Advertisement

ಸ್ಥಳೀಯ ಕಾರ್ಮಿಕರಿಗೆ ಡಿಮ್ಯಾಂಡೋ

10:19 AM Jun 08, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ ನಿಧಾನವಾಗಿ ತೆರೆದುಕೊಳ್ಳುತ್ತಿದ್ದಂತೆಯೇ ಅವಕಾಶಗಳ ಲಭ್ಯತೆ ಕೂಡ ಹೆಚ್ಚಾಗುತ್ತಿದೆ. ಕೈಗಾರಿಕೋದ್ಯಮಗಳು ಹಾಗೂ ಕಟ್ಟಡ ಕಾಮಗಾರಿ ಆರಂಭಗೊಂಡಿದ್ದರಿಂದ ಕಾರ್ಮಿಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ಉದ್ಯಮ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನ್ಯ ರಾಜ್ಯಗಳ ಕಾರ್ಮಿಕರಲ್ಲಿ ಹೆಚ್ಚಿನವರು ತಮ್ಮ ರಾಜ್ಯಕ್ಕೆ ಮರಳಿದ್ದರಿಂದ ಸ್ಥಳಿಯ ಕಾರ್ಮಿಕರಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ.

Advertisement

ಕೌಶಲ್ಯ ಕಾರ್ಮಿಕರಿಗೆ ಯಾವಾಗಲೂ ಇತರ ಕಾರ್ಮಿಕರಿಗಿಂತ ಹೆಚ್ಚು ಬೇಡಿಕೆ ಇದೆ. ಆದರೀಗ ಡಿಮ್ಯಾಂಡ್‌ ಇನ್ನಷ್ಟು ಹೆಚ್ಚಾಗಿದೆ. ಉದ್ಯಮ ಘಟಕಗಳಿಗೆ ಹೊಸ ಆರ್ಡರ್‌ಗಳು ನಿರೀಕ್ಷಿತ ಪ್ರಮಾಣದಲ್ಲಿ ಲಭಿಸುತ್ತಿಲ್ಲವಾದರೂ ಬಾಕಿ ಕಾರ್ಯವನ್ನು ಪೂರ್ಣಗೊಳಿಸುವ ದಿಸೆಯಲ್ಲಿ ಉದ್ಯಮ ಘಟಕಗಳು ಕಾರ್ಯೋನ್ಮುಖವಾಗಿವೆ. ಕೆಲಸ ನೀಡಿದ ಸಂಸ್ಥೆಗಳು ತ್ವರಿತಗತಿಯಲ್ಲಿ ಡಿಲಿವರ್‌ ಮಾಡುವಂತೆ ಒತ್ತಡ ಹೇರುತ್ತಿವೆ. ಈ ನಿಟ್ಟಿನಲ್ಲಿ ಸಾಮಾನ್ಯ ಕಾರ್ಮಿಕರಿಗಿಂತ ಕೌಶಲ್ಯ ಕಾರ್ಮಿಕರ ಬೇಡಿಕೆ ಕೂಡಾ ಹೆಚ್ಚಿರುತ್ತದೆ. ಕೌಶಲ್ಯ ಕಾರ್ಮಿಕರ ಕೊರತೆ ತುಂಬಲು ಉದ್ಯಮಿಗಳು ಹೆಣಗುತ್ತಿದ್ದಾರೆ.

ನೈರುತ್ಯ ರೈಲ್ವೆ ದೇಶದ ಉತ್ತರ ಹಾಗೂ ಈಶಾನ್ಯ ಭಾಗದ ಕಾರ್ಮಿಕರಿಗಾಗಿಯೇ ಶ್ರಮಿಕ ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸುತ್ತಿರುವುದರಿಂದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಆದರೆ ಇಲ್ಲಿ ಉತ್ಪಾದನೆ ಹೆಚ್ಚಿಸುವ ಅನಿವಾರ್ಯತೆಯಿಂದ ಸ್ಥಳಿಯ ಕೌಶಲ್ಯಯುತ ಹಾಗೂ ಕೌಶಲ್ಯರಹಿತ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಉದ್ಯಮಿಗಳು ಕಾರ್ಮಿಕರಿಗಾಗಿ ಏಜೆಂಟರನ್ನು ಅವಲಂಬಿಸಬೇಕಾಗಿದೆ. ಏಜೆಂಟರು ಸುತ್ತಮುತ್ತಲಿನ ಊರುಗಳಿಂದ ಕಾರ್ಮಿಕರನ್ನು ಕರೆತರುತ್ತಿದ್ದಾರೆ. ಕೆಲ ಉದ್ಯಮಿಗಳು ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದ ಸಂಬಳ ನೀಡಲು ಮುಂದಾಗಿದ್ದಾರಲ್ಲದೇ ಹಲವು ಸೌಲಭ್ಯ ಒದಗಿಸುತ್ತಿದ್ದಾರೆ.

ಅನ್ಯ ರಾಜ್ಯಗಳಿಂದ ದುಡಿಯಲು ಬಂದ ಕಾರ್ಮಿಕರಿಗೆ ದುಡಿದು ತಮ್ಮ ಮನೆಗೆ ಹಣ ಕಳಿಸುವ ಅನಿವಾರ್ಯತೆ ಇರುವುದರಿಂದ ಅವರು ಓವರ್‌ ಟೈಮ್‌ ಕೆಲಸ ಮಾಡುತ್ತಾರೆಂಬುದು ಉದ್ಯಮಿಗಳ ಅಭಿಪ್ರಾಯ. ಪ್ರತಿದಿನ ರೈಲಿನ ಮೂಲಕ ಹುಬ್ಬಳ್ಳಿಗೆ ಸಹಸ್ರಾರು ಕಾರ್ಮಿಕರು ಬರುತ್ತಿದ್ದರು. ಈಗ ರೈಲು ಸೇವೆ ಸ್ಥಗಿತಗೊಂಡಿದೆ. ಇಲ್ಲಿಗೆ ಬರುವವರಲ್ಲಿ ಹೆಚ್ಚಿನವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಲಾಕ್‌ ಡೌನ್‌ ಕಾರಣದಿಂದ ಕಟ್ಟಡ ಕಾಮಗಾರಿ ಕ್ಷೇತ್ರ ಸ್ಥಗಿತಗೊಂಡಿತ್ತು. ಆದರೆ ಈಗ ಕಾಮಗಾರಿ ನಿಧಾನ ಗತಿಯಲ್ಲಿ ಆರಂಭಗೊಂಡಿದೆ.

ಹಳ್ಳಿಯಿಂದ ಬರುತ್ತಿದ್ದ ಕಾರ್ಮಿಕರಲ್ಲಿ ಹೆಚ್ಚಿನವರು ಊರಲ್ಲಿಯೇ ಕೂಲಿ ಮಾಡುತ್ತಿದ್ದಾರೆ. ಮುಂಗಾರು ಮಳೆ ಆರಂಭಗೊಂಡಿದ್ದರಿಂದ ಹೊಲ-ಗದ್ದೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಆದ್ದರಿಂದ ಹುಬ್ಬಳ್ಳಿಗೆ ಉದ್ಯೋಗ ಅರಸಿ ಬರುವವರ ಸಂಖ್ಯೆ ಕಡಿಮೆಯಾಗಿದೆ. ಕೋವಿಡ್ ಸೋಂಕು ಹರಡುತ್ತಿರುವ ಪ್ರಮಾಣ ನಗರದಲ್ಲಿ ಹೆಚ್ಚಾಗಿರುವುದು ಕಾರ್ಮಿಕರ ಕೊರತೆ ಉಂಟಾಗಲು ಕಾರಣವಾಗಿದೆ. ಆರೋಗ್ಯ ರಕ್ಷಿಸಿಕೊಳ್ಳುವ ಉದ್ದೇಶದಿಂದ ಕೆಲವರು ಹುಬ್ಬಳ್ಳಿಗೆ ಬರುತ್ತಿಲ್ಲ.

Advertisement

ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಛತ್ತಿಸಗಢ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ನಗರದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಈಗ ಕಾರ್ಮಿಕರ ಕೊರತೆ ಎದುರಾಗಿದ್ದರಿಂದ ಸ್ಥಳಿಯ ಕಾರ್ಮಿಕರನ್ನು ಹುಡುಕಿ ತರಬೇಕಿದೆ. ಕಾರ್ಮಿಕರ ರಕ್ಷಣೆಗಾಗಿ ಕೆಲ ಉದ್ಯಮಿಗಳು ವಾಹನ ವ್ಯವಸ್ಥೆಯನ್ನೂಮಾಡಿಕೊಡುತ್ತಿದ್ದಾರೆ. ಆದರೂ ಕಾರ್ಮಿಕರು ಬೇಡಿಕೆಗನುಗುಣವಾಗಿ ಸಿಗುತ್ತಿಲ್ಲ. ಹಳ್ಳಿಗಳಿಂದ ನಗರಕ್ಕೆ ಬರುತ್ತಿದ್ದ ಕಾರ್ಮಿಕರಲ್ಲಿ ಹೆಚ್ಚಿನವರು ತಮ್ಮ ಊರಿನಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಹೊಲಗಳಲ್ಲಿ ಮುಂಗಾರು ಬಿತ್ತನೆ ಪ್ರಕ್ರಿಯೆ ಮುಗಿದ ನಂತರ ಕಾರ್ಮಿಕರ ಲಭ್ಯತೆ ಹೆಚ್ಚಾಗಬಹುದಾಗಿದೆ. ಅಲ್ಲದೇ ಬಸ್‌ ಸಂಚಾರ ಮುಕ್ತಗೊಂಡ ನಂತರ ನಗರಕ್ಕೆ ಉದ್ಯೋಗಕ್ಕಾಗಿ ಬರುವವರ ಸಂಖ್ಯೆ ಹೆಚ್ಚಲಿದೆ. ಲೋಡಿಂಗ್‌, ಅನ್‌ಲೋಡಿಂಗ್‌ ಮಾಡುವ, ಮರಳು, ಇಟ್ಟಿಗೆ ಸಾಗಿಸುವ ಸಹಾಯಕರು ಕೂಡ ಸಿಗುತ್ತಿಲ್ಲ.-ವೀರೇಶ, ಕಾರ್ಮಿಕರನ್ನು ಕರೆತರುವ ಏಜೆಂಟ್‌

ಕೋವಿಡ್ ಲಾಕ್‌ಡೌನ್‌ ಕಾರಣದಿಂದ ತತ್ತರಿಸಿದ್ದ ಉದ್ಯಮ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ. ಸ್ಥಳಿಯ ಕಾರ್ಮಿಕರು ಅವಕಾಶ ಸದ್ಬಳಕೆ ಮಾಡಿಕೊಳ್ಳಲು ಇದು ಸಕಾಲವಾಗಿದೆ. ಇಲ್ಲಿನ ಕಾರ್ಮಿಕರೇ ಲಭಿಸಿದರೆ ಅನ್ಯ ರಾಜ್ಯದವರನ್ನು ಅವಲಂಬಿಸುವ ಸಂದರ್ಭವೇ ಬರಲ್ಲ. ಉದ್ಯಮ ಘಟಕಗಳಲ್ಲಿ ಹೊಸ ಕೆಲಸಗಳು ಸಿಗುತ್ತಿಲ್ಲವಾದರೂ ಬಾಕಿ ಕೆಲಸಗಳನ್ನು ತ್ವರಿತಗತಿಯಲ್ಲಿ ಮುಗಿಸಿಕೊಡಬೇಕಿದೆ. ಆದ್ದರಿಂದ ದುಡಿಯಲು ಆಸಕ್ತಿ ಹೊಂದಿದ ಸ್ಥಳಿಯರು ಉದ್ಯಮ ಘಟಕಗಳಿಗೆ ಬರಬಹುದಾಗಿದೆ. ಕೌಶಲ್ಯ ಪಡೆದ ಸ್ಥಳಿಯ ಕಾರ್ಮಿಕರಿಗಂತೂ ಬೇಡಿಕೆ ನಿರಂತರವಾಗಿದೆ.  –ವಿನಯ ಜವಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ

 

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next