Advertisement

ಡಿಜಿಟಲ್‌ ಸಾಲಗಳಿಗೆ ಬೇಡಿಕೆ: ಮಹಿಳೆಯರೇ ಮುಂದು

10:58 PM Dec 22, 2020 | mahesh |

ಕೋವಿಡ್‌ ಸಂದರ್ಭ ಸಾಲ ಪಡೆದುಕೊಳ್ಳುವ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಆಸ್ತಿಯ ಬೆಲೆ ದಿಢೀರ್‌ ಕುಸಿತ ಕಂಡ ಕಾರಣ ಆಸ್ತಿಯನ್ನು ಕೊಂಡುಕೊಳ್ಳಲು ಮುಂದಾಗಿದ್ದಾರೆ. ಜತೆಗೆ ಕೋವಿಡ್‌ ಮತ್ತು ಲಾಕ್‌ಡೌನ್‌ ಅವಧಿಯಲ್ಲಿ ಗೃಹ ಸಾಲದ ಪ್ರಮಾಣವೂ ಏರಿಕೆಯಾಗಿದೆ. ಸಾಲ ಪಡೆದುಕೊಳ್ಳುವ ವಿಷಯದಲ್ಲಿ ಮಹಿಳೆಯರು ಮುಂದಿದ್ದಾರೆ ಎಂದು ವರದಿಗಳು ಹೇಳಿವೆ.

Advertisement

ಶೇ. 10.78ರಷ್ಟು ಹೆಚ್ಚಳ
ಗೃಹ ಸಾಲಗಳ ಸರಾಸರಿ ಪ್ರಮಾಣವು ಒಂದು ವರ್ಷದಲ್ಲಿ 10.87ರಷ್ಟು ಹೆಚ್ಚಳವಾಗಿದೆ. ಬ್ಯಾಂಕ್‌ಬಜಾರ್‌ನ “ಮನಿಮೂಡ್‌ -2021′ ವರದಿಯ ಪ್ರಕಾರ, 2019ರಲ್ಲಿ ಸರಾಸರಿ ಗೃಹ ಸಾಲ ಮೊತ್ತ 23.82 ಲಕ್ಷ ರೂ. ಆಗಿದ್ದು, ಇದು 2020ರಲ್ಲಿ 26.41 ಲಕ್ಷ ರೂ. ಗೆ ಏರಿಕೆಯಾಗಿದೆ.

ಡಿಜಿಟಲ್‌ ಸಾಲಗಳ ಪ್ರಮಾಣ/ಕ್ರೆಡಿಟ್‌ ಕಾರ್ಡ್‌ ಬಳಕೆ ಹೆಚ್ಚಳ
ವರದಿಯ ಪ್ರಕಾರ ಜನರು ಕೋವಿಡ್‌ ಯುಗದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲಕ್ಕಾಗಿ ಡಿಜಿಟಲ್‌ ವ್ಯವಸ್ಥೆ (ಆನ್‌ಲೈನ್‌) ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಡಿಜಿಟಲ್‌ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ವ್ಯವಸ್ಥೆ ಮೂಲಕ ಪಡೆದುಕೊಂಡ ಸಾಲಗಳು ಶೇ. 80ರಷ್ಟು ಹೆಚ್ಚಾಗಿವೆ. ಇನ್ನು ದೇಶಾದ್ಯಂತ ಕ್ರೆಡಿಟ್‌ ಕಾರ್ಡ್‌ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗಿದೆ. ಮೆಟ್ರೋ ಅಲ್ಲದ ನಗರಗಳಲ್ಲಿ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರ ಪ್ರಮಾಣ ಶೇ. 20ಕ್ಕಿಂತ ಅಧಿಕವಾಗಿದೆ. ವರದಿಯೊಂದರ ಪ್ರಕಾರ ಪ್ರೀಮಿಯಂ ಕ್ರೆಡಿಟ್‌ ಕಾರ್ಡ್‌ಗಳ ಅರ್ಜಿಗಳಲ್ಲಿ ಶೇ.115ರಷ್ಟು ಏರಿಕೆ ಕಂಡುಬಂದಿದೆ.

ಮೆಟ್ರೋ ನಗರಕ್ಕಿಂತ ನಗರಗಳಲ್ಲಿ ಹೆಚ್ಚಳ
ವೈಯಕ್ತಿಕ ಸಾಲ ತೆಗೆದುಕೊಳ್ಳುವ ವಿಷಯದಲ್ಲಿ ಮೆಟ್ರೋ ನಗರಕ್ಕಿಂತ ಸಾಮಾನ್ಯ ನಗರಗಳ ಜನರೇ ಮುಂದೆ ಇದ್ದಾರೆ. ಮೆಟ್ರೋ ಅಲ್ಲದ ನಗರಗಳಲ್ಲಿ ವೈಯಕ್ತಿಕ ಸಾಲ ತೆಗೆದುಕೊಳ್ಳುವ ಸರಾಸರಿ ಪ್ರಮಾಣ 2.09ಲಕ್ಷ ರೂ. ಆದರೆ ಮೆಟ್ರೋ ನಗರದಲ್ಲಿ ಸರಾಸರಿ ಪ್ರಮಾಣ 1.84 ಲಕ್ಷ ರೂ.ಗಳಷ್ಟಿದೆ.

50 ಸಾವಿರ ರೂ. ಸಾಲಗಳಲ್ಲಿ ಏರಿಕೆ!
ವಿಶೇಷವಾಗಿ ಕೋವಿಡ್‌ ಅವಧಿಯಲ್ಲಿ 50,000 ರೂ.ಗಿಂತ ಕಡಿಮೆ ಪ್ರಮಾಣದ ಸಾಲಗಳ ವಿತರಣೆಯು ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಿದೆ. ಸಿಆರ್‌ಐಎಫ್ ಇಂಡಿಯಾದ ವರದಿ ಪ್ರಕಾರ ಕಡಿಮೆ-ಆದಾಯವಿರುವ ಕುಟುಂಬಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತಿದೆ. ಸೇವೆಯ ಅಗತ್ಯಗಳಿಗಾಗಿ ವೈಯಕ್ತಿಕ ಸಾಲಗಳನ್ನು ಆರಿಸಿಕೊಳ್ಳುತ್ತಾರೆಯೇ ಹೊರತು ತುರ್ತು ಉದ್ದೇಶಗಳಿಗಾಗಿ ಅಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

ಯುವಕರು ಹೆಚ್ಚಳ
ಸಾಲಗಾರನ ವಯಸ್ಸನ್ನು ಗಮನಿಸುವುದಾದರೆ ವೈಯಕ್ತಿಕ ಸಾಲಗಳ ಬೇಡಿಕೆಯಲ್ಲಿ ಹೆಚ್ಚಾಗಿ 18ರಿಂದ 30 ವರ್ಷದೊಳಗಿನ ಯುವ ಸಾಲಗಾರರೇ ಹೆಚ್ಚಿದ್ದಾರೆ. ಇದು 2 ವರ್ಷಗಳ ಹಿಂದೆ ಶೇ. 27ರಷ್ಟಿದ್ದು ಅದು ಈಗ ಶೇ. 41ರಷ್ಟಾಗಿದೆ.

ಮಹಿಳೆಯರೇ ಮುಂದು!
ಆರ್ಥಿಕವಾಗಿ ಸಶಕ್ತರಾಗುತ್ತಿರುವ ಮಹಿಳೆಯರು ಸಾಲ ತೆಗೆದುಕೊಳ್ಳುವಲ್ಲಿಯೂ ಮುಂದೆ ಇದ್ದಾರೆ. ಮಹಿಳೆಯರ ಸರಾಸರಿ ಸಾಲ ಪಡೆಯುವ ಮೊತ್ತ 25.66ಲಕ್ಷ ರೂ.ನಿಂದ 31.20 ಲಕ್ಷ ರೂ.ಗೆ ಏರಿಕೆಯಾಗಿದೆ. ಪುರುಷರಿಗೆ ಹೋಲಿಕೆ ಮಾಡಿದರೆ ದೊಡ್ಡ ಪ್ರಮಾಣದ ಗೃಹ ಸಾಲಗಳನ್ನು ಮಹಿಳೆಯರೇ ತೆಗೆದುಕೊಳ್ಳುತ್ತಿದ್ದಾರೆ. 2019ರಲ್ಲಿ ಮಹಿಳೆಯರೇ ಮೊದಲಿದ್ದು 2020ರಲ್ಲಿಯೂ ಮಹಿಳೆಯರು ತಮ್ಮ ಮುಂಚೂಣಿಯನ್ನು ಕಾಯ್ದುಕೊಂಡಿದ್ದಾರೆ. ಪುರುಷರ ಸರಾಸರಿ ಸಾಲಗಳ ಪ್ರಮಾಣ 23.64 ಲಕ್ಷ ರೂ.ನಿಂದ 26.04 ಲಕ್ಷ ರೂ.ಗೆ ಏರಿಕೆಯಾಗಿದೆ. ಅಂದರೆ ಈ ಹಿಂದೆ ಇದ್ದ ಶೇ. 68ರಿಂದ ಶೇ. 72ರಷ್ಟು ಹೆಚ್ಚಾಗಿದೆ.

ಮೆಟ್ರೋ ನಗರ
ಸರಾಸರಿ ಸಾಲ ಪ್ರಮಾಣ-1.84 ಲ.ರೂ.
ಅತೀ ಹೆಚ್ಚು ಸಾಲ ಪಡೆದ ನಗರ-ಬೆಂಗಳೂರು (ಸರಾಸರಿ 24.92 ಲ. ರೂ.)

ಇತರ ನಗರ
ಸರಾಸರಿ ಸಾಲ ಪ್ರಮಾಣ -2.09 ಲಕ್ಷ ರೂ.
ಅತೀ ಹೆಚ್ಚು ಸಾಲ ಪಡೆದ ನಗರ-ಜೈಪುರ ಸರಾಸರಿ 16.98ಲಕ್ಷ ರೂ.

Advertisement

Udayavani is now on Telegram. Click here to join our channel and stay updated with the latest news.

Next