ಹಟ್ಟಿಯಂಗಡಿ: ಕೆಂಚನೂರು, ಹಟ್ಟಿಯಂಗಡಿ ಹಾಗೂ ಕನ್ಯಾನ ಗ್ರಾಮವನ್ನೊಳಗೊಂಡ ಹಟ್ಟಿಯಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲವು ರಸ್ತೆಗಳು ಅಭಿವೃದ್ಧಿಯಾಗಿವೆ. ಆದರೆ ಇನ್ನಷ್ಟು ರಸ್ತೆಗಳು ಪ್ರಗತಿಯ ಕನಸು ಕಾಣುತ್ತಿವೆ. ಇನ್ನು ಕೆಂಚನೂರು ಭಾಗದಲ್ಲಿ ಬೇಸಗೆಯಲ್ಲಿ ನೀರಿನ ಕೊರತೆಯ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಪಂಚಾಯತ್ ಬಳಿಯಿಂದ ಚೀನಿಬೆಟ್ಟು ಕಡೆಗೆ ಸಂಚರಿಸುವ ರಸ್ತೆ, ಹಟ್ಟಿಯಂಗಡಿಯಿಂದ ಚೀನಿಬೆಟ್ಟು ಕಡೆಗೆ ಸಂಚರಿಸುವ ಮಣ್ಣಿನ ರಸ್ತೆ, ಕರ್ಕಿಯಿಂದ ಲೋಕನಾಥೇಶ್ವರ ದೇವಸ್ಥಾನ ರಸ್ತೆ, ಕರ್ಕಿಯಿಂದ ಹಟ್ಟಿಯಂಗಡಿ ರಸ್ತೆ, ಕನ್ಯಾನ ಗ್ರಾಮದ ಕರ್ಕಿ- ಹನಮನೆ ರಸ್ತೆ ಸೇರಿದಂತೆ ಹಲವು ರಸ್ತೆಗಳು ಅಭಿವೃದ್ಧಿಗೊಳ್ಳಬೇಕಿದೆ ಎಂಬುದು ಗ್ರಾಮಸ್ಥರ ಬೇಡಿಕೆ.
ಹಟ್ಟಿಯಂಗಡಿ ಹಾಗೂ ತಲ್ಲೂರು ಈ ಎರಡೂ ಗ್ರಾ.ಪಂ.ಗಳ ವ್ಯಾಪ್ತಿಯ ತಲ್ಲೂರಿನಿಂದ ಸಬ್ಲಾಡಿಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ಕಾಮಗಾರಿ ಅರ್ಧಂಬರ್ಧ ಆಗಿದೆ. ಪೂರ್ಣಗೊಳ್ಳದೆ ಜನರಿಗೆ ಪೂರ್ಣ ಪ್ರಯೋಜನ ಸಿಗದು.
ಈ ರಸ್ತೆ ಅಭಿವೃದ್ಧಿಯಾದರೆ ನೂರಾರು ಮನೆಗಳಿಗೆ ಅನುಕೂಲವಾಗಲಿದೆ. ಈ ರಸ್ತೆಯು 10 -12 ವರ್ಷಗಳ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 1 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಿತ್ತು. ಈ ರಸ್ತೆ ಕಾಮಗಾರಿ ತುರ್ತಾಗಿ ಪೂರ್ಣಗೊಳ್ಳಬೇಕಿದೆ ಎಂಬುದು ಸಬ್ಲಾಡಿ ಭಾಗದ ಜನರ ಪ್ರಮುಖ ಬೇಡಿಕೆಗಳಲ್ಲಿ ಒಂದು.
ಇಲ್ಲಿ ಸುಮಾರು 400ಕ್ಕೂ ಅಧಿಕ ಮನೆಗಳಿದ್ದು, ಬಹುತೇಕ ಮನೆಗಳಲ್ಲಿ ಬಾವಿ ಇದೆ. ಆದರೆ ಬೇಸಗೆಯಲ್ಲಿ ನೀರಿರದು. ಪಂಚಾಯತ್‌ನಿಂದ 50-60 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕವಿದೆ. ಈಗಾಗಲೇ ಪ್ರಗತಿಯಲ್ಲಿರುವ ಸೌಕೂರು ಏತ ನೀರಾವರಿ ಯೋಜನೆಯಲ್ಲಿ ಹಟ್ಟಿಯಂಗಡಿಯನ್ನು ಸಹ ಸೇರಿಸಲಾಗಿದ್ದು, ಇದರಿಂದ ಒಂದಷ್ಟು ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆಗಳಿವೆ. ಆದರೆ ಯೋಜನೆ ಕಾಲಮಿತಿಯೊಳಗೆ ಪೂರ್ಣಗೊಂಡರೆ ಮಾತ್ರ ಪ್ರಯೋಜನವಾಗಲಿದೆ ಎಂಬುದು ಜನರ ನಿರೀಕ್ಷೆ.
ಕೆಂಚನೂರು: ನೀರಿನ ಸಮಸ್ಯೆ
ಪಂಚಾಯತ್ ವ್ಯಾಪ್ತಿಯ 3 ಗ್ರಾಮಗಳ ಪೈಕಿ ಕೆಂಚನೂರಿನಲ್ಲಿ ಮಾತ್ರ ನೀರಿನ ಸಮಸ್ಯೆ ಗಂಭೀರವಾಗಿದೆ. ಎಪ್ರಿಲ್ – ಮೇ ತಿಂಗಳಲ್ಲಿ ಇಲ್ಲಿನ ಬಹುತೇಕ ಮನೆಗಳ ಬಾವಿ ನೀರು ಬತ್ತಿ ಹೋಗುತ್ತದೆ. ಪಂಚಾಯತ್ ವ್ಯಾಪ್ತಿಯಲ್ಲೂ ಈ ಸಮಸ್ಯೆ ನಿಭಾಯಿಸಲು ಸೂಕ್ತ ಜಲಮೂಲಗಳಿಲ್ಲ. ಈ ಭಾಗದಲ್ಲಿ ಬಾವಿ ತೋಡಿದರೂ ಬಿಳಿ ಕಲ್ಲು ಸಿಗುವುದರಿಂದ ನೀರಿನ ಒರತೆ ಕಡಿಮೆಯಿರುತ್ತದೆಯಂತೆ. ಕೆಲವೆಡೆಗಳಲ್ಲಿ ಉಪ್ಪು ನೀರಿನ ಸಮಸ್ಯೆಯಿದೆ. ಕೆಂಚನೂರು, ಜನತಾ ಕಾಲನಿ, ಕದ್ರಿಗುಡ್ಡ, ನೆಂಪು, ಗುಡ್ರಿ, ಬಟ್ರಾಡಿ, ಜಾಡುಕಟ್ಟು ಮತ್ತಿತರ ಕಡೆಗಳಲ್ಲಿ ಉದ್ಭವಿಸುವ ನೀರಿನ ಸಮಸ್ಯೆಗೆ ಮುಂದಿನ ಬೇಸಗೆಯೊಳಗೆ ಪರಿಹಾರ ಹುಡುಕಬೇಕಿದೆ.
ನಿವೇಶನಕ್ಕೆ ಡೀಮ್ಡ್ ಅಡ್ಡಿ
ಹಟ್ಟಿಯಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಸುಮಾರು 400ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಆದರೆ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗವಿದ್ದರೂ ಬಹುತೇಕ ಜಾಗ ಡೀಮ್ಡ್ ಫಾರೆಸ್ಟ್ ಆಗಿರುವುದರಿಂದ ತೊಡಕಾಗಿದೆ. ಇದನ್ನು ಸರಕಾರ ನಿವಾರಿಸಬೇಕಿದೆ. ಇನ್ನು ಗೇರು ಬೀಜ ಅಭಿವೃದ್ಧಿ ನಿಗಮದ ಜಾಗವೂ ಅಧಿಕವಿದ್ದು, ಇದು ಸಹ ನಿವೇಶನ ಹಂಚಿಕೆಗೆ ಅಡ್ಡಿಯಾಗಿದೆ.
ಪ್ರಸ್ತಾವನೆ ಸಲ್ಲಿಕೆ: ಈಗಾಗಲೇ ಗ್ರಾ.ಪಂ. ವ್ಯಾಪ್ತಿಯ ಹಲವು ರಸ್ತೆಗಳು ಶಾಸಕರ ಮುತುವರ್ಜಿಯಲ್ಲಿ ಅಭಿವೃದ್ಧಿಯಾಗಿದ್ದು, ಬಾಕಿ ಉಳಿದ ರಸ್ತೆಗಳ ಬಗ್ಗೆ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೇಡಿಕೆ ಈಡೇರುವ ಭರವಸೆ ಸಿಕ್ಕಿದ್ದು, ಸೌಕೂರು ಏತ ನೀರಾವರಿ, ಜಲಜೀವನ್ ಮಿಷನ್ ಯೋಜನೆಯಾದರೆ ನೀರಿನ ಸಮಸ್ಯೆ ಬಗೆಹರಿಯಲಿದೆ. –
ಅಮೃತಾ ಪಿ. ಭಂಡಾರಿ, ಗ್ರಾ.ಪಂ. ಅಧ್ಯಕ್ಷರು, ಹಟ್ಟಿಯಂಗಡಿ
-ಪ್ರಶಾಂತ್ ಪಾದೆ