Advertisement
ಪಟ್ಟಣದ ಉಣಚಗೇರಿ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸ್ಥಳೀಯ ಹೆಸ್ಕಾಂ ಕಚೇರಿ ಮುಂದೆ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
Related Articles
Advertisement
ರೈತರು ಬಿತ್ತನೆ ಸಂದರ್ಭದಲ್ಲಿರುವಾಗ ವಿದ್ಯುತ್ ಪೂರೈಕೆ ಮಾಡದಿದ್ದರೆ ಕೃಷಿ ಕಾರ್ಯಗಳು ಹೇಗೆ ಸಾಗಬೇಕು. ಕೂಡಲೇ ಈ ಹಿಂದಿನಂತೆ ವಿದ್ಯುತ್ ಪೂರೈಕೆಗೆ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ, ಬಾರಕೋಲ ಚಳವಳಿ ಮಾಡಲಾಗುವುದೆಂದು ಎಚ್ಚರಿಸಿದರು. ಇದಕ್ಕೆ ಧ್ವನಿಗೂಡಿಸಿದ ರೈತರು, ಈಗಾಗಲೇ ಬ್ಯಾಂಕಿನಿಂದ ಲಕ್ಷಾಂತರ ರೂ. ಸಾಲ ಮಾಡಿದ್ದೇವೆ. ನೀವೇನಾದರೂ ನಮ್ಮ ಬೆಳೆಗೆ ನೀರುಣಿಸಲು ವಿದ್ಯುತ್ ಪೂರೈಕೆ ಮಾಡದಿದ್ದರೆ, ನಮ್ಮ ಬದುಕು ಬೀದಿಪಾಲಾಗುವುದಂತೂ ಸತ್ಯ. ವಿದ್ಯುತ್ ನೀಡಿ. ಇಲ್ಲವೇ, ಬದುಕು ಕಟ್ಟಿಕೊಡಿ ಎಂದು ರೈತರು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಬೆಳಿಗ್ಗೆ 9 ಗಂಟೆಗೆ ಪ್ರತಿಭಟನೆ ಆರಂಭಿಸಿದ ರೈತರು ಮೇಲಧಿಕಾರಿಗಳು ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಮಧ್ಯಾಹ್ನ 2 ಗಂಟೆಯಾದರೂ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾರಣ ಆಕ್ರೋಶಗೊಂಡ ರೈತರು, ರಸ್ತೆ ತಡೆದು, ಹೆಸ್ಕಾಂ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಪಿಎಸ್‌ಐ ರಾಘವೇಂದ್ರ ಎಸ್., ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ವಿನಾಕಾರಣ ರಸ್ತೆ ತಡೆಯುವುದಾಗಲಿ, ಬೀಗ ಹಾಕಲು ಮುಂದಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಆಗ ಆಕ್ರೋಶಗೊಂಡ ರೈತರು ಮತ್ತು ಪೊಲೀಸರ ನಡುಗೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್-ಸಿಪಿಎಂ ಬೆಂಬಲ: ಉಣಚಗೇರಿ ಹದ್ದಿನ ರೈತರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು, ಸಾರ್ವಜನಿಕರು ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್, ಸಿಪಿಎಂ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಗಳು ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ರೈತರ ಜಮೀನುಗಳಿಗೆ ವಿದ್ಯುತ್ ಪೂರೈಸುವವರೆಗೂ ಹೋರಾಟ ನಡೆಸಲಾಗುವುದೆಂದು ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದರು.
ಸ್ಥಳೀಯ ಹೆಸ್ಕಾಂ ಕಚೇರಿ ಆವರಣದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ ರಾಜೂರ, ನಿರಂತರ ವಿದ್ಯುತ್ ಪೂರೈಕೆ ಕುರಿತು ಮೇಲಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೊಪ್ಪದ ಪ್ರತಿಭಟನಾಕಾರರು, ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಾಗುವ ಅವಘಡಗಳಿಗೆ ನೀವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದರು.
ಮಧ್ಯೆ ಪ್ರವೇಶಿಸಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್.ಪಾಟೀಲ, ರೈತರ ಬಿತ್ತನೆ ಸಂದರ್ಭದಲ್ಲಿ ಇಂತಹ ನಿರ್ಧಾರ ಸರಿಯಾದ ಕ್ರಮವಲ್ಲ. ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ವರ್ಗಾವಣೆ ತಗೊಂಡು ಬೇರೆಡೆಗೆ ತೆರಳಿ. ಯಾವುದೇ ಸಮಜಾಯಿಷಿ ಬೇಡ. ತಕ್ಷಣವೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗಜೇಂದ್ರಗಡದಿಂದ ಬಾರಕೋಲ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಈ ಹಿಂದೆ ನೀಡುವಂತೆಯೇ ವಿದ್ಯುತ್ ಪೂರೈಸಲಾಗುವುದು. ಈ ಕುರಿತು 8 ಜನರ ಸಮಿತಿ ರಚನೆ ಮಾಡಿ, ಸಮಿತಿ ಕೈಗೊಳ್ಳುವ ನಿರ್ಧಾರ ಪಾಲನೆಗೆ ಮುಂದಾಗುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ರೈತರಾದ ಬಸವರಾಜ ಪಲ್ಲೇದ, ಎಂ.ಕೆ. ಕಟ್ಟಿಮನಿ, ಚಂದ್ರು ಹೂಗಾರ, ರಾಜಪ್ಪ ದಾರೋಜಿ, ಅಂಬರೀಶ ಹಿರೇಕೊಪ್ಪ, ಫಕೀರಪ್ಪ ಕಂಠಿ, ವಿವಿಧ ಪಕ್ಷಗಳ ಮುಖಂಡರಾದ ಶ್ರೀಕಾಂತ್ ಅವಧೂತ್, ಎಂ.ಎಸ್. ಹಡಪದ, ಶಿವರಾಜ ಘೋರ್ಪಡೆ, ವೀರಣ್ಣ ಶೆಟ್ಟರ, ಎಚ್.ಎಸ್.ಸೋಂಪೂರ, ಬಾಲು ರಾಠೊಡ, ಮಂಜುಳಾ ರೇವಡಿ, ಶ್ರೀಧರ ಬಿದರಳ್ಳಿ, ರಾಜು ಸಾಂಗ್ಲಿಕಾರ, ಮಾರುತಿ ಚಿಟಗಿ, ಉಮೇಶ ರಾಠೊಡ, ಫಯಾಜ್ ತೋಟದ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ರೈತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.