Advertisement

ಭೂಮಿ-ವಸತಿ ಹಕ್ಕು ಸಮಸ್ಯೆ ಬಗೆಹರಿಸಲು ಆಗ್ರಹ

04:34 PM Nov 30, 2018 | Team Udayavani |

ಚಿಕ್ಕಮಗಳೂರು: ಭೂಮಿ ಮತ್ತು ವಸತಿ ಹಕ್ಕು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿ ವತಿಯಿಂದ ನಗರದ ಆಜಾದ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಖಂಡರು ಮತ್ತು ಕಾರ್ಯಕರ್ತರು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Advertisement

ಚಿಕ್ಕಮಗಳೂರು ತಾಲೂಕಿನ ಆವತಿ ಹೋಬಳಿಯ ದಾನಿಹಳ್ಳಿ, ಅಂಬಳೆ ಹೋಬಳಿ, ಮಲ್ಲಂದೂರು, ಕೆಸರ್ಕೆ, ಮುಳ್ಳುವರೆ, ಲಕ್ಯಾ ಹೋಬಳಿಯ ಲಕ್ಕುಮ್ಮನಹಳ್ಳಿ, ಆಲ್ದೂರು ಹೋಬಳಿ ಕಬ್ಬಿಣದ ಸೇತುವೆ ಸಮೀಪದ ಕೆಳಗೂರು ಗ್ರಾಮ, ವಸ್ತಾರೆ ಹೋಬಳಿಯ ಕೆಳಗಣೆಯಲ್ಲಿ ತಲೆದೋರಿರುವ ಗ್ರಾಮದ ಭೂಮಿ ಸಮಸ್ಯೆ ಬಗೆಹರಿಸಬೇಕು. ಭೂರಹಿತರು ಮತ್ತು ನಿವೇಶನ ರಹಿತರಿಗೆ ಭೂಮಿ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮೂಡಿಗೆರೆ ತಾಲೂಕಿನ ಕಳಸಾ ಹೋಬಳಿ ಸಂಸ್ಥೆ ಗ್ರಾಮ, ಕೆ. ಕೆಳಗೂರು, ಕುಂದೂರು, ಸಾರಗೋಡು, ಅಣಜೂರು, ಗೋಣಿಬೀಡು ಗ್ರಾಮದ ನಿವಾಸಿಗಳಿಗೆ ಭೂಮಿ ಕೊಡಬೇಕು. ಕೊಪ್ಪ ತಾಲ್ಲೂಕಿನ ಮಾಗುಂಡಿ ಹೋಬಳಿಯ ಗುಡ್ಡೆತೋಟ, ಕೂಳೂರು, ಕಲ್ಲುಗುಡ್ಡೆ ಗ್ರಾಮದ ಭೂಹೀನ ದಲಿತರಿಗೆ ಹಕ್ಕುಪತ್ರ ಕೊಡಬೇಕು. ಕೌಳಿ ಮತ್ತು ಸೀಗೋಡು ದಲಿತ ಕುಟುಂಗಳಿಗೆ ತಲಾ ಎರಡು ಎಕರೆ ಭೂಮಿ ಮಂಜೂರು ಮಾಡಬೇಕು. ಹೆರೂರಿನ ದೇವಯ್ಯ ಇತರೆ 10 ದಲಿತ ಕುಟುಂಬಗಳಿಗೆ ಭೂಮಿ ಮಂಜೂರಾಗಿದ್ದು, ಜಮೀನು
ಗುರುತಿಸಿ ಕೊಡಬೇಕು. ಕಲ್ಲುಗುಡ್ಡೆಯ ಲಕ್ಷಯ್ಯ ಇತರರ 14 ಎಕರೆ ದರಖಾಸ್ತು ಭೂಮಿಗೆ ಹಕ್ಕು ಪತ್ರ ಕೊಡಬೇಕು ಎಂದು ಆಗ್ರಹಿಸಿದರು.

ಶೃಂಗೇರಿ ತಾಲೂಕಿನ ನೆಮ್ಮೆರಾ ಎಸ್ಟೇಟಿನ ಬಡವರಿಗೆ ಹಕ್ಕು ಪತ್ರ ನೀಡಬೇಕು. ಹೊಸಕೆರೆ ಗ್ರಾಮದ ಜನರಿಗೆ ಭೂಮಿ ಗುರುತಿಸಬೇಕು ಸೇರಿದಂತೆ ಇತರೆ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಗೌಸ್‌ ಮೊಹಿಯುದ್ದೀನ್‌, ಕೃಷ್ಣಮೂರ್ತಿ, ಹಸನಬ್ಬ, ಕೌಳಿರಾಮು, ಹಾಂದಿ ಲಕ್ಷ್ಮಣ, ನೀಲುಗುಳಿ ಪದ್ಮನಾಬ್‌ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next