Advertisement

ಕನ್ನಡ ನಾಮಫ‌ಲಕಗಳ ಅಳವಡಿಕೆಗೆ ಆಗ್ರಹ

12:38 PM Oct 31, 2018 | Team Udayavani |

ಮೈಸೂರು: ರಾಜ್ಯದೆಲ್ಲೆಡೆ ಕಡ್ಡಾಯವಾಗಿ ಕನ್ನಡದಲ್ಲೇ ನಾಮಫ‌ಲಕಗಳನ್ನು ಅಳವಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಮಂಗಳವಾರ ನಗರದ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. 

Advertisement

ರಾಜ್ಯದಲ್ಲಿ ಶೇ.60 ನಾಮಫ‌ಲಕಗಳು ಕನ್ನಡದಲ್ಲೇ ಇರಬೇಕೆಂಬ ಆದೇಶವಿದೆ. ಹೀಗಿದ್ದರೂ ರಾಜ್ಯದಲ್ಲಿ ವಿವಿಧ ವ್ಯಾಪಾರ-ವಹಿವಾಟು ನಡೆಸುವವರು ಹೆಚ್ಚಾಗಿ ಅನ್ಯಭಾಷೆಯಲ್ಲೇ ನಾಮಫ‌ಲಕಗಳನ್ನು ಹಾಕುತ್ತಾರೆ. ಇದರಿಂದಾಗಿ ರಾಜ್ಯದಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಅನ್ಯಭಾಷೆ ಬಳಕೆ ಹೆಚ್ಚಾಗಿದ್ದು, ಕನ್ನಡ ಬಳಕೆಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜಿಲ್ಲಾಡಳಿತ ಈ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿ ವಿವಿಧ ಘೋಷಣೆಗಳನ್ನು ಕೂಗಿದರು. 

ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್‌ ಲೋಕೇಶ್‌ಗೌಡ ಮಾತನಾಡಿ, ರಾಜ್ಯದಲ್ಲಿ ವ್ಯಾಪಾರ-ವಹಿವಾಟು ನಡೆಸಲು ವಾಣಿಜ್ಯ ಪರವಾನಗಿ ನೀಡುವಾಗ ಅಂಗಡಿ, ಹೋಟೆಲ್‌ ಮತ್ತು ಕಂಪನಿಗಳು ಕಡ್ಡಾಯವಾಗಿ ಕನ್ನಡದಲ್ಲಿ ನಾಮಫ‌ಲಕ ಬಳಕೆ ಮಾಡುವಂತೆ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅಂಗಡಿಗಳ ಮುಂದೆ ಅಳವಡಿಸುವ ಮತ್ತು ಅಳವಡಿಸಿರುವ ನಾಮಫ‌ಲಕಗಳಲ್ಲಿ ಶೇ.50 ಕನ್ನಡ ಭಾಷೆ ಇರಬೇಕು. ಇಲ್ಲವಾದಲ್ಲಿ ಅಂತಹ ವಾಣಿಜ್ಯ ಸಂಸ್ಥೆಗಳ ಪರವಾನಗಿ ರದ್ದುಪಡಿಸಬೇಕೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಇದಕ್ಕಾಗಿ ಮುಂದೆ ರಾಜ್ಯದ ಎಲ್ಲೆಡೆ ಬೃಹತ್‌ ಕನ್ನಡ ನಾಮಫ‌ಲಕ ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕೆ ಸರ್ಕಾರ, ಜಿಲ್ಲಾಡಳಿತ ಹಾಗೂ ಸ್ಥಳೀಯ ಪಾಲಿಕೆಗಳು ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಪಿ.ಪ್ರಜೀಶ್‌, ಆರ್‌.ಶಾಂತಮೂರ್ತಿ, ಸಿ.ಎಸ್‌.ನಂಜುಂಡಸ್ವಾಮಿ, ಶಾಂತರಾಜೇ ಅರಸ್‌, ಜಗದೀಶ್‌ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next