Advertisement

ಹಣ ಬೇಡಿಕೆ: ಅಧಿಕಾರಿ ಸಿಡಿಸಿದ ಬಾಂಬ್‌

10:33 AM Sep 08, 2017 | Team Udayavani |

ಕಲಬುರಗಿ: ಸಭೆ ನಡೆದಾಗಲೊಮ್ಮೆ ಗದ್ದಲದಿಂದ ಕೂಡಿರುತ್ತಿದ್ದ ಪಾಲಿಕೆ ಸಭೆ ಈ ಬಾರಿ ಅಧಿಕಾರಿಗಳ ಹಾಗೂ ಸದಸ್ಯರ ನಡುವಿನ ಗುದ್ದಾಟಕ್ಕೆ ಸಾಕ್ಷಿಯಾಯಿತಲ್ಲದೇ ಜಾತಿ ವಿಷಯವಾಗಿ ಕಾವೇರಿದ ಚರ್ಚೆ ನಡೆಯಿತು.

Advertisement

ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ ಮಹಾಪೌರ ಶರಣಕುಮಾರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬ್ರಹ್ಮಪುರ ಠಾಣೆಯಲ್ಲಿ ಪಾಲಿಕೆ ಸದಸ್ಯ ಸಿದ್ಧಾರ್ಥ ಪಟ್ಟೇದಾರ ವಿರುದ್ಧ ಎಫ್‌ ಐಆರ್‌ ದಾಖಲಾಗಿರುವುದು ಹಾಗೂ ಪಾಲಿಕೆಯ ಪರಿಸರ ಇಂಜಿನಿಯರ್‌ ಸುಷ್ಮಾ ಸಾಗರ ಅವರು, ವಾರ್ಡ್‌ ನಂಬರ್‌ 50ರ ಸದಸ್ಯ ಸಿದ್ದಾರ್ಥ ಪಟ್ಟೇದಾರ ಹಣ ನೀಡುವಂತೆ ಒತ್ತಾಯಿಸಿದ್ದಲ್ಲದೇ ಹಣ ನೀಡಿದರಷ್ಟೇ ತಮ್ಮ ವಾರ್ಡ್‌ನಲ್ಲಿ ಕೆಲಸ ಮಾಡಲು ಬಿಡುತ್ತೇನೆ ಎಂದಿದ್ದಾರೆ ಎಂಬುದಾಗಿ ಸದನದಲ್ಲಿಯೇ ಆರೋಪಿಸಿದ ಘಟನೆ ನಡೆಯಿತು.

ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಅಧಿಕಾರಿ ಪರನಿಂತರೆ ಮಹಾಪೌರರು ಸದಸ್ಯರ ಪರ ನಿಂತರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಇದರಿಂದ ಸಭೆಯಲ್ಲಿ ಕೋಲಾಹಲ ಉಂಟಾಯಿತು. ಸಭೆ ನಿಯಂತ್ರಣ ಬಾರದಿದ್ದಕ್ಕೆ ಮಹಾಪೌರರೇ ಕೆಲ ಕಾಲ ಸಭೆ ಮುಂದೂಡಿದರು.

ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಹಾಗೂ ವಿಪಕ್ಷ ಸದಸ್ಯರು ಸದನದ ಸದಸ್ಯರಾಗಿರುವ ಸಿದ್ಧಾರ್ಥ ಪಟ್ಟೇದಾರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿರುವುದು ಸರಿಯಾದುದಲ್ಲ. ನಾವು ಸಾರ್ವಜನಿಕರ ಪರ ಕೆಲಸ ಮಾಡುವರು. ಅಭಿವೃದ್ಧಿ ಕಾರ್ಯಗಳ ಸಂಬಂಧ ಕೇಳಿದ್ದರೆ ದೂರು ನೀಡುವಂತಾದರೆ ತಮ್ಮ ಸೇವೆಯೇ ಬೇಡ ಎಂದು ಸದಸ್ಯರು ತಮ್ಮ ವಾದ ಮಂಡಿಸಿದರು.

ಆಯುಕ್ತ ಸುನೀಲಕುಮಾರ ಸದಸ್ಯರ ವಿರುದ್ಧ ಸುಮ್ಮನೇ ದೂರು ಕೊಟ್ಟಿಲ್ಲ. ಎಲ್ಲವನ್ನು ಅವಲೋಕಿಸಿಯೇ ದೂರು ನೀಡಲಾಗಿದೆ. ನಾವು ಜನರ ಕೆಲಸ ಮಾಡಲು ಬಂದಿದ್ದೇವೆ. ತಾವು ಬಂದ ಮೇಲೆ ಪಾಲಿಕೆ ಎಷ್ಟು ಸುಧಾರಣೆಯಾಗಿದೆ ಎಂಬುದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯ ಎಂದರು. ಆಗ ಸಭೆಯಲ್ಲಿದ್ದ ಸದಸ್ಯರೆಲ್ಲರೂ ಮುಗಿ ಬಿದ್ದರು. ಈ ಸಂದರ್ಭದಲ್ಲಿ ಆಯುಕ್ತರು, ಅಧಿಕಾರಿಗಳಿಂದ ತಮಗೇನಾದರೂ ನೋವಾಗಿದ್ದರೆ ಬೇಷರತ್‌ ಕ್ಷಮೆ ಕೋರುತ್ತೇನೆ ಎಂದು ಹೇಳಿ ಕೈ ಮುಗಿದರು.

Advertisement

ಎಫ್‌ಐಆರ್‌ ದಾಖಲು ಏಕೆ?: ವಾರ್ಡ್‌ ನಂಬರ 50ರ ವ್ಯಾಪ್ತಿಯಲ್ಲಿ ಪಾಲಿಕೆ ನೌಕರರಾದ ಲೋಕೇಶ, ಅರುಣಕುಮಾರ ಫಾಗಿಂಗ್‌ ಮಾಡಲು ತೆರಳಿದ್ದರು. ಈ ವೇಳೆ ಪಾಲಿಕೆ ಸದಸ್ಯ ಪಟ್ಟೇದಾರ ಅವರು ಇಬ್ಬರು ನೌಕರರನ್ನು ಕೂಡಿ ಹಾಕಿದ್ದರಂತೆ. ಆಗ ಪರಿಸರ ಅಧಿಕಾರಿ ಸುಷ್ಮಾ ಸಾಗರ ಅವರು, ಪಟ್ಟೇದಾರ ಅವರಿಗೆ ಕರೆ ಮಾಡಿದಾಗ, ಹಣ ನೀಡಿದರಷ್ಟೆ ಕೆಲಸ ಮಾಡಲು ಬಿಡುತ್ತೇನೆ. ಹಣ ನೀಡಲೇಬೇಕೆಂದು ಪೀಡಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅಲ್ಲದೆ ಅವಾಚ್ಯವಾಗಿ ನಿಂದಿಸಿದ್ದರು ಎಂದು ದೂರು ನೀಡಿರುವುದಾಗಿ ಸಾಗರ ಸಭೆಗೆ ವಿವರಿಸಿದರು.

ಆಗ ಮಾಜಿ ಮೇಯರ್‌ ಭೀಮರೆಡ್ಡಿ ಪಾಟೀಲ, ಸದಸ್ಯರು ಹಣದ ಬೇಡಿಕೆ ಇಟ್ಟಿಲ್ಲ. ಅದನ್ನು ಸಾಬೀತುಪಡಿಸಿ ಎಂದರಲ್ಲದೇ ಅಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ವಿಠuಲ ಜಾಧವ್‌, ಮಹೇಶ ಹೊಸೂರಕರ್‌, ಆರ್‌.ಎಸ್‌.ಪಾಟೀಲ ಇತರರು ಧ್ವನಿಗೂಡಿಸಿದರಲ್ಲದೇ ಇಂತಹ ಅಧಿಕಾರಿ ಸೇವೆ ತಮಗೆ ಬೇಡ ಎಂದು ಹೇಳಿದರು. ಅಧಿಕಾರಿ ಸುಷ್ಮಾ ಸಾಗರ ಮಾತನಾಡಿ, ಪಾಲಿಕೆಯಲ್ಲಿ ಜಾತೀಯತೆ ಮಾಡ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಜಾತಿ ವಿಷಯ ಬರಬಾರದು, ನೀವೂ ಪರಿಶಿಷ್ಟ ಜಾತಿ, ಪಟ್ಟೇದಾರ ಸಹ ಪರಿಶಿಷ್ಟ ಜಾತಿ. ಅಂದ ಮೇಲೆ ಜಾತಿ ವಿಷಯ ಯಾಕೆ ಎಂದು ರಮಾನಂದ ಉಪಾಧ್ಯಾಯ ಪ್ರಶ್ನಿಸಿದರು. ವಿಪಕ್ಷ ಸದಸ್ಯ ವಿಶಾಲ ದರ್ಗಿ ಜಾತಿ ವಿಷಯ ಬಗ್ಗೆ ಮಾತನಾಡಬಾರದು. ಒಬ್ಬರನ್ನೇ ಗುರಿ ಮಾಡುವುದು ಸರಿಯಲ್ಲ. ಸದಸ್ಯರಾದ ನಾವೆಲ್ಲರೂ ಎಲ್ಲ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದಾಗಿ ಆರೋಪಿಸುತ್ತೇವೆ. ಹೀಗಾಗಿ ಎಲ್ಲ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದರು. ಮಹಾಪೌರರು ಜಾತಿ ವಿಷಯ ಬೇಡ. 

ಹೀಗಾದರೆ ಜನ ಸಾಮಾನ್ಯ ಸದಸ್ಯರು ಹೊರ ಬರಲು ಭಯ ಪಡುವಂತಾಗುತ್ತದೆ ಎಂದರು. ಘಟನೆ ಕುರಿತಾಗಿ ಸರ್ಕಾರಕ್ಕೆ ವರದಿ ಕಳುಹಿಸುತ್ತೇನೆ ಎಂದು ಆಯುಕ್ತರು ಹೇಳಿದರು. ಅಧಿಕಾರಿ ಸುಷ್ಮಾ ಸಾಗರ ಅವರನ್ನು ಈಗ ನಿರ್ವಹಿಸುತ್ತಿರುವ ಹುದ್ದೆಯಿಂದ ಬಿಡುಗಡೆಗೊಳಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಒಟ್ಟಾರೆ ಸಭೆಯಲ್ಲಿ ಮಹಾಪೌರರು ಸದಸ್ಯರ ಪರ ನಿಂತರೆ, ಪಾಲಿಕೆ ಆಯುಕ್ತರು ನೌಕರರ ಪರ ನಿಂತಿದ್ದು ಕಂಡುಬಂತು.

15 ದಿನದಲ್ಲಿ ಒತ್ತುವರಿ ತೆರವಿಗೆ ಸೂಚನೆ

ಕಲಬುರಗಿ: ಪಾಲಿಕೆಯ ಆಸ್ತಿಗಳನ್ನು ಅದರಲ್ಲೂ ಸುಪರ ಮಾರ್ಕೆಟ್‌ನ ವಾಣಿಜ್ಯ ಮಳಿಗೆ ಹಾಗೂ ಇತರ ಆಸ್ತಿಗಳನ್ನು ಮರು ಗುತ್ತಿಗೆ ನೀಡುವ ಅಧಿಕಾರ ಮಹಾಪೌರರಿಗೆ ನೀಡುವ ಅಧಿಕಾರ ಗುರುವಾರ ನಡೆದ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸುಪರ ಮಾರ್ಕೆಟ್‌ನ ಕೆಲ ಅಂಗಡಿಗಳಿಗೆ ಗುತ್ತಿಗೆ ನೀಡುವ ಕುರಿತಾಗಿ ನೋಟಿಸ್‌ ನೀಡಿರುವುದು ಸಮಂಜಸವಲ್ಲ. ಒಂದು ವೇಳೆ ನೋಟಿಸ್‌ ನೀಡುವಂತೆ ಪಾಲಿಕೆಯ ಎಲ್ಲ ಗುತ್ತಿಗೆ ಆಸ್ತಿಗಳಿಗೆ ಸಂಬಂಧಪಟ್ಟಂತೆ ನೀಡಲಿ ಎಂದು ಮಾಜಿ
ಮಹಾಪೌರ ಸೈಯದ್‌ ಅಹ್ಮದ ಹಾಗೂ ವಿಶಾಲ ದರ್ಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಸುದೀರ್ಘ‌ ಚರ್ಚೆ ನಡೆದು ಪಾಲಿಕೆಯ ಆಸ್ತಿಗಳನ್ನು ಮರು ಗುತ್ತಿಗೆ ನೀಡುವ ಅಧಿಕಾರ ಮಹಾಪೌರ ಶರಣಕುಮಾರ ಮೋದಿ ಅವರಿಗೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಶೀಘ್ರದಲ್ಲಿ ಬೀದಿ ದೀಪ ನಿರ್ವಹಣೆಗೆ ಹೊಸ ಗುತ್ತಿಗೆ: ಬೀದಿ ದೀಪ ನಿರ್ವಹಣೆಗೆ ಶೀಘ್ರದಲ್ಲಿಯೇ ಹೊಸ ಗುತ್ತಿಗೆ ಕರೆಯುವ ಕುರಿತಾಗಿ ಸಭೆಯಲ್ಲಿ ನಿರ್ಧರಿಸಲಾಯಿತು. ಬರೀ ಮೂರೇ ಗುತ್ತಿಗೆದಾರರಿಗೆ ಮಣೆ ಹಾಕುವುದರಕ್ಕಿಂತ ಇತರರನ್ನು ಗುರುತಿಸಿ ಕಾರ್ಯಕ್ಷಮತೆ ಹೆಚ್ಚಳವಾಗಬೇಕೆಂದು ಸದಸ್ಯರು ಸಲಹೆ ನೀಡಿದರು. ಸರಿಯಾಗಿ ಕಾರ್ಯನಿರ್ವಹಿಸದಿದ್ದಕ್ಕೆ ದಂಡ ಹಾಕುವ ಬದಲು ಪರ್ಯಾಯ ಕ್ರಮ ಕೈಗೊಳ್ಳುವಂತೆ ಆಗಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಾಪೌರ ಶರಣಕುಮಾರ ಮೋದಿ ಅವರು, ಮೊದಲು ಅಲ್ಪಾವಧಿ ಟೆಂಡರ್‌ ಕರೆದು ತದನಂತರ ಹೊಸ ಗುತ್ತಿಗೆ ಕರೆಯಲಾಗುವುದು ಎಂದು ಸಭೆಯಲ್ಲಿ ಪ್ರಕಟಿಸಿದರು. 

ಒತ್ತುವರಿ ತೆರವು: ಮಹಾನಗರದಲ್ಲಿ ಒತ್ತುವರಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಒತ್ತುವರಿಯನ್ನು ದೃಢಿಕರಿಸಿ ಸೂಕ್ತ ಪೊಲೀಸ್‌ ಬಂದೋಬಸ್ತ್ದೊಂದಿಗೆ ತೆರಳಿ ಒತ್ತುವರಿ ತೆರವುಗೊಳಿಸಬೇಕು. 15 ದಿನದೊಳಗೆ ಈ ಕೆಲಸ ಮುಗಿಸಿ ಎಂದು ಮಹಾಪೌರರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಉತ್ತರ ನೀಡಿದ ಅಧಿಕಾರಿಗಳು, ಒತ್ತುವರಿ ಕಾರ್ಯಾಚರಣೆ ಚಾಲ್ತಿಯಲ್ಲಿದೆ. ಪ್ರಮುಖವಾಗಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸದ ಕಟ್ಟಡದಾರರಿಗೆ ನೋಟಿಸ್‌ ಸಹ ನೀಡಲಾಗುತ್ತಿದೆ ಎಂದು ಸಭೆ ಗಮನಕ್ಕೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next