ಕುಂದಾಪುರ: ಮಂಗಳೂರಿನಿಂದ ಮೈಸೂರು ಮೂಲಕ ಬೆಂಗಳೂರಿಗೆ ಸಂಚರಿಸುತ್ತಿರುವ ರೈಲನ್ನು ಕಾರವಾರದವರೆಗೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಬಗ್ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಹೊಸದಿಲ್ಲಿಯಲ್ಲಿ ಮನವಿ ಸಲ್ಲಿಸಿದ್ದು, ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
“ಉದಯವಾಣಿ’ ಜತೆ ಮಾತನಾಡಿದ ಪ್ರತಾಪ್ ಅವರು, ಮೈಸೂರು ರೈಲನ್ನು ವಾರದ 7 ದಿನಗಳ ಕಾಲ ಕಾರವಾರದ ವರೆಗೆ ವಿಸ್ತರಿಸಲು ಕೇಂದ್ರ ಸಚಿವರಿಗೆ ಈ ಹಿಂದೆಯೇ ಮನವಿ ಸಲ್ಲಿಸಿದ್ದೆ. ಮೈಸೂರು, ಕುಂದಾಪುರ, ಕಾರವಾರ ಭಾಗದಿಂದಲೂ ಈ ಬಗ್ಗೆ ಒತ್ತಾಯಗಳು ಕೇಳಿ ಬಂದಿದ್ದವು. ಆದರೆ ಈಗ ಮಂಗಳೂರಿಗೆ ಮಾತ್ರ ಸೀಮಿತಗೊಳಿಸಿದ್ದ ಬಗ್ಗೆ ಮತ್ತೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ ಎಂದರು.
ಮಂಗಳೂರಿಗರಿಗೆ ಸೀಟು ಕೊರತೆ:
ನೆಪವೊಡ್ಡಿ ವಿಸ್ತರಣೆಗೆ ಅಡ್ಡಿಪಡಿಸು ತ್ತಿದ್ದು, ಈ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದು, ಈಗಿರುವ 16 ಬೋಗಿಗಳ ಜತೆಗೆ ಇನ್ನು ಹೆಚ್ಚುವರಿಯಾಗಿ 3 ಬೋಗಿಗಳನ್ನು ಸೇರಿಸಿ, ಕಾರವಾರದ ವರೆಗೆ ವಿಸ್ತರಿಸಿದರೆ ಹೆಚ್ಚಿನ ಕೋಟಾ ಗಳು ಲಭ್ಯವಾಗಲಿವೆ ಎನ್ನುವುದನ್ನು ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಮೈಸೂರು ಸಂಸದರು ತಿಳಿಸಿದ್ದಾರೆ.
ಮಂಗಳೂರು ವರೆಗೆ ಮಾತ್ರ ಸೀಮಿತವಾದ ಈ ರೈಲನ್ನು ಕಾರವಾರದವರೆಗೆ ವಿಸ್ತರಿಸಿದರೆ ಕರಾವಳಿ ಭಾಗಕ್ಕೆ ಬೈಂಗಳೂರನ್ನು ಸಂಪರ್ಕಿಸಲು ಮತ್ತೂಂದು ರೈಲು ಸಿಕ್ಕಂತಾಗಲಿದೆ. ಮಾತ್ರವಲ್ಲದೆ ಮೈಸೂರಿನಿಂದ ಉಡುಪಿ, ಕೊಲ್ಲೂರು, ಗೋಕರ್ಣ, ಮುಡೇìಶ್ವರಕ್ಕೆ ಬರುವ ಭಕ್ತರು, ಪ್ರವಾಸಿಗರಿಗೆ, ಈ ಭಾಗದಿಂದ ಮೈಸೂರಿಗೆ ತೆರಳುವವರಿಗೂ ಬಹಳಷ್ಟು ಅನುಕೂಲವಾಗಲಿದೆ ಎನ್ನುವುದು ಕುಂದಾಪುರ, ಕಾರವಾರ ಭಾಗದ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಭಿಪ್ರಾಯ.
ಉದಯವಾಣಿ ವರದಿ:
ಮೈಸೂರು ರೈಲನ್ನು ಕಾರವಾರ ವರೆಗೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಬಗ್ಗೆ “ಉದಯವಾಣಿ’ ಸೆ. 22ರಂದು ವರದಿ ಪ್ರಕಟಿಸಿ, ಗಮನ ಸೆಳೆದಿತ್ತು.