ಮೈಸೂರು: ರಾಜ್ಯದ ನೆರೆ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್ ಹಣ ನೀಡುವ ಬದಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ನಗರದ ಪುರಭವನದ ಆವರಣದಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಲಕಾವೇರಿಯಿಂದ ಬೆಂಗಳೂರಿನವರೆಗೆ ಅತಿವೃಷ್ಟಿ, ಅನಾವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಹಮ್ಮಿಕೊಂಡಿರುವ ವಾಹನ ಜಾಥಾದ ಪ್ರಯುಕ್ತ ನಡೆದ ಬಹಿರಂಗ ಅಧಿವೇಶನದಲ್ಲಿ ಮಾತನಾಡಿದರು.
ಪ್ರತಿಭಟನೆ ಎಚ್ಚರಿಕೆ: ಸರ್ಕಾರ ನೀಡುವ ಎನ್‌ಡಿಆರ್‌ಎಫ್ ಹಣದಿಂದ ರೈತರು ಮತ್ತೆ ಕೃಷಿ ಚಟುವಟಿಕೆ ಕೈಗೊಳ್ಳಲು, ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಎನ್‌ಡಿಆರ್‌ಎಫ್ ಹಣ ನಮಗೆ ಅವಶ್ಯಕತೆ ಇಲ್ಲ. ಈ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ನಿಧಿಯಡಿ ನೀಡುತ್ತಿರುವ ಮೊತ್ತವನ್ನು ಕೂಡಲೇ ಪರಿಷ್ಕರಿಸಬೇಕು. ಇಲ್ಲವಾದಲ್ಲಿ ಎನ್‌ಡಿಆರ್‌ಎಫ್ ಪ್ರತಿಯನ್ನು ಸುಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತನಿಗೆ ಸಂಕಷ್ಟ: ಈ ಬಾರಿಯ ಮಳೆ ಹಾಗೂ ಪ್ರವಾಹದಿಂದ ಉತ್ತರ ಕರ್ನಾಟಕ ಹಾಗೂ ಕೊಡಗು ಜಿಲ್ಲೆ ತತ್ತರಿಸಿವೆ. ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ಆದರೆ, ಇದುವರೆಗೆ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿಲ್ಲ. ಕೃಷಿ ಭೂಮಿ ಕೊಚ್ಚಿ ಹೋಗಿ ಬೆಳೆ ಬೆಳೆಯಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನಾಡಿಗೆ ಅನ್ನ ನೀಡುವ ರೈತ ಇಂದು ಬೀದಿಗೆ ಬಿದ್ದಿದ್ದಾನೆ. ಆತನ ಸಂಕಷ್ಟ ಅರಿತು ಸರ್ಕಾರ ಗರಿಷ್ಠ ಪ್ರಮಾಣದ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ನಾವು ಸರ್ಕಾರಕ್ಕೆ ಯಾವುದೇ ರೀತಿಯ ಮನವಿ ಪತ್ರಗಳನ್ನು ನೀಡುವುದಿಲ್ಲ. ಆದರೆ, ರೈತರಿಗೆ ದೊರೆಯಬೇಕಾದ ನೆರವನ್ನು ಕೂಡಲೇ ನೀಡಲು ಸರ್ಕಾರ ಕ್ರಮ ವಹಿಸಬೇಕು. ನೆರವನ್ನು ಪಡೆಯುವುದು ನಮ್ಮ ಹಕ್ಕಾಗಿದ್ದು, ಈ ಬಗ್ಗೆ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
ರೈತ ಮುಖಂಡರಾದ ಸುನಿತಾ ಪುಟ್ಟಣ್ಣಯ್ಯ ಮಾತನಾಡಿ, ನಾಡಿಗೆ ಅನ್ನ ನೀಡುವ ರೈತನ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ. ಆದರೆ, ನಮ್ಮನ್ನು ಆಳುವ ಜನರು ಕೋಟ್ಯಂತರ ರೂ.ಗಳನ್ನು ಅಕ್ರಮವಾಗಿ ಸಂಪಾದಿಸಿ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಈ ಪೈಕಿ ಕೆಲವರು ತಾವು ಸಂಪಾದಿಸಿದ ಹಣಕ್ಕೆ ಲೆಕ್ಕ ತೋರಿಸಲು ಸಾಧ್ಯವಾಗದೆ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದು, ಇನ್ನು ಕೆಲವರು ಜೈಲು ಪಾಲಾಗಿದ್ದಾರೆ.
ಆದರೆ, ರೈತ ಇಂದಿಗೂ ಒಂದು ದಿನದ ಬದುಕಿಗಾಗಿ ಹೋರಾಟ ನಡೆಸುವ ಸ್ಥಿತಿಯಲ್ಲಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು. ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಕೊಡಗು ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಲೇಖಕ ಕೆ.ಪಿ.ಸುರೇಶ್ ಇತರರು ಇದ್ದರು.