ರಬಕವಿ ಬನಹಟ್ಟಿ: 2024 ರ ಕೊನೆಗೆ 142ಕಿ.ಮೀ ಉದ್ದದ ಬಾಗಲಕೋಟೆ ಕುಡಚಿ ರೈಲು ಮಾರ್ಗವನ್ನು ಮುಕ್ತಾಯಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಮತ್ತು ರೇಲ್ವೆ ಸಚಿವ ಮತ್ತು ರೇಲ್ವೆ ಮಂತ್ರಾಲಯದ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಲು ದೆಹಲಿಗೆ ತೆರಳುತ್ತಿದ್ದೇವೆ ಎಂದು ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ ಖಾಜಿ ತಿಳಿಸಿದರು.
ಭಾನುವಾರ ಇಲ್ಲಿಯ ಹಜಾರೆ ಟೆಕ್ಸಟೈಲ್ ಆವರಣದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಈಗಾಗಲೇ ಕಾಮಗಾರಿಗೆ ಬೇಕಾಗಿರುವ 3200 ಎಕರೆ ಭೂ ಪ್ರದೇಶವನ್ನು ಹಸ್ತಾಂತರಿಸಿದೆ. ಈಗ ಕೇವಲ 42 ಕಿ.ಮೀ ಮಾರ್ಗವಾಗಿದೆ. ಯೋಜನೆಯ ವಿಳಂಬದಿಂದಾಗಿ ಕಾಮಗಾರಿಯ ವೆಚ್ಚ ರೂ. ನಾಲ್ಕು ಸಾವಿರ ಕೋಟಿ ತಲುಪಿದೆ. ಭೂಸ್ವಾಧೀನ ಮತ್ತು ಪರಿಹಾರ ಧನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಸಾಕಷ್ಟು ಹೋರಾಟ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಕೂಡಾ ಇನ್ನೂಳಿದ ಕಾಮಗಾರಿಯನ್ನು ಶೀಘ್ರವಾಗಿ ಆರಂಭಗೊಳಿಸುವಂತೆ ಮನವಿ ಮಾಡಲಾಗುವುದು.
ಈಗಾಗಲೇ ಲೋಕಾಪುರದವರೆಗೆ ಕಾಮಗಾರಿ ನಡೆದಿದೆ. ಆದಷ್ಟು ಬೇಗನೆ ಮುಧೋಳ, ಜಮಖಂಡಿ, ರಬಕವಿ ಬನಹಟ್ಟಿ ಹಾಗೂ ತೇರದಾಳ ತಾಲ್ಲೂಕಿನಲ್ಲಿಯೂ ಕೂಡಾ ಕಾಮಗಾರಿಯನ್ನು ಕೈಗೊಳ್ಳಬೇಕಾಗಿದೆ. ಸರ್ಕಾರ ಪ್ರತಿ ಇಪ್ಪತ್ತು ಕಿ.ಮೀ ಒಬ್ಬ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವ ಮೂಲಕ ಶೀಘ್ರವಾಗಿ ಕಾಮಗಾರಿಯನ್ನು ಕೈಗೊಳ್ಳಬೇಕಾಗಿದೆ ಎಂದು ಖಾಜಿ ತಿಳಿಸಿದರು.
ಡಾ.ರವಿ ಜಮಖಂಡಿ ಮಾತನಾಡಿ, ಇದೇ 7 ರಂದು ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಚಿಕ್ಕೋಡಿ ಲೋಕಸಭಾ ಸದಸ್ಯಅಣ್ಣಾಸಾಬ್ ಜೊಲ್ಲೆ ಹಾಗೂ ಕುರಕ್ಷೇತ್ರದ ಲೋಕಸಭಾ ಸದಸ್ಯ ನಯಾಬಸಿಂಗ ಸೈನಿ ಹಾಗೂ ರಬಕವಿ ಬನಹಟ್ಟಿ ನಿಯೋಗದ ಸದಸ್ಯರು ಕೂಡಿಕೊಂಡು ಕೇಂದ್ರ ರೇಲ್ವೆ ಸಚಿವ ಅಶ್ವಿನ ವೈಷ್ಣವ ಅವರನ್ನು ಭೇಟಿಯಾಗಿ ಚರ್ಚೆ ಮಾಡಲಿದ್ದೇವೆ ಎಂದರು.
ನಿಯೋಗದಲ್ಲಿ ರೇಲ್ವೆ ಹೋರಾಟದ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ, ಗಣಪತಿರಾವ ಹಜಾರೆ ಇದ್ದರು. ಈ ಸಂದರ್ಭದಲ್ಲಿ ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ರಾಮಣ್ಣ ಹುಲಕುಂದ, ಶ್ರೀಶೈಲ ದಲಾಲ, ಬಸವರಾಜ ತೆಗ್ಗಿ, ವಜ್ರಕಾಂತ ಕಮತಗಿ, ಮಲ್ಲಿಕಾರ್ಜುನ ಜತ್ತಿ, ಸಂಜಯ ತೇಲಿ ಇದ್ದರು.