ಧಾರವಾಡ: ಶ್ರೀರಾಮನಗರ ವಸತಿ ನಿರಾಶ್ರಿತರಿಗೆ ನಿವೇಶನ ಮಂಜೂರಾತಿ ಹಾಗೂ ಬೇಲೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಬಗರಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿಗೆ ಆಗ್ರಹಿಸಿ ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ಡಿಸಿ ಕಚೇರಿ ಎದುರು ಸೋಮವಾರ ಧರಣಿ ನಡೆಸಲಾಯಿತು.
ರಾಜ್ಯಾಧ್ಯಕ್ಷ ಬಿ. ಚನ್ನಕೃಷ್ಣಪ್ಪ ನೇತೃತ್ವದಲ್ಲಿ ಶ್ರೀರಾಮನಗರದ ನೂರಾರು ವಸತಿ ನಿರಾಶ್ರಿತರು ಕಡಪಾ ಮೈದಾನದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಸಂಜೆವರೆಗೆ ಧರಣಿ ಕೈಗೊಂಡು ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಡಿಸಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ಮನೆ ಅಥವಾ ನಿವೇಶನ ಇಲ್ಲದವರ ಪಟ್ಟಿ ಸಿದ್ಧಪಡಿಸಿ ಅಗತ್ಯ ದಾಖಲೆಯೊಂದಿಗೆ ವರದಿ ಸಲ್ಲಿಸಿದರೆ ಅರ್ಹರಿಗೆ ವಸತಿ ಅಥವಾ ನಿವೇಶನಕ್ಕೆ ಕ್ರಮ ಕೈಗೊಳ್ಳುತ್ತೇನೆ. ಬಗರಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಈಗ ಅವಕಾಶವಿಲ್ಲ.
ಈ ಕಾಯ್ದೆ ತಿದ್ದುಪಡಿ ಸರಕಾರದ ವಿವೇಚನೆಗೆ ಬಿಟ್ಟಿದ್ದು. ಈ ಕುರಿತಂತೆ ಸರಕಾರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಶ್ರೀರಾಮನಗರದ 900 ಕುಟುಂಬಗಳ ವಸತಿಗಾಗಿ ಲಕಮನಹಳ್ಳಿ ಸ.ನಂ.165/ಅ ರಲ್ಲಿ 27 ಎಕರೆ 8 ಗುಂಟೆ ಜಮೀನು ಮಂಜೂರು ಮಾಡಬೇಕು.
ಕೊಳಚೆ ನಿರ್ಮೂಲನಾ ಮಂಡಳಿಗೆ ಈ ಜಾಗ ನೀಡಿ ನಿವೇಶನ ಅಭಿವೃದ್ಧಿಪಡಿಸಿ ವಸತಿ ನಿರ್ಮಿಸಿ ನಿರಾಶ್ರಿತರಿಗೆ ಹಂಚಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.
ಬೇಲೂರು ಗ್ರಾಪಂ ವ್ಯಾಪ್ತಿಯ ಹೆಗ್ಗೇರಿ, ಮುಮ್ಮಿಗಟ್ಟಿ, ಬೇಲೂರು, ಅಂಬ್ಲಿಕೊಪ್ಪ, ಮುಮ್ಮಿಗಟ್ಟಿ ತಾಂಡಾ, ತಡಸಿನಕೊಪ್ಪ ಸೇರಿದಂತೆ 98 ಬಗರ್ ಸಾಗುವಳಿದಾರರಿಂದ ಹೊಸದಾಗಿ ಅರ್ಜಿ ಸೀಕರಿಸಿ ಜಮೀನು ಮಂಜೂರು ಮಾಡುವಂತೆ ಸಿಎಂಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ. ಹನುಮಂತಪ್ಪ ಕಟ್ಟಿಮನಿ, ಜಿಲ್ಲಾ ಸಫಾಯಿ ಕರ್ಮಚಾರಿ ಸಂಘದ ಸದಸ್ಯ ಲಕ್ಷ್ಮಣ ಬಕ್ಕಾಯಿ ಇತರರಿದ್ದರು.