗೂ ಈ ವೃತ್ತಿಯನ್ನು ಬಿಡಲಿಲ್ಲ. ಇದಕ್ಕೆ ಮೂಡೆಗೆ ಇರುವ ಬೇಡಿಕೆಯೇ ಕಾರಣ. ಮಂಗಳೂರು ಸೆಂಟ್ರಲ್‌ ಮಾರುಕಟ್ಟೆ, ಕಾರ್‌ಸ್ಟ್ರೀಟ್‌ನಲ್ಲಿ ಇವರ ಮೂಡೆಗೆ ಸದಾ ಬೇಡಿಕೆ ಇದೆ. ಬೆಂಗಳೂರಿಗೂ ಇವರ ಮೂಡೆಗಳು ವರ್ಷವಿಡೀ ಸರಬರಾಜಾಗುತ್ತಿವೆ.

ಮೂಡೆ ತಯಾರಕರಿಗೆ ತಟ್ಟಿತು ನೆರೆ ಬಾಧೆ
ಮರವೂರಿನ ನದಿ ಬದಿಯ ಪಟ್ಲ ಎಂಬಲ್ಲಿಂದ ಮೂಡೆಯ ಎಲೆಗಳನ್ನು ತರಲಾಗುತ್ತದೆ. ಆದರೆ ಈ ಬಾರಿ ನೆರೆ ಇದ್ದ ಕಾರಣ ಅಲ್ಲಿಂದ ಎಲೆ (ಒಳಿ) ತರಲು ಕಷ್ಟವಾಗಿದೆ. ಆದ್ದರಿಂದ ಈ ಬಾರಿ ಕೆಲವರು ಈ ಕಾಯಕ ಬಿಟ್ಟು ಸುಮ್ಮನಿದ್ದಾರೆ.

2 ವಾರಕ್ಕೂ ಮುನ್ನ ಸಿದ್ಧತೆ
ಅಷ್ಟಮಿಗೆ 15 ದಿನ ಮುಂಚೆ ಮೂಡೆಗೆ ಎಲೆ ತರಲು ಶುರುವಾಗುತ್ತದೆ. ನದಿಯ ಬದಿಯಲ್ಲಿ ಮುಳ್ಳು ಇರುವ ಮುಂಡೇವು ಅಥವಾ ಕೇದಗೆ ಜಾತಿಯ ಎಲೆ ಇದಕ್ಕೆ ಸೂಕ್ತವಾಗಿದೆ. ಇದು ಮೂಡೆಯನ್ನು ಪರಿಮಳಯುಕ್ತವಾಗಿ ಮಾಡುತ್ತದೆ. ಮನೆಗೆ ತಂದು ಎಲೆಯ ಎರಡೂ ಬದಿ ಮತ್ತು ಬೆನ್ನಲ್ಲಿದ್ದ ಮುಳ್ಳುಗಳನ್ನು ತೆಗೆಯಲಾಗುತ್ತದೆ. ಬಳಿಕ ಒಳಿಯನ್ನು ಬೆಂಕಿಯಲ್ಲಿ ಕಾಯಿಸಿ, ಹದಮಾಡಲಾಗುತ್ತದೆ. ಬಳಿಕ ವೃತ್ತಾಕಾರವಾಗಿ (ಚಂದ್ರಿಕೆ ) ಮಾಡಲಾಗುತ್ತದೆ.ಅಷ್ಟಮಿಗೆ ನಾಲ್ಕು ದಿನ ಇರುವಾಗ ಮೂಡೆ ತಯಾರಿಸಲು ಶುರು ಮಾಡಲಾಗುತ್ತದೆ.

ದರ ಹೆಚ್ಚಳ
ಕಳೆದ ಬಾರಿ ಒಂದು ಮೂಡೆಗೆ 10 ರೂ. ರಖಂ ದರವಿತ್ತು. ಈ ಬಾರಿ 12 ರೂ. ಮನೆಯಿಂದಲೇ ಕೊಂಡು ಹೋಗುತ್ತಿದ್ದಾರೆ. ಕಳೆದ ಬಾರಿ ಮಾರುಕಟ್ಟೆಯಲ್ಲಿ 6ಕ್ಕೆ 100 ರೂ.ದರವಿತ್ತು.

Advertisement

ವರ್ಷವಿಡೀ ಬೇಡಿಕೆ
ಗೃಹಪ್ರವೇಶ ಸಹಿತ ಸರ್ವ ಧರ್ಮಗಳ ಹಬ್ಬಗಳ ಸಮಯದಲ್ಲೂ ಮೂಡೆಗೆ ಭಾರೀ ಬೇಡಿಕೆ ಇದೆ ಎಂದು ಹೇಳುತ್ತಾರೆ ಜಯಂತಿ.

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next