Advertisement

ವಸತಿ ನಿಲಯಗಳಲ್ಲಿ ಸೌಲಭ್ಯ ಕಲ್ಪಿಸಲು ಆಗ್ರಹ

10:47 AM Jan 25, 2019 | Team Udayavani |

ರಾಯಚೂರು: ರಾಜ್ಯದ ಸರ್ಕಾರಿ ವಸತಿ ನಿಲಯಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಒದಗಿಸಲು ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಪ್ರಥಮ ದರ್ಜೆ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

Advertisement

ರಾಜ್ಯದ ಬಹುತೇಕ ಸರ್ಕಾರಿ ಹಾಸ್ಟೆಲ್‌ಗ‌ಳು ಸೌಲಭ್ಯ ವಂಚಿತಗೊಂಡಿವೆ. ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ಸ್ನಾನಗೃಹ, ಶೌಚಾಲಯಗಳಿಗೂ ಸಮಸ್ಯೆ ಇದೆ. ತೀರ ಶೋಚನೀಯ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕಾಲದೂಡುವಂತಾಗಿದೆ. ವಸತಿ ನಿಲಯಗಳಿಗೆ ಬರುವವರು ಬಹುತೇಕರು ಬಡ ವಿದ್ಯಾರ್ಥಿಗಳೇ ಆಗಿದ್ದು, ಅಂಥವರಿಗೆ ಸೌಲಭ್ಯ ಕಲ್ಪಿಸದೆ ಸರ್ಕಾರ ಶೋಷಿಸುತ್ತಿದೆ ಎಂದು ದೂರಿದರು.

ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿ ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳೇ ಇಲ್ಲದ್ದರಿಂದ ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ದುಬಾರಿ ಹಣ ನೀಡಿದರೂ ಸೂಕ್ತ ಕಟ್ಟಡಗಳಿರುವುದಿಲ್ಲ ಎಂದು ದೂರಿದರು.

ಕೂಡಲೇ ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಬೇಕು. ವಿದ್ಯಾರ್ಥಿಗಳ ಆಹಾರ ವೆಚ್ಚವನ್ನು 1400 ರೂ.ದಿಂದ 2000 ರೂ.ಗೆ ಹೆಚ್ಚಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಸಕ್ತ ವರ್ಷದಿಂದಲೇ ವಸತಿ ನಿಲಯಗಳ ಸಂಖ್ಯೆ ಹೆಚ್ಚಿಸಬೇಕು. ನಿಲಯ ಪಾಲಕರು ಹಾಗೂ ಸಿಬ್ಬಂದಿ ಕೊರತೆ ನಿವಾರಣೆಗೆ ಕೂಡಲೇ ನೇಮಕಾತಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ವಸತಿ ನಿಲಯಗಳಿಗೆ ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ ಹಾಗೂ ವಸತಿ ನಿಲಯ ಸುತ್ತಲಿನ ಪರಿಸರ ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಹಾಸಿಗೆ, ಹೊದಿಕೆ ಮತ್ತು ದಿಂಬುಗಳ ವ್ಯವಸ್ಥೆ ಮಾಡಬೇಕು. ನಿಲಯದಲ್ಲಿರುವ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

Advertisement

ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ವಸತಿ ನಿಲಯಗಳಿಗೆ ವಿದ್ಯಾರ್ಥಿಗಳ ಆಯ್ಕೆ ಪಾರದರ್ಶಕವಾಗಿರಬೇಕು. ಸ್ವಂತ ಕಟ್ಟಡ ಹೊಂದಿದ ನಿಲಯಗಳಿಗೆ ಶೌಚಾಲಯ ಹಾಗೂ ಸ್ನಾನಗೃಹಗಳ ವ್ಯವಸ್ಥೆ ಮಾಡಬೇಕು ಎಂಬುದು ಸೇರಿ ಇತರ ಬೇಡಿಕೆ ಈಡೇರಿಸಲು ಆಗ್ರಹಿಸಿದರು.

ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ವಿಜಯ ಬೀಳಗಿ, ಸದಸ್ಯರಾದ ಸಾಗರ, ಹರಿಕೃಷ್ಣ, ವೀರೇಶ, ಮಹಾಂತೇಶ, ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next