ಸುಬ್ರಹ್ಮಣ್ಯ: ಭಾರೀ ಮಳೆಗೆ ಸಂಪೂರ್ಣ ಕೃಷಿ ಭೂಮಿ ನದಿ ಪಾಲಾಗುವ ಆತಂಕ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಚಾಳೆಪ್ಪಾಡಿ ದೋಲನ ಮನೆಯಲ್ಲಿನ ಕೃಷಿಕರದ್ದು.
ಇಲ್ಲಿನ ಅನೇಕ ಕೃಷಿಕರ ಭೂಮಿ ಹೊಳೆ ನೀರಿನ ಹೊಡೆತಕ್ಕೆ ಕುಸಿಯುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕ ಇರುವುದರಿಂದ ಶಾಶ್ವತ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
2018ರಲ್ಲಿ ನಡೆದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕಲ್ಮಕಾರು ಬೆಟ್ಟದಲ್ಲಿ ಮಣ್ಣು ಕುಸಿತಗೊಂಡು ಭಾರೀ ಗಾತ್ರದ ಮರಗಳೂ ನದಿಯಲ್ಲಿ ಕೊಚ್ಚಿಕೊಂಡು ಬಂದಿದ್ದವು. ಅನೇಕ ಕಡೆಗಳಲ್ಲಿ ಮರಗಳು ಸಿಲುಕಿಕೊಂಡ ಪರಿಣಾಮ ನದಿ ಕೆಲವು ಕಡೆ ದಿಕ್ಕು ಬದಲಿಸಿ ಕೃಷಿ ಭೂಮಿಗಳಲ್ಲಿ ಹರಿಯಲಾರಂಭಿಸಿತು. ಅದರಲ್ಲೂ ಕೊಲ್ಲಮೊಗ್ರ ದೋಲನ ಮನೆಯಲ್ಲಿ ಹೊಳೆ ಕೃಷಿ ಭೂಮಿಯನ್ನು ಭೀಕರವಾಗಿ ಕೊರೆಯುತ್ತಿದೆ.
ಈ ಬಗ್ಗೆ ಸ್ಥಳೀಯರು ಕೊಲ್ಲಮೊಗ್ರು ಗ್ರಾ.ಪಂ. ಹಾಗೂ ಕೊಲ್ಲಮೊಗ್ರುವಿನಲ್ಲಿ ನಡೆದ ಕಂದಾಯ ಇಲಾಖೆಯ ಗ್ರಾಮ ವಾಸ್ತವ್ಯದಲ್ಲೂ ಮನವಿ ಸಲ್ಲಿಸಿ, ನೀರಿನ ಹೊಡೆತ ತಡೆಗೆ ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ. ಆದರೆ ಈವರೆಗೂ ಯಾವುದೇ ಪರಿಹಾರ ದೊರೆತಿಲ್ಲ. ಇದೀಗ ಇನ್ನಷ್ಟು ಕೊರೆತ ಮುಂದುವರಿದಿದ್ದು, ಜನ ಆತಂಕಗೊಂಡಿದ್ದಾರೆ. ಕೃಷಿ ಭೂಮಿ ನೀರು ಪಾಲಾಗುವ ಕಡೆಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲು ಆಗ್ರಹಿಸಿದ್ದಾರೆ.
ವರದಿ ಸಲ್ಲಿಸಿದ್ದೇವೆ: ದೋಲನಮನೆ ಸಮಸ್ಯೆ ಬಗ್ಗೆ ಗ್ರಾಮ ವಾಸ್ತವ್ಯದಲ್ಲಿ ಅಲ್ಲಿನ ಜನ ಮನವಿ ಸಲ್ಲಿಸಿದ್ದಾರೆ. ನಾವು ಅದನ್ನು ಸಂಬಂಧಿಸಿದವರಿಗೆ ಸಲ್ಲಿಸಿದ್ದೇವೆ. ಅಲ್ಲಿಂದ ಯಾವುದೇ ಉತ್ತರ ಈವರೆಗೆ ಬಂದಿಲ್ಲ. –
ಶಂಕರ್, ಕಂದಾಯ ನಿರೀಕ್ಷಕರು, ಪಂಜ
ಕ್ರಮಕೈಗೊಳ್ಳಲಿ: ಹೊಳೆಯಲ್ಲಿ ಹೆಚ್ಚಿನ ನೀರಿನ ಹರಿವಿನಿಂದ ಈಗಾಗಲೇ ಕೃಷಿ ಭೂಮಿ ನೀರು ಪಾಲಾಗುತ್ತಿದೆ. ತಡೆಗೋಡೆ ನಿರ್ಮಾಣಗೊಂಡಲ್ಲಿ ಕೊರೆತ ನಿಲ್ಲಲಿದ್ದು, ಸಂಬಂಧಿಸಿ ದವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಿ. –
ಮಧುಸೂದನ್, ಸ್ಥಳೀಯರು