ಚಿಂಚೋಳಿ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಯಿಂದಾಗಿ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಬೆಳೆ ಕಳೆದುಕೊಂಡ ರೈತರ ಬದುಕು ಶೋಚನೀಯ ಸ್ಥಿತಿಯಲ್ಲಿದ್ದು, ಕೇಂದ್ರ ಸರ್ಕಾರ ಬೆಳೆ ಹಾನಿ ಪರಿಹಾರವನ್ನು ದ್ವಿಗುಣಗೊಳಿಸಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕೆಂದು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ದಂಗಾಪೂರ ಸರ್ಕಾರಕ್ಕೆ ಆಗ್ರಹಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಜಿಲ್ಲೆಯಲ್ಲಿ ಒಟ್ಟು 1.12ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಕೇಂದ್ರ ಅಧ್ಯಯನ ತಂಡಕ್ಕೆ ಈಗಾಗಲೇ ವರದಿ ನೀಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಆಗಿರುವ ಬೆಳೆ ಹಾನಿ ಇನ್ನು ಹೆಚ್ಚಿನದಾಗಿದೆ. ತೊಗರಿ, ಹೆಸರು, ಉದ್ದು, ಸೋಯಾಬಿನ್ ಶೇ.80 ರಷ್ಟು ಹಾನಿಯಾಗಿದೆ. ಕೇಂದ್ರ ಸರ್ಕಾರ ಬೆಳೆ ಹಾನಿ ಪರಿಹಾರವನ್ನು ಪ್ರತಿ ಹೆಕ್ಟೇರ್ ಗೆ 6800ರೂ.ಗಳಿಂದ 13600ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಲಬುರಗಿ ಮತ್ತು ಬೀದರ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿದಿದ್ದರಿಂದ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ|ಉಮೇಶ ಜಾಧವ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ಹಾನಿಗೊಳಗಾದ ರೈತರಿಗೆ ಇನ್ನು ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಿದ್ದರು. ಅದೇ ರೀತಿ ಸಿಎಂ ಬೊಮ್ಮಾಯಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಹಿಂಗಾರು ಬಿತ್ತನೆಗಾಗಿ ಸರ್ಕಾರ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ನೀಡಬೇಕು. ರೈತರಿಗೆ ನೀಡುವ ಕೃಷಿ ಪರಿಕರ ಮೇಲೆ ಜಿಎಸ್‌ಟಿ ಹಾಕಬಾರದು ಸರಕಾರಕ್ಕೆ ಮನವಿ ಮಾಡಿದರು. ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೊಡ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತಸಾಲಿನಲ್ಲಿ ಒಟ್ಟು 12,073ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು. ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ಇದ್ದರು.