ಹಾವೇರಿ: ಕಳೆದ ಎರಡು ವರ್ಷ ಕೊರೊನಾದಿಂದ ಸಮಸ್ಯೆ ಎದುರಿಸಿದ್ದ ರೈತರು ಈ ಸಲ ಉತ್ತಮ ಮುಂಗಾರು ಆರಂಭಕ್ಕೆ ಎದುರು ನೋಡುತ್ತಿದ್ದಾರೆ. ಮುಂಗಾರು ಪೂರ್ವದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿದೆ.
ಹಿಂದಿನ ಎರಡು ವರ್ಷಗಳಲ್ಲೂ ಈ ಅವಧಿಯಲ್ಲಿ ಕೊರೊನಾ ಆರ್ಭಟ ಜೋರಾಗಿ ಕೃಷಿ ಚಟುವಟಿಕೆಗಳಿಗೆ ತೊಡಕಾಗಿತ್ತು. ಬಳಿಕ ನೆರೆ, ಅತಿವೃಷ್ಟಿಯಿಂದ ರೈತರು ಸಮಸ್ಯೆ ಎದುರಿಸಿದ್ದರು. ಈ ಸಲ ಮುಂಗಾರು ಪೂರ್ವ ಮಳೆ ಜಿಲ್ಲಾದ್ಯಂತ ಏಪ್ರಿಲ್‌ನಲ್ಲೇ ಆಗಿದೆ. ಆದ್ದರಿಂದ ಮುಂಗಾರು ಹಂಗಾಮು ಸಕಾಲದಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ. ಅದಕ್ಕಾಗಿ ರೈತರು ಈಗಿನಿಂದಲೇ ಅಗತ್ಯ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಎತ್ತುಗಳು, ಟ್ರಾಕ್ಟರ್ ಇತ್ಯಾದಿ ಖರೀದಿಯಲ್ಲಿ ತೊಡಗಿದ್ದಾರೆ. ಅದೇ ರೀತಿ ಇನ್ನೊಂದು ವಾರ ಬಿಟ್ಟು ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ರೈತರು ಸಿದ್ಧತೆ ನಡೆಸಿದ್ದಾರೆ. ಆ ವೇಳೆಗೆ ರೈತರು ಅಗತ್ಯ ದಾಸ್ತಾನು ಇಟ್ಟುಕೊಳ್ಳದಿದ್ದರೆ ಸಮಸ್ಯೆ ಎದುರಿಸಬೇಕಾಗಲಿದೆ.
ಬಿತ್ತನೆ ಬೀಜ ವಿತರಣೆಗೆ ಕ್ರಮ
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, 119 ಮಿಮೀ ವಾಡಿಕೆ ಮಳೆ ಪೈಕಿ ಈಗಾಗಲೇ 97.60 ಮಿಮೀ (ಶೇ.81.40) ಮಳೆಯಾಗಿದೆ. ಮೇ ಕೊನೆಯ ವಾರ, ಜೂನ್ ಮೊದಲ ವಾರದಲ್ಲಿ ಬಿತ್ತನೆ ಆರಂಭವಾಗಲಿದೆ. ಏಕದಳ, ದ್ವಿದಳ, ಎಣ್ಣೆಕಾಳು, ವಾಣಿಜ್ಯ ಬೆಳೆಗಳು ಸೇರಿ 3,30,639 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಸೋಯಾ ಅವರೆ, ಶೇಂಗಾ, ಗೋವಿನ ಜೋಳ ಸೇರಿದಂತೆ ಸಣ್ಣ, ಅತಿ ಸಣ್ಣ ಹಿಡುವಳಿದಾರರಿಗೆ 36,660 ಕ್ವಿಂಟಲ್ ಬಿತ್ತನೆ ಬೀಜದ ವಿತರಣೆ ಬೇಡಿಕೆ ಅಂದಾಜಿಸಲಾಗಿದೆ. 19 ರೈತ ಸಂಪರ್ಕ ಕೇಂದ್ರಗಳು, 21 ಸಹಕಾರಿ ಸಂಘಗಳು, ಹೆಚ್ಚುವರಿಯಾಗಿ 20 ಮಾರಾಟ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಕ್ರಮ ವಹಿಸಿದೆ. ಆದರೆ, ಕಳೆದ ವರ್ಷ ಜಿಲ್ಲೆಯಲ್ಲಿ ಸೋಯಾ ಬಿನ್ ಬೀಜ ಕೊರತೆಯಿಂದ ರೈತರು ಸಮಸ್ಯೆ ಎದುರಿಸಿದ್ದರು. ಮುಂಗಾರು ಆರಂಭದಲ್ಲೇ ಸೋಯಾ ಬಿತ್ತನೆ ಶುರುವಾಗಲಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ರೈತರು ಸೋಯಾ ಬೆಳೆಯತ್ತ ತಿರುಗಿದ್ದಾರೆ. ಆದ್ದರಿಂದ ಈ ಸಲ ಕೊರತೆಯಾಗ ದಂತೆ ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಅಗತ್ಯ ಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಕೆಯಾಗಲಿದ್ದು, ಯಾವುದೇ ಅಭಾವವಿಲ್ಲ. ಬಿ.ಮಂಜುನಾಥ್, ಜಂಟಿ ಕೃಷಿ ನಿರ್ದೇಶಕ. ಈ ವರ್ಷ ರಾಜ್ಯದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆಯಿಲ್ಲ. 6.83 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ. ರೈತರ ಅಗತ್ಯಕ್ಕನುಗುಣವಾಗಿ ರಸಗೊಬ್ಬರ, ಬಿತ್ತನೆ ಬೀಜ ವಿತರಿಸಲಾಗುವುದು.
-ಬಿ.ಸಿ.ಪಾಟೀಲ, ಕೃಷಿ ಸಚಿವರು.
24 ಸಾವಿರ ಮೆ.ಟನ್ ಗೊಬ್ಬರ ದಾಸ್ತಾನು
ಜಿಲ್ಲೆಯಲ್ಲಿ ಗೊಬ್ಬರ, ಬಿತ್ತನೆ ಬೀಜ ದಾಸ್ತಾನಿಗೆ ಕೃಷಿ ಇಲಾಖೆ ಅಗತ್ಯ ಗಮನ ಹರಿಸಿದೆ. ಅಲ್ಲದೇ ಜಿಲ್ಲೆಯವರೇ ಆಗಿರುವ ಬಿ.ಸಿ.ಪಾಟೀಲ ಅವರು ಕೃಷಿ ಸಚಿವರಾದ ಮೇಲೆ ಸಾಕಷ್ಟು ಮುಂಜಾಗ್ರತಾ ಕ್ರಮ ಅನುಸರಿಸಿದ್ದರಿಂದ ಅಷ್ಟಾಗಿ ಕೊರತೆ ಎದುರಾಗಿಲ್ಲ. ಮುಂಗಾರು ಹಂಗಾಮಿಗಾಗಿ ಸೆಪ್ಟೆಂಬರ್ ತಿಂಗಳವರೆಗೆ ಯೂರಿಯಾ 58,459 ಮೆಟ್ರಿಕ್ ಟನ್, ಡಿಎಪಿ 25,848 ಮೆಟ್ರಿಕ್ ಟನ್, ಎಂಒಪಿ 5,911 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 46,957 ಮೆಟ್ರಿಕ್ ಟನ್, ಎಸ್‌ಎಸ್‌ಪಿ 702 ಮೆಟ್ರಿಕ್ ಟನ್ ಸೇರಿ 1,37,916 ಮೆಟ್ರಿಕ್ ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಸದ್ಯಕ್ಕೆ 24,223 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ. ಎರಡು ರೇಕ್ ಯೂರಿಯಾ ಕೂಡ ಬಂದಿದ್ದರಿಂದ ಆರಂಭಿಕ ವಿತರಣೆಗೆ ಯಾವುದೇ ಕೊರತೆ ಎದುರಾಗುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.