ಅರಂತೋಡು: ದ.ಕ. ಮತ್ತು ಕೊಡಗು ಜಿಲ್ಲೆಯ ಗಡಿಭಾಗದಲ್ಲಿದೆ ತೊಡಿಕಾನ ಗ್ರಾಮ. ಸುಳ್ಯದ ಸೀಮೆ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇಗುಲ ಇರುವುದು ಇದೇ ಗ್ರಾಮದಲ್ಲಿ. ಈ ಊರು ಧಾರ್ಮಿಕ ಕೇಂದ್ರವಾಗಿ, ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದ್ದು ಇಲ್ಲಿನ ದೇವರಗುಂಡಿ ಜಲಪಾತ, ಮತ್ಸ್ಯ ತೀರ್ಥ ಜನರನ್ನು ಆಕರ್ಷಿಸುತ್ತಿದೆ.
ತೊಡಿಕಾನ ಗ್ರಾಮದಲ್ಲಿ ಕೆಲವು ಮೂಲ ಸಮಸ್ಯೆಗಳು ಜನರನ್ನು ಈಗಲೂ ಕಾಡುತ್ತಿವೆ. ಈ ಗ್ರಾಮದ ಬಹುಮಂದಿ ಕೃಷಿಕರು ಮತ್ತು ಕೃಷಿ ಕಾರ್ಮಿಕರು. ತೊಡಿಕಾನದ ಮೂಲಕ ಕೊಡಗಿನ ತಲಕಾವೇರಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆ ಹಾದು ಹೋಗುತ್ತದೆ. ಆದರೆ ಅದು ಇನ್ನೂ ಸರ್ವ ಋತು ರಸ್ತೆಯಾಗಿ ಅಭಿವೃದ್ಧಿಗೊಂಡಿಲ್ಲ. ಗ್ರಾಮದ ಹೆಸರಿಗೂ ಇಲ್ಲಿನ ರಸ್ತೆಗೂ ಸಂಬಂಧವಿಲ್ಲ. ಆದರೆ ಹೆಸರು ಮತ್ತು ರಸ್ತೆ ನೋಡಿದಾಗ ಹಾಗೆ ಅನ್ನಿಸದೆ ಇರದು. ಗ್ರಾಮದ ಹೆಚ್ಚಿನ ರಸ್ತೆಗಳು ತೋಡಿನಂತೆಯೇ ಇವೆ. ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟು ಕೆಸರಿನಿಂದ ಕೂಡಿದ್ದು, ಪೇಟೆಯ ಪ್ರಮುಖ ರಸ್ತೆ ಕೂಡಾ ಅಗಲ ಕಿರಿದಾಗಿ ಸಮಸ್ಯೆಗೆ ಕಾರಣವಾಗಿದೆ.
ತೊಡಿಕಾನ-ಮುಪ್ಪಸೇರು ಸಂಪರ್ಕ ರಸ್ತೆ ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೊಂಡಿಲ್ಲ. ಈ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ಮಂಜೂರುಗೊಂಡು ಕಾಂಕ್ರೀಟ್ ಮಾಡಲು ರಸ್ತೆ ಸಮತಟ್ಟು ಮಾಡಿ ಹೋಗಿರುವ ಗುತ್ತಿಗೆದಾರರು ಮತ್ತೆ ಆ ಕಡೆ ಹಿಂದಿರುಗಿ ನೋಡಿಲ್ಲ. ಇದೀಗ ಮಳೆಗಾಲ ಆರಂಭವಾಗಿದ್ದು ರಸ್ತೆ ಕೆಸರು ಗದ್ದೆಯಾಗಿದೆ. ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ತೊಡಿಕಾನ-ಕುಂಟುಕಾಡು ಸಂಪರ್ಕ ರಸ್ತೆ, ತೊಡಿಕಾನ ಬಾಳೆಕಜೆ ರಸ್ತೆ ಒಂದಷ್ಟು ಭಾಗ ಅಭಿವೃದ್ಧಿಗೊಂಡಿದ್ದರೂ ಉಳಿದ ಭಾಗ ಅಭಿವೃದ್ಧಿಗೊಳ್ಳಲು ಬಾಕಿ ಉಳಿದಿವೆ.
ನೀರಿನ ಸಮಸ್ಯೆ
ಗ್ರಾಮದ ಕಾಡುಪಂಜ, ಊರುಪಂಜ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಹತ್ತಾರು ಮನವಿಗಳನ್ನು ನೀಡಿದರೂ ಸಮಸ್ಯೆ ಸರಿಯಾಗಿ ನೀಗಿಲ್ಲ.
ಸೇತುವೆಗೆ ಆಗ್ರಹ
ಇಲ್ಲಿಯ ಎರುಕಡುಪು ಎಂಬಲ್ಲಿ ಸೇತುವೆ ನಿರ್ಮಾಣವಾಗಬೇಕೆಂದು ಸ್ಥಳೀಯರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಪ್ರತೀ ಚುನಾವಣೆ ಸಂದರ್ಭ ಪಕ್ಷಗಳಿಂದ ಭರವಸೆ ಮಾತ್ರ ದೊರೆತಿದೆ.
ತೊಡಿಕಾನದಲ್ಲಿ ಮೊಬೈಲ್ ಫೋನ್ ನೆಟ್‌ವರ್ಕ್ ಸಮಸ್ಯೆ ವಿಪರೀತವಾಗಿದೆ. ವಿದ್ಯುತ್ ಕೈಕೊಟ್ಟರೆ ನೆಟ್‌ವರ್ಕ್ ಕನಸೇ.
ಅರಂತೋಡು-ತೊಡಿಕಾನ ಸಿಂಗಲ್ ರಸ್ತೆಯಲ್ಲಿ ಜಲ್ಲಿ ಹೇರಿಕೊಂಡು ಘನವಾಹನಗಳು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಾಡುತ್ತಿವೆ. ಇದರಿಂದ ಇತರ ವಾಹನಗಳ ಸವಾರರಿಗೆ ಅಪಾಯ ಎದುರಾಗಿದೆ. ಜತೆಗೆ ತೆರೆದ ಟಿಪ್ಪರ್‌ನಲ್ಲಿ ಜಲ್ಲಿ ಸಾಗಿಸಲಾಗುತ್ತಿದೆ. ಈ ಸಮಸ್ಯೆಗೆ ಎಂದು ಮುಕ್ತಿ ಎಂದು ಜನ ಕಾಯುತ್ತಿದ್ದಾರೆ.
ಖಾಸಗಿ ವಾಹನಗಳೇ ಪ್ರಮುಖ ಸಂಚಾರ ಸಾಧನ
ಗ್ರಾಮದಲ್ಲಿ ಸುಮಾರು 2,500ರಷ್ಟು ಜನಸಂಖ್ಯೆ ಇದ್ದು ಅಡ್ಡಡ್ಕ ಎಂಬಲ್ಲಿ ಪಡಿತರ ವಿತರಣೆ ವ್ಯವಸ್ಥೆ ಇದೆ. ಖಾಸಗಿ ಬಸ್ ಇಲ್ಲಿನ ಪ್ರಮುಖ ಸಂಚಾರ ಕೊಂಡಿ. ಇದರ ಜತೆಗೆ ಸರ್ವಿಸ್ ವಾಹನಗಳಿವೆ. ಗ್ರಾಮದಲ್ಲಿ ಒಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಒಂದು ಹಿರಿಯ ಪ್ರಾಥಮಿಕ ಶಾಲೆ ಇದೆ. ಪ್ರೌಢ ಶಿಕ್ಷಣಕ್ಕಾಗಿ ನೆರೆಯ ಅರಂತೋಡು ಗ್ರಾಮಕ್ಕೆ ಹೋಗಬೇಕಾದ ಅನಿವಾರ್ಯ ಇಲ್ಲಿನದು.
ಹಂತ ಹಂತವಾಗಿ ಅಭಿವೃದ್ಧಿ: ಗ್ರಾಮ ಪಂಚಾಯತ್‌ಗೆ ಬರುವ ಅನುದಾನ ಕಡಿಮೆ. ಲಭ್ಯವಿರುವ ಅನುದಾನಗಳನ್ನು ಬಳಸಿಕೊಂಡು ಹಂತ ಹಂತವಾಗಿ ರಸ್ತೆ ಅಭಿವೃದ್ಧಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ.
-ಹರಿಣಿ ದೇರಾಜೆ, ಅಧ್ಯಕ್ಷರು, ಅರಂತೋಡು ಗ್ರಾಮ ಪಂಚಾಯತ್
ಮುಖ್ಯ ಬೇಡಿಕೆಗಳು: ಕಾಡುಪಂಜ ಭಾಗದಲ್ಲಿ ರಸ್ತೆ ಕಾಂಕ್ರೀಟ್ ಮಾಡಬೇಕು. ಕುಡಿಯುವ ನೀರಿನ ಬೇಡಿಕೆ ಇದೆ. ಸೋಲಾರ್ ಬೀದಿ ದೀಪಗಳ ಅಗತ್ಯ ಇದೆ. –
ನಾಗೇಶ್ ಕಾಡುಪಂಜ, ಸ್ಥಳೀಯರು
-ತೇಜೇಶ್ವರ್ ಕುಂದಲ್ಪಾಡಿ