ಸುರಪುರ: ದಲಿತರಿಗೆ ಮೀಸಲಿಟ್ಟ ಅಭಿವೃದ್ಧಿ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ತಾಪಂ ಕಚೇರಿ ಎದುರು ಪ್ರತಿಭಟಿಸಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.
ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಆಲ್ಹಾಳ ಮಾತನಾಡಿ, ದಲಿತರಿಗೆ ಮೀಸಲಿಟ್ಟ ಅಭಿವೃದ್ಧಿ ಹಣ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. 5 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆ ದೌರ್ಜನ್ಯ ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ರೈತ ಸಂಘದ ಮುಖಂಡ ಯಲ್ಲಪ್ಪ ಚಿನ್ನಕಾರ ಮಾತನಾಡಿ, ಪ್ರತಿ ವರ್ಷ ಐದು ನೂರು ಎಕರೆ ಭೂಮಿ ಖರೀದಿಸಿ ಭೂ ರಹಿತ ದಲಿತರಿಗೆ ಭೂಮಿ ನೀಡಬೇಕು. ನಿವೇಶನ ರಹಿತ ದಲಿತರಿಗೆ ನಿವೇಶನ ನೀಡಬೇಕು. ದಲಿತರಿಗೆ ಪ್ರತೇಕ ಸ್ಮಶಾನ ಭೂಮಿ ಮಂಜೂರು ಮಾಡಬೇಕು. 200 ಮಾನವ ದಿನ ನಿರ್ಮಿಸಿ ಖಾತ್ರಿ ಯೋಜನೆ ಅಡಿ ಕೂಲಿ ಹೆಚ್ಚಿಸಿ ಕಾರ್ಮಿಕರಿಗೆ ಕೆಲಸ ನೀಡಬೇಕು. ದೌರ್ಜನ್ಯಕೊಳಗಾದ ದಲಿತ ಕಟುಂಬಗಳ ಪರಿಹಾರ ಧನ ಹೆಚ್ಚಿಸಬೇಕು. ದೌರ್ಜನ್ಯ ತಡೆಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ದಲಿತ ಜನಸಂಖ್ಯೆಗನುಗುಣವಾಗಿ ಪರಿಶಿಷ್ಟ ಯೋಜನೆಗೆ ಅನುದಾನ ನೀಡಬೇಕು. ಸ್ಮಶಾನ ನಿರ್ವಹಣೆಗೆ ದಲಿತರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗೆ ಬರೆದ 17 ಬೇಡಿಕೆಗಳ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸೊಫಿಯಾ ಸುಲ್ತಾನ್ ಅವರಿಗೆ ಸಲ್ಲಿಸಿದರು. ಸಮಿತಿ ಮುಂಖಡರಾದ ಭೀಮರಾಯ, ಪರುಶುರಾಮ ಮುದ್ನೂರ, ಬೀರಲಿಂಗ ಗೌಡಗೇರಿ, ಅಶೋಕ ಹದ್ನೂರ, ಮಲ್ಲು ಜೈನಾಪುರ, ಮೂರ್ತಿ ಬೊಮ್ಮನಳ್ಳಿ, ಶರಣು, ವಿನೋದ, ಬಸವರಾಜ, ವೆಂಕಟೇಶ, ರಮೇಶ, ನಾಗಣ್ಣ ಕಲ್ಲದೇವನಳ್ಳಿ, ಮಾಳಪ್ಪ ಕಿರದಳ್ಳಿ, ರಮೇಶ ಅರಕೇರಿ, ಶಿವಶಂಕರ ಹೊಸ್ಮನಿ, ನಿಂಗಣ್ಣ ಗೋನಾಲ ಇದ್ದರು.