Advertisement
ಈ ಬಗ್ಗೆ ಅರಾಟೆ ಭಾಗದ ಜನರು ಅನೇಕ ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಯಾವುದೇ ಪ್ರಗತಿ ಮಾತ್ರ ಕಂಡು ಬಂದಿಲ್ಲ.ಹೊಸಾಡು ಗ್ರಾಮದ ಅರಾಟೆ ಸೇತುವೆ ಬಳಿಯಿಂದ ಮುಳ್ಳಿಕಟ್ಟೆ ಪೇಟೆಯವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಕೊಡಬೇಕು ಎನ್ನುವುದು ಹೆದ್ದಾರಿ ಕಾಮಗಾರಿ ಆರಂಭವಾಗಿನಿಂದಲೇ ಇಲ್ಲಿನ ಜನರು ಬೇಡಿಕೆ ಇಟ್ಟಿದ್ದಾರೆ. ಆದರೆ ಹೆದ್ದಾರಿ ಕಾಮಗಾರಿ ಪೂರ್ಣಗೊಂಡು, ಸಂಚಾರಕ್ಕೆ ತೆರೆದುಕೊಂಡು 2 ವರ್ಷ ಕಳೆದರೂ ಸರ್ವೀಸ್ ರಸ್ತೆ ಬೇಡಿಕೆ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
ಅರಾಟೆ ಪ್ರದೇಶದಲ್ಲಿ ಸುಮಾರು 200ರಿಂದ 250 ಮನೆಗಳಿದ್ದು, ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಯಿದೆ. ಇವರೆಲ್ಲ ಅರಾಟೆಯಿಂದ ಬರಬೇಕಾದರೂ ಅರಾಟೆಗೆ ಹೋಗಬೇಕಾದರೂ ಮುಳ್ಳಿಕಟ್ಟೆಗೆ ತೆರಳಿ, ಅಲ್ಲಿ ಸುತ್ತು ಹಾಕಿ ಬರಬೇಕು. ಸರ್ವೀಸ್ ರಸ್ತೆಯಿಲ್ಲದೆ ಭಾರೀ ಸಮಸ್ಯೆ ಅನುಭವಿಸುತ್ತಿದ್ದಾರೆ. ರಿಕ್ಷಾದವರ ಪಾಡು :
ಇನ್ನೂ ಅರಾಟೆ ಭಾಗದವರು ಹೊಸಾಡು ಗ್ರಾ.ಪಂ. ಬಳಿಯ ಪಡಿತರ ಅಂಗಡಿಯಿಂದ ಪಡಿತರ ಖರೀದಿಸಿ ರಿಕ್ಷಾ ಬಾಡಿಗೆ ಮಾಡಿಕೊಂಡು ಹೋಗುತ್ತಾರೆ. ಅವರನ್ನು ಅರಾಟೆಯಲ್ಲಿ ಬಿಟ್ಟು ಮತ್ತೆ ಮುಳ್ಳಿಕಟ್ಟೆಗೆ ಬರಬೇಕಾದರೆ ಕನ್ನಡಕುದ್ರು ಬಳಿಯ ಯೂಟರ್ನ್ ತೆಗೆದುಕೊಂಡು ಬರಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಬಂದರೆ ಪೊಲೀಸರು ದಂಡ ಹಾಕುತ್ತಾರೆ. ಕನ್ನಡಕುದ್ರುವಿನವರೆಗೆ ಹೋಗಬೇಕಾದರೆ ಹೆಚ್ಚಿನ ಬಾಡಿಗೆ ನೀಡಬೇಕಾಗುತ್ತದೆ. ಆದರೆ ಬಡ ಪ್ರಯಾಣಿಕರಿಗೆ ದುಬಾರಿ ಬಾಡಿಗೆ ಹೇಳುವುದಾದರೂ ಹೇಗೆ ಎನ್ನುವುದು ರಿಕ್ಷಾ ಚಾಲಕರೊಬ್ಬರ ಪ್ರಶ್ನೆ.
Related Articles
Advertisement
ಶೀಘ್ರ ಆಗಲಿ : ಅರಾಟೆಯಿಂದ ಮುಳ್ಳಿಕಟ್ಟೆಯವರೆಗೆ ಹಾಗೂ ಮತ್ತೂಂದು ಕಡೆಯಿಂದ ಮುಳ್ಳಿಕಟ್ಟೆಯಿಂದ ಡಾನ್ ಬಾಸ್ಕೋ ನಿಲುಗಡೆಯವರೆಗೆ ಸರ್ವೀಸ್ ರಸ್ತೆ ನಿರ್ಮಿಸಬೇಕು ಅನ್ನುವುದು ನಮ್ಮ ಬೇಡಿಕೆಯಾಗಿದೆ. ಕಾಮಗಾರಿ ಆರಂಭವಾಗುವ ವೇಳೆಯೇ ನಾವು ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ, ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿಯವರಿಗೆ ಬೇಡಿಕೆ ಸಲ್ಲಿಸಿದ್ದೇವೆ. ಆದರೆ ಈ ಬೇಡಿಕೆ ಈಡೇರುವ ಯಾವುದೇ ಬೆಳವಣಿಗೆ ಮಾತ್ರ ಕಾಣುತ್ತಿಲ್ಲ ಎನ್ನುತ್ತಾರೆ ಸ್ಥಳೀಯರಾದ ಪ್ರದೀಪ್ ಆಚಾರ್ಯ ಅರಾಟೆ.
ಹೆದ್ದಾರಿ ಕಾಮಗಾರಿಗೆ ಪಂಚಾಯತ್ ವತಿಯಿಂದ ಜಾಗ ಬಿಟ್ಟು ಕೊಡುವ ವೇಳೆಯೇ ಇಲ್ಲಿ ಸರ್ವೀಸ್ ರಸ್ತೆ ಬೇಡಿಕೆ ಬಗ್ಗೆ ಸಂಬಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಪಂಚಾಯತ್‌ನಿಂದ ಅನೇಕ ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಂಡು ಅದನ್ನು ಸಹ ಸಲ್ಲಿಸಲಾಗಿದೆ. ಈಗ ಸರ್ವೀಸ್ ರಸ್ತೆಗೆಂದು ಪ್ರಸ್ತಾವಿತ ಜಾಗದಲ್ಲಿ ಸ್ಥಳೀಯರೇ ಸೇರಿಕೊಂಡು ತಾತ್ಕಲಿಕವಾಗಿ ಸರ್ವೀಸ್ ರಸ್ತೆಯನ್ನು ನಿರ್ಮಿಸಿಕೊಂಡಿದ್ದು, ಹಾಗಾಗಿ ಸರ್ವೀಸ್ ರಸ್ತೆಗೆ ಜಾಗದ ಸಮಸ್ಯೆಯೇನೂ ಇಲ್ಲ.– ಪಾರ್ವತಿ, ಹೊಸಾಡು ಗ್ರಾ.ಪಂ. ಪಿಡಿಒ
ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇನ್ನೂ ಕೂಡ ಅನೇಕ ಬೇಡಿಕೆಗಳು ಈಡೇರಿಕೆಗೆ ಬಾಕಿಯಿದ್ದು, ಈ ಕುರಿತಂತೆ ಚರ್ಚಿಸಲು ಮುಂದಿನ ವಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಅಲ್ಲಿ ಅರಾಟೆ- ಮುಳ್ಳಿಕಟ್ಟೆ ಸರ್ವೀಸ್ ರಸ್ತೆ, ಹೆಮ್ಮಾಡಿ – ಜಾಲಾಡಿ ಮಧ್ಯೆ ಡಿವೈಡರ್ ಕ್ರಾಸಿಂಗ್, ಮರವಂತೆ ಬಳಿ ಕ್ರಾಸಿಂಗ್ ಮತ್ತಿತರ ವಿಚಾರಗಳನ್ನು ಗಮನಕ್ಕೆ ತರಲಾಗುವುದು. – ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು
– ಪ್ರಶಾಂತ್ ಪಾದೆ