ದೇವದುರ್ಗ: ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯಂ ತಜ್ಞ ವೈದ್ಯಾಧಿಕಾರಿ ನೇಮಕ ಮಾಡುವಂತೆ ಒತ್ತಾಯಿಸಿ ಡಿವೈಎಫ್‌ವೈ ಸಂಘಟನೆ ಪದಾಧಿಕಾರಿಗಳು ಆಸ್ಪತ್ರೆ ಎದುರು ಸೋಮವಾರ ಅನಿರ್ದಿಷ್ಟಾವ ಮುಷ್ಕರ ಆರಂಭಿಸಿದರು.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಲು ಕಾಯಂ ನುರಿತ ವೈದ್ಯರು ನೇಮಿಸಬೇಕು. ಮಹಿಳಾ ವೈದ್ಯರನ್ನು ನೇಮಕ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಕರ್ತವ್ಯಕ್ಕೆ ಹಾಜರಾಗದ ವೈದ್ಯಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಎಕ್ಸ್ ರೇ ವಿಭಾಗ ಮತ್ತು ರಕ್ತ ತಪಾಸಣೆ ಕೇಂದ್ರ ಸ್ಥಾಪಿಸಿ ಅಗತ್ಯ ಸಿಬ್ಬಂದಿ ನೇಮಕ ಮಾಡುವುದು, ಆಸ್ಪತ್ರೆ ರೋಗಿಗಳಿಗೆ ನೀರು, ಶೌಚಾಲಯ ಸ್ವಚ್ಛತೆಗೊಳಿಸಲು ಕ್ರಮ ಕೈಗೊಳ್ಳುವುದು, ಆಸ್ಪತ್ರೆಯಲ್ಲಿ ಖಾಲಿ ಹುದ್ದೆ ಶೀಘ್ರ ಭರ್ತಿ ಮಾಡುವಂತೆ ಒತ್ತಾಯಿಸಿದರು.
ಹೆರಿಗೆ ವೈದ್ಯರ ಕೊರತೆಯಿಂದ ಗರ್ಭಿಣಿಯರು ಸಮಸ್ಯೆ ಎದುರಿಸುವಂತಾಗಿದೆ. ರಾತ್ರಿ ಪಾಳೆ ವೈದ್ಯರ ಕೊರತೆಯಿಂದ ಬಡರೋಗಿಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ಬಿಟ್ಟರೆ ಇನ್ನುಳಿದ ಚಿಕಿತ್ಸೆಗೆ ದೇವದುರ್ಗ ಅಥವಾ ಲಿಂಗಸುಗೂರಿಗೆ ಹೋಗುವ ಸ್ಥಿತಿ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಕಾಯಂ ವೈದ್ಯರ ನೇಮಕ ಮಾಡುವಂತೆ ಒತ್ತಾಯಿಸಿದರು.
ಈ ವೇಳೆ ಮೌನೇಶ ದಾಸರ, ನರಸಣ್ಣ ನಾಯಕ, ಶಬ್ಬೀರ ಜಾಲಹಳ್ಳಿ, ಎಂ. ಪಾಷ್, ಬಸವರಾಜ ವಂದಲಿ, ಬಸವರಾಜ ತೇಕೋರು, ದುರಗಪ್ಪ ಹೊರಟಿ, ಬಸವರಾಜ ಲಿಂಗದಹಳ್ಳಿ, ಹನುಮಂತ ಮಡಿವಾಳ, ರಾಜು ನಾಯಕ, ರಂಗನಾಥ, ಬಸಪ್ಪ ತ್ವಗ ಇದ್ದರು.