Advertisement

ಸಮರ್ಪಕ ಬಿತ್ತನೆ ಬೀಜ-ರಸಗೊಬ್ಬರ ವಿತರಣೆಗೆ ಆಗ್ರಹ

01:19 PM Jun 07, 2022 | Team Udayavani |

ರಾಯಚೂರು: ರೈತರಿಗೆ ಸಮರ್ಪಕ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಮೂಲಕ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಅಖೀಲ ಭಾರತ ಕಿಸಾನ್‌ ಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರಸಕ್ತ ಮುಂಗಾರು ಹಂಗಾಮು ಆರಂಭಗೊಂಡಿದ್ದು, ಸರ್ಕಾರ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸೇರಿದಂತೆ ಇನ್ನಿತರ ಅವಶ್ಯಕತೆಗಳನ್ನು ಕಲ್ಪಿಸುದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಪ್ರತಿ ಮಳೆಗಾಲದಲ್ಲಿ ರೈತರ ಬೇಡಿಕೆಗೆ ಸ್ಪಂದಿಸಬೇಕಾದ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಕೃಷಿ ಮತ್ತು ಕೃಷಿಕರನ್ನು ಸಂಪೂರ್ಣವಾಗಿ ಸರ್ಕಾರ ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ವಿರೋಧಿ ಮೂರು ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತ ಹೋರಾಟಕ್ಕೆ ಮಣಿದು ಕರಾಳ ಕಾನೂನುಗಳನ್ನು ಹಿಂಪಡೆದು ಸಂದರ್ಭದಲ್ಲಿ ರೈತ ಸಂಘಟನೆಗಳಿಗೆ ಮೋದಿ ಸರ್ಕಾರ ನೀಡಿದ ಎಲ್ಲ ಭರವಸೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರವು ಕರಾಳ ಕೃಷಿ ಕಾನೂನು ಮತ್ತು ಸಂಬಂಧಿತ ತಿದ್ದುಪಡಿಗಳನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಸ್ಪಷ್ಟ ಕಾನೂನು ರೂಪಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

Advertisement

ಪ್ರತಿ ಕ್ವಿಂಟಲ್‌ ತೊಗರಿಗೆ 10 ಸಾವಿರ ರೂ. ಬೆಲೆ ನಿಗದಿಪಡಿಸಬೇಕು ಹಾಗೂ ಪ್ರತಿಟನ್‌ ಕಬ್ಬಿಗೆ 3500 ರೂ.ಗಳ ಬೆಲೆ ನಿಗದಿಪಡಿಸಬೇಕು, ಜಲಾನಯನ ಅಭಿವೃದ್ಧಿ ಕಾಮಗಾರಿ ಹೆಚ್ಚಿಸಿ ವೈಜ್ಞಾನಿಕ ನೀರಾವರಿ ಪದ್ಧತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಬಗರ್‌ ಹುಕುಂ ಸಾಗುವಳಿದಾರ ರೈತರ ಸಮಸ್ಯೆಗಳನ್ನು ಪರಿಹರಿಸಲು ಅಕ್ರಮ-ಸಕ್ರಮ ಸಮಿತಿಗಳ ಕಾರ್ಯಚುರುಕುಗೊಳಿಸಿ ಅರ್ಹ ಫಲಾನುಭ ರೈತರಿಗೆ ಹಕ್ಕು ಪತ್ರ ನೀಡಬೇಕು ಎಂಬುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸಭಾದ ಪದಾಧಿಕಾರಿಗಳಾದ ವೆಂಕಟನಗೌಡ ಗದ್ರಟಗಿ, ಸಂಗಯ್ಯಸ್ವಾಮಿ, ಡಿ.ಎಚ್‌ ಕಂಬಳಿ, ಚಂದ್ರಶೇಖರ ಕ್ಯಾತ್ನಟ್ಟಿ, ಆನಂದಪ್ಪ, ಶಿವಪುತ್ರಯ್ಯ, ಅಳ್ಳಯ್ಯ, ಬಸನಗೌಡ, ದುರಗಪ್ಪ, ಪ್ರಕಾಶ, ಜಗದೀಶ, ಚನ್ನಪ್ಪ ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next