Advertisement

ಬರೇ 2 ಕಿ.ಮೀ. ದೂರಕ್ಕೆ 13 ಕಿ.ಮೀ. ಸುತ್ತಾಟ: ಕೂಡಿಗೆ ಮೂರ್‌ಸಾಲ್‌ ಜೆಡ್ಡು ಸೇತುವೆ ಬೇಡಿಕೆ

05:19 PM Jun 26, 2022 | Team Udayavani |

ನೇರಳಕಟ್ಟೆ: ಇಲ್ಲಿನ ಜನ ಬೇಸಗೆಯಲ್ಲಿ ಪೇಟೆಗೆ ಹೋಗಬೇಕಾದರೆ ಕೇವಲ 2 ಕಿ.ಮೀ. ದೂರವಾದರೆ, ಮಳೆಗಾಲದಲ್ಲಿ ತಮ್ಮ ಊರಿನಿಂದ ಜನ ಪೇಟೆಗೆ ಹೋಗಬೇಕಾದರೆ ಬರೋಬ್ಬರಿ 13 ಕಿ.ಮೀ. ದೂರ ಹೋಗಬೇಕು. ಸೇತುವೆಯಿಲ್ಲದ ಕಾರಣ ಇಲ್ಲಿನ ಕೇವಲ 2 ಕಿ.ಮೀ. ದೂರಕ್ಕೆ ಸುತ್ತು ಬಳಸಿ 13 ಕಿ.ಮೀ. ದೂರ ಹೋಗಿ ಬರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

Advertisement

ಇದು ಆಜ್ರಿ ಗ್ರಾ.ಪಂ. ವ್ಯಾಪ್ತಿಯ ಕೊಡ್ಲಾಡಿ ಗ್ರಾಮದ ಕೂಡಿಗೆ ಮೂರ್‌ಸಾಲ್‌ ಜೆಡ್ಡು ಪರಿಸರದ ಜನರ ಮಳೆಗಾಲದ ಸಂಕಷ್ಟದ ಕತೆ.

5 ದಶಕಗಳ ಬೇಡಿಕೆ

ಮೂರ್‌ಸಾಲ್‌ ಜೆಡ್ಡುವಿನಲ್ಲಿ ಕುಬ್ಜಾ ನದಿಗೆ ಸೇತುವೆಯಿಲ್ಲದೆ ಜನ ನದಿ ದಾಟಲು ಸಾಧ್ಯವಿಲ್ಲ. ಬೇಸಗೆಯಲ್ಲಾದರೆ ನೀರು ಕಡಿಮೆಯಿದ್ದು, ಹೇಗೋ ನದಿ ದಾಟಬಹುದು. ಆದರೆ ಮಳೆಗಾಲದಲ್ಲಿ ಉಕ್ಕಿ ಹರಿಯುವ ನೀರಲ್ಲಿ ನಡೆದುಕೊಂಡು ಹೋಗಲು ನಿರ್ಮಿಸುವ ಕಾಲು ಸಂಕವು ಕೊಚ್ಚಿ ಹೋದ ನಿದರ್ಶನಗಳು ಇವೆ. ಇಲ್ಲಿಗೆ ಸೇತುವೆ ಬೇಡಿಕೆ ಇಂದು ನಿನ್ನೆಯದಲ್ಲ. ಬರೋಬ್ಬರಿ 5 ದಶಕಗಳಿಂದಲೂ ಇಲ್ಲಿನ ಜನ ಸೇತುವೆಗಾಗಿ ಅಹವಾಲು ಸಲ್ಲಿಸುತ್ತಲೇ ಇದ್ದಾರೆ.

ಅಲ್ಲಿಂದ ಇಲ್ಲಿಯವರೆಗಿನ ಎಲ್ಲ ಶಾಸಕರು, ಸಂಸದರಿಗೂ ಈ ಬೇಡಿಕೆ ತಲುಪಿಸಲಾಗಿದೆ. ಆದರೆ ಈಡೇರುವ ಕಾಲ ಮಾತ್ರ ಇನ್ನೂ ಸನ್ನಿಹಿತವಾದಂತಿಲ್ಲ.

Advertisement

ಅನುದಾನವೇ ಮಂಜೂರಾಗಿಲ್ಲ

ಸಣ್ಣ ನೀರಾವರಿ ಇಲಾಖೆಯಿಂದ ವಿವಿಧ ಕಿಂಡಿ ಅಣೆಕಟ್ಟುಗಳು ಘೋಷಣೆಯಾದಾಗ ಈ ಕೂಡಿಗೆ ಮೂರ್‌ಸಾಲ್‌ ಜೆಡ್ಡು ಸೇತುವೆ ಹಾಗೂ ಕಿಂಡಿ ಅಣೆಕಟ್ಟನ್ನು ಸಹ ಸೇರಿಸಲಾಗಿತ್ತು. ಅದಕ್ಕಾಗಿ 5.5 ಕೋ. ರೂ. ಅನುದಾನ ಸಹ ಮೀಸಲಿಡಲಾಗಿದೆ ಎನ್ನುವ ಮಾಹಿತಿಯಿತ್ತು. ಆದರೆ ಅನುದಾನವೇ ಬಿಡುಗಡೆಯಾಗದ ಕಾರಣ, ಈ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ಕಾಲು ಸಂಕವೇ ಆಸರೆ ಇಲ್ಲಿನ ಜನ ಪ್ರತಿ ವರ್ಷ ಮಳೆಗಾಲ ದಲ್ಲಿ ಕುಬ್ಜಾ ನದಿಗೆ ಕಾಲು ಸಂಕ ನಿರ್ಮಿಸುತ್ತಿದ್ದು, ಅಂಪಾರು, ಶಂಕರ ನಾರಾಯಣ, ಕುಂದಾಪುರ ಕಡೆಗೆ ಶಾಲಾ- ಕಾಲೇಜಿಗೆ ಹೋಗುವ ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ ಇದೇ ಆಸರೆ ಯಾಗಿದೆ. ಈ ವರ್ಷದ ಕಾಲು ಸಂಕ ಇನ್ನಷ್ಟೇ ನಿರ್ಮಾಣವಾಗಬೇಕಿದೆ. ಕೆಲವೊಮ್ಮೆ ಈ ಕಾಲು ಸಂಕ ಭಾರೀ ಮಳೆಗೆ ಕೊಚ್ಚಿ ಹೋದದ್ದು ಸಹ ಇದೆ.

150ಕ್ಕೂ ಮಿಕ್ಕಿ ಮನೆ

ಕೂಡಿಗೆ ಭಾಗದವರಿಗೆ ಹತ್ತಿರದ ಪೇಟೆಯೆಂದರೆ ಅಂಪಾರು. ಅಲ್ಲಿಗೆ ಮೂರ್‌ಸಾಲ್‌ ಜೆಡ್ಡು ಬಳಿ ಸೇತುವೆ ಇದ್ದಿದ್ದರೆ ಕೇವಲ 2 ಕಿ.ಮೀ. ಅಷ್ಟೇ ದೂರವಾಗುತ್ತದೆ. ಆದರೆ ಈಗ ಮಳೆಗಾಲದಲ್ಲಿ ಅಂಪಾರಿಗೆ ಹೋಗಬೇಕಾದರೆ ಮಾರ್ಡಿ, ಮೂಡುಬಗೆಯಾಗಿ ತೆರಳಬೇಕು. ಸುಮಾರು 13 ಕಿ.ಮೀ. ಅಂತರ. ಇನ್ನೊಂದು ಗೊರ್ಟೆ ಮಾರ್ಗವಾಗಿ ದುರ್ಗಮ ಹಾದಿಯಿದ್ದು, ಅದರಲ್ಲಿ 9ಕಿ.ಮೀ. ದೂರವಿದೆ. ಇಲ್ಲಿನ ಸುಮಾರು 150ಕ್ಕೂ ಮಿಕ್ಕಿ ಮನೆಗಳಿಗೆ ಈ ಸೇತುವೆ ಅಗತ್ಯವಾಗಿದೆ.

ಅನೇಕ ವರ್ಷಗಳ ಬೇಡಿಕೆ: ಕೂಡಿಗೆ ಮೂರ್‌ಸಾಲ್‌ ಜೆಡ್ಡುವಿಗೆ ಸೇತುವೆ ಬೇಕೆಂದು ಅನೇಕ ವರ್ಷಗಳಿಂದ ಈ ಭಾಗದ ಜನ ಒತ್ತಾಯಿಸುತ್ತಿದ್ದಾರೆ. ಹಿಂದೊಮ್ಮೆ ಸಣ್ಣ ನೀರಾವರಿ ಇಲಾಖೆಯಿಂದ ಸೇತುವೆ ಮಂಜೂರಾಗಿತ್ತು. ಆದರೆ ಅನುದಾನ ಕೊರತೆಯಿಂದ ಹಣ ಬಿಡುಗಡೆಯಾಗಿಲ್ಲ. ಮತ್ತೆ ಶಾಸಕರ ಗಮನಕ್ಕೆ ತಂದಿದ್ದೇವೆ. -ಪ್ರವೀಣ್‌ ಕುಮಾರ್‌ ಶೆಟ್ಟಿ ಕೊಡ್ಲಾಡಿ, ಸ್ಥಳೀಯ ಗ್ರಾ.ಪಂ. ಸದಸ್ಯ

ಪ್ರಸ್ತಾವನೆ ಸಲ್ಲಿಸಲಾಗಿದೆ: ಬೈಂದೂರು ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಸುಮಾರು 2 ಸಾವಿರ ಕೋ.ರೂ. ವೆಚ್ಚದ ರಸ್ತೆ, ಸೇತುವೆ, ನೀರಾವರಿ ಸಂಬಂಧಿತ ಅಭಿವೃದ್ಧಿ ಕಾರ್ಯ ಆಗಿದೆ. ಮೂರ್‌ಸಾಲ್‌ ಜೆಡ್ಡುವಿಗೆ ನಾನೇ ಭೇಟಿ ನೀಡಿ, ಸ್ವತಃ ಸೇತುವೆ ಬೇಡಿಕೆ ಬಗ್ಗೆ ಪರಿಶೀಲಿಸಿದ್ದೇನೆ. ಅಂದಾಜು 7 ಕೋ. ರೂ. ಬೇಕಿದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಖಂಡಿತವಾಗಿಯೂ ಮುಂದಿನ ದಿನದಲ್ಲಿ ಆದ್ಯತೆ ನೆಲೆಯಲ್ಲಿ ಈಡೇರಿಸಲು ಪ್ರಯತ್ನಿಸುವೆ. –ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next