Advertisement
ಪಾಲೋಳಿಯಲ್ಲಿ ಸರ್ವಋತು ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆಯನ್ನು ಎರಡೂವರೆ ದಶಕಗಳಿಂದ ಈ ಪರಿಸರದ ಜನರು ಜನಪ್ರತಿನಿಧಿಗಳ ಮುಂದಿಡುತ್ತಿದ್ದರೂ ಈ ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಗತಿ ಕಂಡುಬಾರದೆ ನಿರಾಶರಾಗಿದ್ದಾರೆ. ಪಾಲೋಳಿ ಕುಮಾರಧಾರಾ ಶಾಶ್ವತ ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ಮುಖ್ಯ ಶಿಕ್ಷಕ ಸಾಂತಪ್ಪ ಗೌಡ ಪಿಜಕಳ, ಉಪಾಧ್ಯಕ್ಷರಾಗಿ ಕೆ.ಜೆ. ಜೋಸ್ ಕೇಂಜೂರು, ಕಾರ್ಯದರ್ಶಿಯಾಗಿ ಶ್ಯಾಮ್ ಥಾಮಸ್ ಪಿಜಕಳ, ಜ.ಕಾರ್ಯದರ್ಶಿಯಾಗಿ ರಾಮಕೃಷ್ಣ ರೈ ಮಾಲೆಂಗ್ರಿ, ಕೋಶಾಧಿಕಾರಿಯಾಗಿ ರವೀಂದ್ರ ಆಯ್ಕೆಯಾಗಿದ್ದಾರೆ.
ಜನರ ಬೇಡಿಕೆಗೆ ಪೂರಕ ಸ್ಪಂದನೆ ಕಂಡು ಬಾರದ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ಊರವರೇ ಸೇರಿಕೊಂಡು ಶ್ರಮದಾನದ ಮೂಲಕ ಇಲ್ಲಿ ತಾತ್ಕಾಲಿಕ ನೆಲೆಯ ಸೇತುವೆ ನಿರ್ಮಾಣ ಮಾಡು ತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದಾನಿಗಳ ಆರ್ಥಿಕ ನೆರವಿನಿಂದ ಎಡಮಂಗಲ, ಪಿಜಕಳ ಪರಿಸರದ ಜನರ ಶ್ರಮದಾನದ ಫಲವಾಗಿ 120 ಮೀ. ಉದ್ದದ 10 ಮೀ. ಅಗಲದ ಸೇತುವೆ ನಿರ್ಮಿಸಲಾಗಿತ್ತು. ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗುವ ಸೇತುವೆಯನ್ನು ಪ್ರತೀ ಬೇಸಗೆಯಲ್ಲಿ ಊರವರು ಪುನರ್ನಿರ್ಮಾಣ ಮಾಡುತ್ತಿದ್ದಾರೆ. ಈ ಬಾರಿ ಎಡಮಂಗಲ ಭಾಗದ ಜನರ ಮುತುವರ್ಜಿಯಿಂದಾಗಿ ಸೇತುವೆ ಆಗಿದೆ. ಎಡಮಂಗಲ ಅವಳಿ ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೆಯ ವೇಳೆಯಲ್ಲಿ ಕಡಬ ಭಾಗದ ಜನರು ಎಡಮಂಗಲ ತಲುಪಲು ಈ ತಾತ್ಕಾಲಿಕ ಸೇತುವೆ ಸಾಕಷ್ಟು ಅನುಕೂಲಕರವಾಗಿ ಪ್ರಯೋಜನಕ್ಕೆ ಬಂದಿತ್ತು. ಕಡಬ-ಎಡಮಂಗಲ ಹತ್ತಿರದ ದಾರಿ
ಪಾಲೋಳಿ ಮತ್ತು ಎಡಮಂಗಲ ಪೇಟೆಯ ನಡುವೆ ಇರುವುದು ಕೇವಲ 2 ಕಿ.ಮೀ.ಗಳ ಅಂತರ. ಆದರೆ, ಮಧ್ಯೆ ಕುಮಾರಧಾರಾ ಹೊಳೆ ಹರಿಯುತ್ತಿರುವುದರಿಂದ ಪಾಲೋಳಿ-ಪಿಜಕ್ಕಳದ ಜನರು ಎಡಮಂಗಲವನ್ನು ತಲುಪಬೇಕಾದರೆ ಕಡಬ-ಕೋಡಿಂಬಾಳ-ಪುಳಿಕುಕ್ಕು ಮೂಲಕ ಸುಮಾರು 15 ಕಿ.ಮೀ.ಗಳಷ್ಟು ದೂರ ಸುತ್ತುಬಳಸಿ ಪ್ರಯಾಣಿಸಬೇಕಿದೆ. ಅದೂ ಸಮರ್ಪಕ ಬಸ್ ಸೌಕರ್ಯ ಇಲ್ಲದಿರುವುದರಿಂದ ಸುಲಭದ ದಾರಿಯಲ್ಲ. ಸದ್ರಿ ಸೇತುವೆಯ ಮೂಲಕ ಬೇಸಗೆಯಲ್ಲಿ ಕಡಬದಿಂದ ಕೇವಲ 5 ಕಿ.ಮೀ. ಸಂಚರಿಸಿ ಎಡಮಂಗಲ ತಲುಪಬಹುದು.
Related Articles
ನೂತನವಾಗಿ ಆಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕಿನ ವ್ಯಾಪ್ತಿಗೆ ಎಡಮಂಗಲ, ಎಣ್ಮೂರು, ದೋಳ್ಪಾಡಿ, ಚಾರ್ವಾಕ ಹಾಗೂ ಕಾಣಿಯೂರು ಗ್ರಾಮಗಳು ಸೇರ್ಪಡೆಯಾಗಿದ್ದು, ತಾಲೂಕು ಕೇಂದ್ರ ಕಡಬವನ್ನು ತಲುಪಲು ಪಾಲೋಳಿ ಮಾರ್ಗ ಅತ್ಯಂತ ಹತ್ತಿರದ ದಾರಿಯಾಗಿದೆ. ಆದುದರಿಂದ ಇಲ್ಲಿ ಕುಮಾರಧಾರೆಗೆ ಶಾಶ್ವತ ಸೇತುವೆ ನಿರ್ಮಾಣವಾಗಬೇಕು. ಶಾಶ್ವತ ಸೇತುವೆ ನಿರ್ಮಾಣವಾದರೆ ಎರಡೂ ಬದಿಯ ಜನರಿಗೆ ಅನುಕೂಲವಾಗಲಿದೆ.
– ಸಾಂತಪ್ಪ ಗೌಡ ಪಿಜಕಳ,
ಹೋರಾಟ ಸಮಿತಿಯ ಅಧ್ಯಕ್ಷರು
Advertisement
ಸರ್ವಋತು ಸೇತುವೆ ಬೇಕುಇಲ್ಲಿ ಸರಕಾರದಿಂದ ಸರ್ವಋತು ಸೇತುವೆ ನಿರ್ಮಾಣ ಆಗಬೇಕೆಂಬ ಬಯಕೆ ನಮ್ಮೆಲ್ಲರದಾಗಿದೆ. ಇಲ್ಲಿ ಶಾಶ್ವತ ಸೇತುವೆ ನಿರ್ಮಾಣವಾದರೆ ಈ ಭಾಗದ ಸಾರ್ವಜನಿಕರಿಗೆ ಬಹಳ ದೊಡ್ಡ ಪ್ರಯೋಜನ ಇದೆ. ನಾಲ್ಕು ವರ್ಷಗಳಿಂದ ಊರವರೇ ಸೇರಿಕೊಂಡು ತಾತ್ಕಾಲಿಕ ಸೇತುವೆ ನಿರ್ಮಿಸುತ್ತಿದ್ದೇವೆ. ಈ ಬಾರಿ ಎಡಮಂಗಲ ಭಾಗದ ಜನರು ಹೆಚ್ಚಿನ ಶ್ರಮ ವಹಿಸಿದ್ದಾರೆ. ಕಡಬ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಪಾಲೋಳಿಯಲ್ಲಿ ನೀರು ಸಂಗ್ರಹಿಸಲು ಕಿಂಡಿ ಅಣೆಕಟ್ಟು ಕಟ್ಟಿ, ಅದರ ಮೇಲೆ ಸೇತುವೆ ನಿರ್ಮಿಸಿದರೆ ನೀರಿನ ಸಮಸ್ಯೆಯನ್ನೂ ನೀಗಿಸಬಹುದು. ಸರಕಾರ ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆ.
– ಜೋಸ್ ಕೆ.ಜೆ.,
ಕೇಂಜೂರು – ಎಡಮಂಗಲ ನಾಗರಾಜ್ ಎನ್.ಕೆ.