Advertisement

ಪ್ರಾಧಿಕಾರದ ಪುಸ್ತಕಗಳಿಗೆ ಡಿಮ್ಯಾಂಡ್‌

11:26 AM May 24, 2018 | Team Udayavani |

ಬೆಂಗಳೂರು: ಇದು ಆನ್‌ಲೈನ್‌ ಯುಗ. ಸಣ್ಣ ಪಿನ್‌ ತಯಾರಕನೂ ಇ-ಕಾಮರ್ಸ್‌ ಮೊರೆ ಹೋಗಿದ್ದಾನೆ. ಹಾಗೇ ಪುಸ್ತಕ ಮಾರಾಟ ಕೂಡ ಆನ್‌ಲೈನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ಹೊಸತೇನಲ್ಲ. ಆದರೆ ಹೊಸ ವಿಷಯ ಏನೆಂದರೆ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳಿಗೆ ಈಗ ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಿದೆ.

Advertisement

ಕನ್ನಡ ಪುಸ್ತಕ ಪ್ರಾಧಿಕಾರ ಇಲಾಖಾವಾರು ಪುಸ್ತಕ ಮಾರಾಟದ ದೃಷ್ಟಿಯಿಂದ 2017ರ ಡಿಸೆಂಬರ್‌ನಲ್ಲಿ ಪುಸ್ತಕಗಳ ಆನ್‌ಲೈನ್‌ ಮಾರಾಟ ಪರಿಚಯಿಸಿದೆ. ಇಲ್ಲಿ ಈವರೆಗೆ 1800 ಪುಸ್ತಕಗಳು ಮಾರಾಟವಾಗಿದ್ದು, 1.09 ಲಕ್ಷ ರೂ. ವಹಿವಾಟು ನಡೆದಿದೆ. ವಿಶೇಷವೆಂದರೆ, ಬೆಂಗಳೂರು ಮೂಲದ ಸಂತೋಷ್‌ ಎಂಬುವವರು ಒಂದೇ ದಿನ 14 ಸಾವಿರ ರೂ. ಮೌಲ್ಯದ ಪುಸ್ತಕ ಖರೀದಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಹಲವು ಅಕಾಡೆಮಿಗಳು ಪ್ರತಿ ವರ್ಷ ಪುಸ್ತಕಗಳನ್ನು ಪ್ರಕಟಿಸುತ್ತಲೇ ಇರುತ್ತವೆ. ಆದರೆ, ಅವು ಓದುಗರ ಕೈಸೇರದೇ ಅಕಾಡೆಮಿಗಳ ಗೋದಾಮು ಸೇರುತ್ತಿವೆ. ಇಂತಹ ಸಂದರ್ಭದಲ್ಲಿ ಅಕಾಡೆಮಿಗಳೂ ಪ್ರಾಧಿಕಾರದ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟ ಆರಂಭಿಸಿದರೆ ಓದುಗರಿಗೆ
ಅನುಕೂಲವಾಗುತ್ತದೆ ಎಂಬ ಕೂಗು ಬಹಳದಿನಗಳಿಂದ ಇತ್ತು.

ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ರಾಜೋತ್ಸವ, ಗಣರಾಜೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಇನ್ನಿತರ ವಿಶೇಷ ದಿನಗಳಲ್ಲಿ ಆನ್‌ಲೈನ್‌ ಗ್ರಾಹಕರಿಗೆ ಶೇ.15ರಿಂದ ಶೇ.50ರ ವರೆಗೆ ರಿಯಾಯ್ತಿ ನೀಡುತ್ತದೆ. ಹತ್ತು ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕಗಳ ಮೇಲೆ ಶೇ.50, ಆರು ವರ್ಷಗಳ ಹಿಂದೆ ಪ್ರಕಟವಾದವಕ್ಕೆ ಶೇ.30, ಮೂರು ವರ್ಷದ ಹಿಂದೆ ಪ್ರಕಟವಾಗಿರುವ ಪುಸ್ತಕದ ಮೇಲೆ ಶೇ.20ರಷ್ಟು ಹಾಗೂ ಹೊಸ ಪುಸ್ತಕಗಳ ಮೇಲೆ ಶೇ.15ರ ರಿಯಾಯಿತಿ ನೀಡಲಾಗುತ್ತಿದೆ. ಇದು ಕೂಡ ಆನ್‌ಲೈನ್‌ ವಹಿವಾಟು ಹೆಚ್ಚಳಕ್ಕೆ ಕಾರಣ.

ಕನ್ನಡ ಸಹೃದಯಿಗಳನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಾಧಿಕಾರ ರೂಪಿಸಿರುವ ಯೋಜನೆಗಳಲ್ಲಿ ಆನ್‌ಲೈನ್‌ ಮಾರಾಟವೂ ಒಂದು. ಈಗಾಗಲೇ 1800 ಪುಸ್ತಕಗಳು ಮಾರಾಟವಾಗಿವೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಪ್ರಾಧಿಕಾರದಲ್ಲಿ ಸಾಹಿತ್ಯ, ವಿಜ್ಞಾನ, ಸಮಾಜ, ಸಾಮಾಜಿಕ ಚಳವಳಿ ಸೇರಿದಂತೆ 350ಕ್ಕೂ ಹೆಚ್ಚು ಪುಸ್ತಕಗಳಿವೆ. ಮಾಹಿತಿಗೆ //kannadapustakapradhikara.com ಜಾಲತಾಣಕ್ಕೆ ಭೇಟಿ ನೀಡಬಹುದು.

Advertisement

ಓದುಗರಿಗೆ ಸುಲಭವಾಗಿ ಪುಸ್ತಕಗಳು ಕೈಸೇರಬೇಕು ಎಂಬ ಉದ್ದೇಶದಿಂದ ಆನ್‌ಲೈನ್‌ ಮಾರಾಟ ಆರಂಭಿಸಲಾಗಿದೆ. ಇದಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿರುವುದು ಖುಷಿ ಕೊಟ್ಟಿದೆ.
 ವಸುಂಧರಾ ಭೂಪತಿ,  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ

ಅಕಾಡೆಮಿಗಳು ಪ್ರಕಟಿಸಿರುವ ಹಲವು ಪುಸ್ತಕಗಳು ಓದುಗರಿಗೆ ತಲುಪದೇ ಗೋದಾಮುಗಳಲ್ಲಿ ಕೊಳೆಯುತ್ತಿವೆ. ಕನ್ನಡ ಪುಸ್ತಕ ಪ್ರಾಧಿಕಾರದ ಈ ಕೆಲಸ ಇತರ ಅಕಾಡೆಮಿಗಳಿಗೆ ಮಾದರಿ. ಇಂತಹ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಬೇಕಾಗಿತ್ತು.
 ಸಿದ್ಧಲಿಂಗಯ್ಯ, ಕವಿ

ಓದುಗರಿಗೆ ಪುಸ್ತಕಗಳನ್ನು ತಲುಪಿಸುವ ದಿಕ್ಕಿನಲ್ಲಿ ಪುಸ್ತಕ ಪ್ರಾಧಿಕಾರದ ಪ್ರಯತ್ನ ಶ್ಲಾಘನೀಯ. ಇಂತಹ ಕೆಲಸಗಳು
ವ್ಯಾಪಕವಾಗಿ ನಡೆಯಬೇಕು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತ ವರ್ಗಕ್ಕೆ ಅಭಿನಂದನೆ. 
 ಹಂಪ ನಾಗರಾಜಯ್ಯ, ಸಾಹಿತಿ 

 ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next