Advertisement

Census: ಹೊಸ ಜಾತಿಗಣತಿಗೆ ಆಗ್ರಹ- ಕಾಂತರಾಜ ಆಯೋಗದ ವರದಿ ಜಾರಿಗೆ ಒಕ್ಕಲಿಗ ಶ್ರೀಗಳ ವಿರೋಧ

10:17 PM Nov 02, 2023 | Team Udayavani |

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ ತಮ್ಮ ಅವಧಿಯಲ್ಲಿ ಸಿದ್ಧಪಡಿಸಿದ್ದ ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಒಕ್ಕಲಿಗರ ಸಂಘ ವರದಿ ಸ್ವೀಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

Advertisement

ಯಾವುದೇ ಕಾರಣಕ್ಕೂ ಸರ್ಕಾರ ಕಾಂತರಾಜ ಆಯೋಗದ ಅವೈಜ್ಞಾನಿಕ ವರದಿ ಜಾರಿ ಮಾಡಬಾರದು, ಹೊಸದಾಗಿ ಜಾತಿಗಣತಿ ನಡೆಸಬೇಕೆಂದು ಸಮುದಾಯದ ಮಠಾಧೀಶರು ಮತ್ತು ವಿವಿಧ ರಾಜಕೀಯ ಮುಖಂಡರ ಸಮ್ಮುಖದಲ್ಲಿ ನಿರ್ಣಯ ತೆಗೆದುಕೊಳ್ಳುವ ಮೂಲಕ ಸರ್ಕಾರಕ್ಕೆ ಸವಾಲು ಹಾಕಿದೆ.

ಒಕ್ಕಲಿಗರ ಸಂಘದ ಈ ನಿರ್ಣಯ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸುವ ಸಾಧ್ಯತೆಯಿದೆ. ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲೇ ಈ ನಿರ್ಣಯ ಆಗಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಹಿಂದುಳಿದ ವರ್ಗಗಳ ಆಯೋಗ ಈ ತಿಂಗಳಲ್ಲಿ ವರದಿ ಸಲ್ಲಿಸಲಿದೆ ಎಂಬ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘ ಕರೆದಿದ್ದ ಒಕ್ಕಲಿಗ ಸಮುದಾಯದ ಚಿಂತನ-ಮಂಥನ ಸಭೆಯ ನಿರ್ಣಯ ಈಗ ತೀವ್ರ ಕುತೂಹಲ ಕೆರಳಿಸಿದೆ. ಇದರೊಂದಿಗೆ ಸಿಎಂ ಹಾಗೂ ಡಿಸಿಎಂ ನಡುವೆ ಈ ವಿಷಯದಲ್ಲಿ ಒಡಕು ಮೂಡಿರುವುದು ಸ್ಪಷ್ಟವಾಗಿದೆ.

ಗಣ್ಯರಿಗೆ ಅಭಿನಂದನಾ ಹೆಸರಿನಲ್ಲಿ ನಡೆದ ಸಭೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ಶ್ರೀನಂಜಾವಧೂತ ಸ್ವಾಮೀಜಿಯವರು ಮತ್ತು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಭಾಗವಹಿಸಿದ್ದು ವಿಶೇಷವಾಗಿತ್ತು.

Advertisement

ಜತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಚಿಂತನಾ ಸಭೆ ನಡೆಯಿತು. ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಎಂ.ಕೃಷ್ಣಪ್ಪ, ಎಸ್‌.ಟಿ.ಸೋಮಶೇಖರ್‌, ಆರಗ ಜ್ಞಾನೇಂದ್ರ, ಶಾಸಕರಾದ ರವಿಕುಮಾರ್‌ ಗಣಿಗ, ಶರತ್‌ ಬಚ್ಚೇಗೌಡ, ಡಾ.ರಂಗನಾಥ್‌, ಡಾ.ಮಂತರ್‌ ಗೌಡ, ಹೆಚ್‌.ಟಿ.ಮಂಜು, ವಿಧಾನ ಪರಿಷತ್‌ ಎಸ್‌. ರವಿ, ಅ.ದೇವೇಗೌಡ, ದಿನೇಶ್‌ ಗೂಳಿಗೌಡ, ವೈ.ಎ.ನಾರಾಯಣಸ್ವಾಮಿ, ಕೆ.ಗೋವಿಂದರಾಜು ಪಾಲ್ಗೊಂಡಿದ್ದರು.

ಸಭೆಯಲ್ಲಿ ಸ್ವಾಮೀಜಿಗಳ ತೀವ್ರ ವಿರೋಧ
ಸಭೆಯಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ರಾಜ್ಯದಲ್ಲಿ ನೆಲೆಸಿರುವ ಸಮಗ್ರ ಒಕ್ಕಲಿಗರ ಸಮುದಾಯದ ಹಿತದೃಷ್ಟಿಯಿಂದ ಎಚ್‌.ಕಾಂತರಾಜ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆಸಿರುವ ಅವೈಜ್ಞಾನಿಕವಾದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀûಾ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು. ಯಾವುದೇ ಕಾರಣಕ್ಕೂ ಸರ್ಕಾರ ಈ ವರದಿ ಜಾರಿ ಮಾಡಬಾರದು. ಹೊಸದಾಗಿ ಜಾತಿಗಣತಿ ನಡೆಸುವಂತೆ ಮಠಾಧೀಶರು ಒತ್ತಾಯಿಸಿದರು. ಜತೆಗೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಕ್ಕಲಿಗರ ಮೀಸಲಾತಿ ಹೆಚ್ಚಳ ಮಾಡಿತ್ತು. ಆ ಮೀಸಲಾತಿಯನ್ನು ಜಾರಿಗೊಳಿಸುವಂತೆಯೂ ಆಗ್ರಹಿಸಿದರು.

ಸಿಎಂ ಬಳಿ ನಿಯೋಗ
ಈ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೂಡ ಕೈಗೊಳ್ಳಲಾಗಿದೆ. ಕಾಂತರಾಜ ಆಯೋಗದ ವರದಿ ಸಂಬಂಧ ಶೀಘ್ರದಲ್ಲೇ ಒಕ್ಕಲಿಗ ಸಮುದಾಯದ ಶ್ರೀಗಳ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ.

ನಿಖರ ದತ್ತಾಂಶ ಕಲೆಹಾಕಲಿ
ಜಾತಿಗಣತಿ ವರದಿ ತಯಾರಿಸಿ 8 ವರ್ಷ ಕಳೆದು ಹೋಗಿದೆ. ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವುದರಿಂದ ಈ ವರದಿ ಅಪ್ರಸ್ತುತವಾಗಿದೆ. ಎಂಟು ವರ್ಷದಲ್ಲಿ ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯ ನೈಜ ಸ್ಥಿತಿಗತಿ¿ಲ್ಲಿ ಹಲವು ಬದಲಾವಣೆ ಕಂಡುಬಂದಿದೆ. ಆದ್ದರಿಂದ, ನಿಖರ ದತ್ತಾಂಶ ಪಡೆದು ಹೊಸದಾಗಿ ಜಾತಿಗಣತಿ ವರದಿ ಸರ್ಕಾರ ಸಿದ್ಧಪಡಿಸುವಂತೆ ಸಭೆಯಲ್ಲಿ ಪಕ್ಷಭೇದ ಮರೆತು ಶಾಸಕರು ಮತ್ತು ಮಾಜಿ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂತರಾಜ ಆಯೋಗದ ವರದಿ ಸೇರಿದಂತೆ ಸಮುದಾಯದ ಹಲವು ವಿಚಾರಗಳನ್ನು ಮೂವರು ಶ್ರೀಗಳ ಸಮ್ಮುಖದಲ್ಲಿ ಮುಖಂಡರುಗಳು ಚರ್ಚಿಸಿದ್ದೇವೆ. ವರದಿ ತಯಾರಿಕೆಯಲ್ಲಿ ಕೆಲ ಲೋಪಗಳಾಗಿವೆ. ಸಭೆಯ ನಿರ್ಣಯವನ್ನು ಸಿಎಂ ಗಮನಕ್ಕೆ ತರಲಾಗುವುದು.
-ಚಲುವರಾಯಸ್ವಾಮಿ, ಸಚಿವ

ಕಾಂತರಾಜ ಆಯೋಗದ ಜಾತಿಗಣತಿ ವರದಿ ವರದಿಯೇ ಅಲ್ಲ. ಈ ಅವೈಜ್ಞಾನಿಕ ವರದಿ ಬಗ್ಗೆ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆಸಲಾಗಿದೆ. ವರದಿ ಸ್ವೀಕರಿಸದಂತೆ ಕಾಂಗ್ರೆಸ್‌ ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ನಿರ್ಣಯಕ್ಕೆ ಬರಲಾಗಿದೆ.
-ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಸಚಿವ

ದೆಹಲಿಯಲ್ಲೂ ಚರ್ಚೆ
“ಜಾತಿ ಗಣತಿ” ವಿವಾದ ಈಗ ದೆಹಲಿಯ ಬಿಜೆಪಿ ಪಡಸಾಲೆಯಲ್ಲೂ ಸದ್ದು ಮಾಡಿದೆ. ಈ ಬಗ್ಗೆ ರಾಜ್ಯ ನಾಯಕರಿಂದ ವರಿಷ್ಠರು ವಾಸ್ತವಾಂಶಗಳ ಮಾಹಿತಿ ಪಡೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್‌ ಶಾ, ಗಡ್ಕರಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫ‌ಡ್ನವೀಸ್‌ ಭಾಗಿಯಾಗಿದ್ದ ರಾಷ್ಟ್ರೀಯ ಹಿಂದುಳಿದ ವರ್ಗದ ನಾಯಕರ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಕರ್ನಾಟಕದ ಪ್ರತಿನಿಧಿಗಳು ಜಾತಿ ಗಣತಿ ವಿವಾದದ ಬಗ್ಗೆ ಕೇಂದ್ರ ನಾಯಕರಿಗೆ ವರದಿ ನೀಡಿದ್ದಾರೆ.

ನ.20ಕ್ಕೆ ವರದಿ ಸಲ್ಲಿಕೆ?
ಜಾತಿಗಣತಿಯ ಪರಿಷ್ಕೃತ ವರದಿ ಬಹುತೇಕ ಸಿದ್ಧಗೊಂಡಿದ್ದು, ನವೆಂಬರ್‌ 20ರ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರ ಅಧಿಕಾರಾವಧಿ ನ.26ಕ್ಕೆ ಮುಗಿಯಲಿದೆ. ಅದಕ್ಕೂ ನಾಲ್ಕಾರು ದಿನ ಮುಂಚಿತವಾಗಿಯೇ ಹಲವು ಮಾರ್ಪಾಡುಗಳೊಂದಿಗೆ “ಪರಿಷ್ಕೃತ ವರದಿ’ ನೀಡಲು ಆಯೋಗ ಸಿದ್ಧತೆ ನಡೆಸಿದೆ. ಸಲ್ಲಿಕೆಯಾದ ನಂತರ ಸಲಹೆ-ಸೂಚನೆಗಳಿದ್ದರೆ, ಅವುಗಳನ್ನು ಅಳವಡಿಸಲು ಮುಂದಿನ ಮೂರ್‍ನಾಲ್ಕು ದಿನ ಕಾಲಾವಕಾಶ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next