Advertisement

ಸೌರಶಕ್ತಿ ಚಾಲಿತ ಸಿಂಪರಣೆ ಯಂತ್ರಕ್ಕೆ ಬೇಡಿಕೆ

12:03 PM Apr 28, 2022 | Team Udayavani |

ಆಳಂದ: ಬೆಳೆಗಳಿಗೆ ರೋಗ, ಕೀಟ ನಿಯಂತ್ರಣ ಔಷಧ ಸಿಂಪರಣೆಗಾಗಿ ಮಾರುಕಟ್ಟೆಯಲ್ಲಿ ಹಲವು ರೀತಿಯ ಯಂತ್ರಗಳ ಲಭ್ಯದ ನಡುವೆ ಇನ್ನಷ್ಟು ಅನುಕೂಲ ಮತ್ತು ಕಡಿಮೆ ಬೆಲೆಯಲ್ಲಿ ರೈತರ ಕೈಗೆಟುಕುವಂತೆ ಮಾಡಲು ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಎಂಜಿನಿಯರಿಂಗ್‌ ವಿಭಾಗದ ವಿಜ್ಞಾನಿಗಳ ತಂಡವು ಆವಿಷ್ಕಾರ ಮಾಡಿದ್ದ ಸೌರಶಕ್ತಿ ಚಾಲಿತ ಔಷಧ ಸಿಂಪರಣೆ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ರೈತರು ಇದರ ಬಳಕೆಗೆ ಆಸಕ್ತಿ ತೋರುತ್ತಿದ್ದಾರೆ.

Advertisement

ಕೃಷಿ ಬೆಳೆಯಲ್ಲಿ ಸಿಂಪರಣೆ ಪರಿಣಾಮಕಾರಿ, ಪ್ರಬಲವಾದ ತಂತ್ರಜ್ಞಾನವಾಗಿದೆ. ಇದರಿಂದ ದ್ರವವನ್ನು ಅತಿ ಸಣ್ಣ ಕಣಗಳಾಗಿ ಸಿಂಪರಣೆ ಮಾಡುವುದರಿಂದ ಬೆಳೆ ಸಂರಕ್ಷಣೆ ಮಾಡಬಹುದು. ದೇಶದಲ್ಲಿ ಹಲವು ಸಿಂಪರಣಾ ಯಂತ್ರೋಪಕರಣಗಳು ಲಭ್ಯವಿದ್ದು, ಇವುಗಳಲ್ಲಿ ಮಾನವಚಾಲಿತ, ಶಕ್ತಿಚಾಲಿತ ಸಿಂಪರಣೆ ಯಂತ್ರಗಳು ಬಳಕೆಯಲ್ಲಿವೆ. ಇತ್ತೀಚೆಯ ದಿನಗಳಲ್ಲಿ ಸ್ಪ್ರೆàಯಿಂಗ್‌ ತಂತ್ರಜ್ಞಾನ ಬಹಳಷ್ಟು ಆಧುನಿಕತೆ ಹೊಂದಿದೆ. ಪ್ರಸ್ತುತ ಕಾಲದಲ್ಲಿ ಸಾಮಾನ್ಯವಾಗಿ ರೈತರು ಕೀಟನಾಶ ಸಿಂಪರಣೆ ಮಾಡಲು ಎಲ್ಲ ಬಗೆಯ ಮಾನವ ಚಾಲಿತ ಸಿಂಪರಣೆ ಯಂತ್ರಗಳನ್ನು ಬಳಸುತ್ತಿದ್ದಾರೆ.

ಸಿಂಪರಣೆಗೆ ಬೇಕಾದ ಶಕ್ತಿಯನ್ನು ಸಾಮಾನ್ಯವಾಗಿ ಮಾನವ ಅಥವಾ ಯಾಂತ್ರಿಕ ಶಕ್ತಿ (ಪೆಟ್ರೋಲ್‌ ಹಾಗೂ ಡೀಸೆಲ್‌) ಮೂಲದಿಂದ ಬಳಸಲಾಗುತ್ತದೆ. ಕೆಲವೊಮ್ಮೆ ಔಷಧಿ ಸಿಂಪಡಿಸಲು ಬ್ಯಾಟರಿಚಾಲಿತ ಮೋಟರ್‌ ಪಂಪ್‌ಗ್ಳನ್ನು ಬಳಸಲಾಗುತ್ತದೆ. ಆದರೆ ಈ ಬ್ಯಾಟರಿಗಳನ್ನು ಚಾರ್ಜ್‌ಮಾಡಲು ವಿದ್ಯುತ್‌ ಬೇಕಾಗುತ್ತದೆ. ಈಗಿನ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌, ಸೇಮೆಎಣ್ಣೆ ಹಾಗೂ ವಿದ್ಯುತ್‌ ಬೆಲೆ ಗಗನಕ್ಕೇರಿದೆ. ಇವುಗಳ ಲಭ್ಯತೆಯೂ ಇತಿಮಿತಿಯಲ್ಲಿದೆ. ಆದ್ದರಿಂದ ನವೀಕರಿಸಬಲ್ಲ ಶಕ್ತಿಯಿಂದ ಚಲಿಸುವ ಯಂತ್ರೋಪಕರಣಗಳ ಅಭಿವೃದ್ಧಿಯ ಅವಶ್ಯಕತೆ ಮನಗಂಡು ವಿಜ್ಞಾನಿಗಳ ತಂಡವು ಸೌರಶಕ್ತಿ ಯಂತ್ರ ಆವಿಷ್ಕಾರಗೊಳಿಸಿ ರೈತರಿಗೆ ಅರ್ಪಿಸಿದೆ.

ವಿದ್ಯುತ್‌ ಸರಬರಾಜಿನ ಕೊರತೆಯಿಂದ ಗ್ರಾಮೀಣ ಪ್ರದೇಶಗಳ ಸ್ಥಿತಿ ಅಸ್ಥವ್ಯಸ್ತವಾಗಿದೆ. ಹೀಗಾಗಿ ಸೌರಶಕ್ತಿ ಬಳಸಿ ಸೋಲಾರ್‌ ಫೋಟೊ ವೋಲ್ಟಾಯಿಕ್‌ (ಎಸ್‌ಪಿವಿ) ಮೂಲಕ ವಿದ್ಯುತ್‌ ಉತ್ಪಾದಿಸಿ, ಸಿಂಪರಣೆ (ಸ್ಪ್ರೆàಯಿಂಗ್‌), ನೀರು ಎತ್ತುವುದು (ವಾಟರ್‌ ಪಂಪಿಂಣ್‌), ವಿದ್ಯುದ್ವೀಪ (ಲೈಟಿಂಗ್‌) ಇತ್ಯಾದಿಗೆ ಬಳಸಬಹುದಾದ ಅಂಶಗಳನ್ನೇ ಗಮನದಲ್ಲಿಟ್ಟುಕೊಂಡು ಸೌರಶಕ್ತಿ ಚಾಲಿತ ಸಿಂಪರಣಾ ಯಂತ್ರವನ್ನು ಆವಿಷ್ಕರಿಸಲಾಗಿದೆ.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಎಂಜಿನಿಯರಿಂಗ್‌ ಮಹಾವಿದ್ಯಾಲಯ ತಂಡದ ಮುಖ್ಯಸ್ಥ ಡಾ| ವಿಜಯಕುಮಾರ ಪಲ್ಲೇದ ನೇತೃತ್ವದಲ್ಲಿ ವಿದ್ಯಾರ್ಥಿ ಯಲ್ಲಪ್ಪ, ಸಹ ಪ್ರಾಧ್ಯಾಪಕ ಡಾ| ಪ್ರಕಾಶ ಕೆ.ವಿ, ಡಾ| ಸುಶಿಲೇಂದ್ರ, ಡಾ| ದೇವಾನಂದ ಮಸ್ಕಿ, ಡಾ| ರಾಘವೇಂದ್ರ, ಶ್ರೀಪ್ರಿಯಾಂಕ ನಳ್ಳಾ, ಡಾ| ಎಂ. ವೀರನಗೌಡ ಒಳಗೊಂಡ ಸೌರಶಕ್ತಿ ಸಿಂಪರಣಾ ಯಂತ್ರ ಆವಿಷ್ಕಾರಗೊಳಿಸಿ ನವೀಕರಿಸಬಹುದಾದ ಶಕ್ತಿಯನ್ನು ತಾಂತ್ರಿಕ ವಿಭಾಗದಲ್ಲಿ ಅಭಿವೃದ್ಧಿಪಡಿಸಿ, ಅದರ ತಾಂತ್ರಿಕ ಮೌಲ್ಯಮಾಪನ ಮಾಡಿ, ಸಂಶೋಧನಾ ತಾಕುಗಳಲ್ಲಿ ಪರೀಕ್ಷೆ ಕೈಗೊಂಡು ರೈತರ ಹೊಲಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಂಡು ರೈತರ ಬಳಕೆಗೆ ಬಿಡುಗಡೆ ಮಾಡಿದ್ದಾರೆ.

Advertisement

ಈ ಸೌರಶಕ್ತಿ ಚಾಲಿತ ಸಿಂಪರಣಾ ಯಂತ್ರವು ಸೋಲಾರ್‌ ಫೋಟೊ ವೋಲ್ಟಾಯಿಕ್‌ ಪ್ಯಾನಲ್‌ (ಎಸ್‌ಪಿವಿ ಪ್ಯಾನಲ್‌), ಬ್ಯಾಟರಿ, ಡಿಸಿ ಮೋಟರ್‌, ಪಂಪ್‌, ಸ್ಪ್ರೇಯಿಂಗ್‌ ಟ್ಯಾಂಕ್‌, ಸ್ಪ್ರೇಲಾನ್ಸ್‌, ನಾಜಲ್‌ ಮತ್ತು ಫ್ರೇಮ್‌ಗಳನ್ನು ಒಳಗೊಂಡಿದೆ.

ಈ ಸೌರಶಕ್ತಿ ಚಾಲಿತ ಸಿಂಪರಣಾ ಯಂತ್ರದ ಕಾರ್ಯ ವೈಖರಿ ವಿಶೇಷವಾಗಿದೆ. ಸೂರ್ಯನಿಂದ ಬರುವ ಕಿರಣಗಳು ನೇರವಾಗಿ ಸೋಲಾರ್‌ ಫೋಟೊ ವೋಲ್ಟಾಯಿಕ್‌ ಪ್ಯಾನಲ್‌ ಮೇಲೆ ಬೀಳುವುದರಿಂದ ವಿದ್ಯುತ್ಛಕ್ತಿ ಉತ್ಪಾದನೆಯಾಗುತ್ತದೆ. ಈ ವಿದ್ಯುತ್ಛಕ್ತಿ ಬಳಸಿಕೊಂಡು ಡಿಸಿ ಮೋಟರ್‌ ಚಾಲಿತ ಪಂಪ್‌ ಆಪರೇಟ್‌ ಮಾಡಿ ಹಾಗೂ ಕ್ರಮೇಣವಾಗಿ ದ್ರವದ ಒತ್ತಡ ಹೆಚ್ಚಾಗಿಸುವುದರಿಂದ ಸಿಂಪರಣೆ ಕಾರ್ಯ ಮಾಡಲಾಗುತ್ತದೆ. ಈ ಯಂತ್ರದಲ್ಲಿ 12 ವೋಲ್ಟ್ ಬ್ಯಾಟರಿ ಅಳವಡಿಸಲಾಗಿದ್ದು, ಮೋಡ ಕವಿದ ವಾತಾವರಣದಲ್ಲಿಯೂ ಕೀಟನಾಶಕ ದ್ರಾವಣ ಸಿಂಪರಣೆ ಮಾಡಲು ಸಹಕಾರಿಯಾಗಿದೆ.

ಈ ಸಿಂಪರಣಾ ಯಂತ್ರದಿಂದ ದಿನಕ್ಕೆ ಸುಮಾರು 4ರಿಂದ 5 ಎಕರೆ ಪ್ರದೇಶದ ಬೆಳೆಯಲ್ಲಿ ಕೀಟನಾಶಕ ದ್ರಾವಣವನ್ನು ಸಿಂಪರಣೆ ಮಾಡಬಹುದಾಗಿದೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಉಪಯುಕ್ತವಾಗಿದೆ. ಈ ಯಂತ್ರವನ್ನು ಇನ್ನಿತರ ಕಾರ್ಯಾಚರಣೆಗಳಾದ ಮೊಬೈಲ್‌ ಚಾರ್ಜ ಮಾಡಲು, ರೇಡಿಯೋ ಹಚ್ಚಲು, ಸಣ್ಣ ವಿದ್ಯುದ್ವೀಪ ಉರಿಯಲು ಬಳಸಬಹುದು.

ಸಿಂಪರಣಾ ಯಂತ್ರದ ಅನುಕೂಲತೆಗಳು

ಈ ಯಂತ್ರ ವನ್ನು ಚಲಿಸಲು ಯಾವುದೇ ಇಂಧನ ಅಥವಾ ವಿದ್ಯುತ್ಛಕ್ತಿ ಅವಶ್ಯಕತೆ ಇರುವುದಿಲ್ಲ. ಚಲಿಸಲು ಸೌರಶಕ್ತಿ ಬಳಸುವುದರಿಂದ ಇದೊಂದು ಪರಿಸರ ಸ್ನೇಹಿ ಸಿಂಪರಣಾ ಸಾಧನವಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಸಿಂಪರಣೆ ಮಾಡಬಹುದು. ವಾತಾವರಣ ಕಲುಷಿತವಾಗುವುದಿಲ್ಲ. ಹಸಿರು ಮನೆ ಪರಿಣಾಮ ಕಡಿಮೆ ಮಾಡುತ್ತದೆ.

ಸೌರಶಕ್ತಿ ಯಂತ್ರದ ಬೆಲೆ ಎಷ್ಟಿದೆ

ಈ ಸೌರಶಕ್ತಿ ಚಾಲಿತ ಸಿಂಪರಣಾ ಯಂತ್ರದ ಬೆಲೆ ಸುಮಾರು 6 ಸಾವಿರ ರೂ.ಗಳಾಗಿದ್ದು, ಮೆಸರ್ಸ್‌ ರಾರಾವಿ ಅಗ್ರೋ ಟೆಕ್‌, ರಾಯಚೂರು ಇವರು ಈ ಸಿಂಪರಣಾ ಯಂತ್ರದ ಅಧಿಕೃತ ಮಾರಾಟಗಾರರಾಗಿದ್ದಾರೆ. ಇದನ್ನು ಖರೀದಿಸಲು ಇಚ್ಛೆಯುಳ್ಳ ರೈತ ಬಾಂಧವರು ಮೊಬೈಲ್‌ ಸಂಖ್ಯೆ: 9731699345 ಇಲ್ಲವೇ ವಿವಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ| ವಿಜಯಕುಮಾರ ಪಲ್ಲೇದ (ಮೊ.ಸಂಖ್ಯೆ 9844544007)ಕ್ಕೆ ಸಂಪರ್ಕಿಸಬಹುದು.

2016ರಲ್ಲೇ ಈ ಯಂತ್ರ ಆವಿಷ್ಕಾರಗೊಳಿಸಲಾಗಿದೆ. ಆದರೆ ಈಚೆಗಷ್ಟೇ ಇದರ ಬೇಡಿಕೆಗೆ ಹೆಚ್ಚುತ್ತಿದೆ. ಪೆಟ್ರೋಲ್‌ ಅಥವಾ ಡೀಸೆಲ್‌ ಇಂಜಿನ್‌ ಚಾಲಿತ ಸಿಂಪರಣಾ ತಂತ್ರಗಳನ್ನು ಬೆನ್ನಿಗೆ ಹಾಕಿ ಹೊಡೆಯುವುದರಿಂದ ಯಂತ್ರದ ಕಂಪನದಿಂದ ದೇಹದ ಕಂಪನ ಉಂಟಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಸೌರಶಕ್ತಿ ಬಳಕೆಯಿಂದ ಇದೆಲ್ಲವನ್ನು ತಪ್ಪಿಸಬಹುದು. ಈಗಾಗಲೇ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮತ್ತು ರೈತರು ಖರೀದಿಸಿ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಏಳು ಸಾವಿರ ರೂ. ಬೆಲೆ ಇದೆ. ಆದರೆ ಕೃಷಿ ಇಲಾಖೆ ಮೂಲಕ ರಿಯಾಯ್ತಿ ದರದಲ್ಲಿ ನೀಡಿದರೆ ರೈತರಿಗೆ ಇನ್ನಷ್ಟು ಅನುಕೂಲವಾಗುತ್ತದೆ. -ಡಾ| ವಿಜಯಕುಮಾರ ಪಲ್ಲೇದ್‌, ಕೃಷಿ ವಿವಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ, ರಾಯಚೂರು

ಕಳೆದ ಎಂಟು ವರ್ಷಗಳಿಂದ ಬಳಕೆ ಮಾಡುತ್ತಿದ್ದು, ಸೌರಶಕ್ತಿ ಯಂತ್ರ ಉತ್ತಮವಾಗಿದೆ. ಬಿಸಿಲಿನಲ್ಲಿ ಇನ್ನೂ ಉತ್ತಮ ಕೆಲಸ ಮಾಡುತ್ತದೆ. ವಿದ್ಯುತ್‌ ಕೈಕೊಡುವ ಗೋಜಿಲ್ಲ. ಯಾವುದೇ ಸಮಸ್ಯೆ ಎದುರಾಗದು. ಯಂತ್ರದ ನಿರ್ವಹಣೆ ಕಾಲಕಾಲಕ್ಕೆ ಕೈಗೊಳ್ಳಬೇಕು. “ಕೃಷಿ ಯಂತ್ರಧಾರೆ’ ಕಾರ್ಯಕ್ರಮದಲ್ಲಿ ನೋಡಿ ವಿಜ್ಞಾನಿ ಡಾ| ಪಲ್ಲೇದ ಅವರ ಸಹಾಯದಿಂದ ಈ ಯಂತ್ರ ಪಡೆದು ಬಳಸುತ್ತಿದ್ದೇನೆ. -ಸಹದೇವಪ್ಪ ಬಿದರಳ್ಳಿ, ರೈತ, ಬಸಾಪುರ, ತಾ|ಜಿ| ಕೊಪ್ಪಳ

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next