ಬೆಂಗಳೂರು: ಹೊಸ ಪಿಂಚಣಿ ಯೋಜನೆಗೆ (ಎನ್ ಪಿಎಸ್)ಒಳಪಡದ ಅಂಗನವಾಡಿ ನಿವೃತ್ತ ನೌಕರರಿಗೆ ಮಾಸಿಕ ನಿವೃತ್ತಿ ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮೀ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ನಗರದ ಸಂಪಂಗಿರಾಮನಗರದ ಸೂರಿಭವನದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಹೊಸ ಪಿಂಚಣಿ ಯೋಜನೆ ಅಡಿ 1955ಕ್ಕೂ ಮುಂಚೆ ಜನಿಸಿರುವ ಅಂಗನವಾಡಿ ನೌಕರರಿಗೆ ಪಿಂಚಣಿ ಸೌಲಭ್ಯವಿಲ್ಲ. ಹಾಗಾಗಿ, 2015 ಮುಂಚೆ ನಿವೃತ್ತಿಯಾದ ನೌಕರರು ನಿವೃತ್ತಿ ವೇತನವಿಲ್ಲದೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.
ರಾಜ್ಯಾದ್ಯಂತ ಎಂಟಕ್ಕೂ ಹೆಚ್ಚು ನೌಕರರು ಅನಾರೋಗ್ಯ ಹಾಗೂ ನೋಡಿಕೊಳ್ಳುವವರು ಇಲ್ಲದೇ ಸಾವಿಗೀಡಾಗಿದ್ದಾರೆ. ಸಂಬಳವೂ ಇಲ್ಲ ಪಿಂಚಣಿಯೂ ಇಲ್ಲ ಎಂದರೆ ನಿಜಕ್ಕೂ ಅಂತಹ ಕಷ್ಟದ ಜೀವನ ಯಾವ ನೌಕರರಿಗೂ ಬೇಡ. ನಿವೃತ್ತಿ ಸಮಯದಲ್ಲಿ ಹೊಸ ಪಿಂಚಣಿ ಯೋಜನೆ ಅಡಿ ಕೊಟ್ಟಿರುವ 30 ಸಾವಿರ ರೂಪಾಯಿಂದ ಜೀವನ ನಿರ್ವಹಣ ಕಷ್ಟ ಸಾಧ್ಯವಾಗಿದೆ ಎಂದರು.
1982ರಲ್ಲಿ ಸರ್ವೋತ್ಛ ನ್ಯಾಯಾಲಯವು ಪಿಂಚಣಿ ಎಂಬುದು ಕೊಡುಗೆಯಲ್ಲ ಅಥವಾ ಮಾಲೀಕನ ಇಚ್ಛೆಗೆ ಬಿಟ್ಟಿದ್ದೂ ಅಲ್ಲ. ಸರ್ಕಾರಿ ಸೇವೆ ಸಲ್ಲಿಸಿದವರಿಗೆ ಪಿಂಚಣಿ ಮೂಲಭೂತ ಹಕ್ಕಾಗಿರುತ್ತದೆ. ನಿವೃತ್ತಿ ನಂತರ ನೌಕರರಿಗೆ ಸರ್ಕಾರ ಪಿಂಚಣಿ ಮೂಲಕ ಸಾಮಾಜಿಕ – ಆರ್ಥಿಕ ಭದ್ರತೆ ನೀಡಬೇಕು ಎಂದಿತ್ತು. ಆ ತೀರ್ಪಿನ ಅನ್ವಯ ಸುಧಾರಣೆಗೆ 2001 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಪಿಂಚಣಿ ವ್ಯವಸ್ಥೆ ಸರಿಪಡಿಸಲು ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ ಎನ್‌ಪಿಎಸ್ (ಹೊಸ ಪಿಂಚಣಿ ಯೋಜನೆ) ಜಾರಿಗೆ ತಂದರು. ಆದರೆ, ಎನ್‌ಪಿಎಸ್‌ನಿಂದ 1955 ಪೂರ್ವದಲ್ಲಿ ಜನಿಸಿದ ಅಂಗನವಾಡಿ ನೌಕರರು ಬಲಿಪಶುವಾದರು ಎಂದರು.
ಎನ್‌ಪಿಎಸ್ ಒಳಪಡದ ಅಂಗನವಾಡಿ ಕಾರ್ಯಕರ್ತೆಯರಿಗೆ 50 ಸಾವಿರ ರೂ. ಸಹಾಯಕಿಯರಿಗೆ 30 ಸಾವಿರ ರೂ. ಇಡಗಂಟು ನೀಡಿ ನಿವೃತ್ತಿಗೊಳಿಸಲಾಗಿದೆ. ಈ ಹಣದಲ್ಲಿ ಜೀವನ ನಿರ್ವಹಣೆ ಹೇಗೆ ಸಾಧ್ಯ. ಮಾಸಿಕ ಖರ್ಚಿಗಾಗಿ ಅನೇಕ ನಿವೃತ್ತ ನೌಕರರು ಮತ್ತೆ ಕೂಲಿ ಕೆಲಸಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ. ಕೆಲವು ಪ್ರಕರಣಗಳಲ್ಲಿ ತಾಂತ್ರಿಕ ದೋಷ ಅಥವಾ ಹಳೇ ಪಿಂಚಣಿ ದಾಖಲೆ ಇಲ್ಲ ಎಂದು ಹೇಳಿಕೊಂಡು ಕಡಿಮೆ ಹಣ ಸಿಕ್ಕಿದೆ. ಕೆಲವರಿಗೆ ಕೆಲವಡೆ ಪಾನ್ ಕಾರ್ಡ್ ಇಲ್ಲ ಎಂದು ಹಣವನ್ನೇ ನೀಡಿಲ್ಲ. ಇತ್ತೀಚೆಗೆ ಆಯ್ಕೆಯಾಗುತ್ತಿರುವ ಹೊಸ ಅಂಗನವಾಡಿ ನೌಕರರಿಗೆ ಯಾವುದೇ ರೀತಿಯ ಪಿಂಚಣಿ ಯೋಜನೆಯನ್ನು ಅನ್ವಯಗೊಳಿಸಿಲ್ಲ ಎಂದು ಬೇಸರ ವ್ಯಕ್ತಪಡೆಸಿದರು.
ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಮಾತನಾಡಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ನಿವೃತ್ತಿ ವೇತನಕ್ಕಾಗಿ 2010 ರಿಂದ ಹೋರಾಟ ನಡೆಸುತ್ತಾ ಬಂದಿದೆ. ಹೋರಾಟಕ್ಕೆ ಬೆಂಬಲ ನೀಡಿದ್ದ ಬೇರೆ ಸಂಘಟನೆಗಳು ಈ ಹೊಸ ಪಿಂಚಣಿ ಯೋಜನೆಗೆ ಒಪ್ಪಿದ್ದಾರಿಂದ, ಇಂದು ಹಲವಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಾಸಿಕ ನಿವೃತ್ತಿ ವೇತನ ವಿಲ್ಲದೇ ಬರಿಗೈಯಲ್ಲಿ ಮನೆಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದರು.