Advertisement

ಗಗನ ಕುಸುಮವಾಯಿತೇ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೇಡಿಕೆ

02:03 AM Mar 05, 2022 | Team Udayavani |

ವಂಡ್ಸೆ: ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಕೇವಲ ಮೂರು ಸರಕಾರಿ ಪದವಿ ಕಾಲೇಜುಗಳಿವೆ. ವಂಡ್ಸೆಯ ಹೋಬಳಿ ಕೇಂದ್ರಕ್ಕೊಂದು ಪ್ರಥಮದರ್ಜೆ ಕಾಲೇಜು ಅಗತ್ಯ ಎನ್ನುವ ಬೇಡಿಕೆ ವಂಡ್ಸೆಯಲ್ಲಿ ಪ.ಪೂ. ಕಾಲೇಜು ಆರಂಭವಾದ ಕೆಲವೇ ವರ್ಷಗಳಲ್ಲಿ ಕೇಳಿ ಬಂದಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಈ ವಿಚಾರವಾಗಿ ವಂಡ್ಸೆ ಭಾಗಕ್ಕೆ ಪ್ರಥಮ ದರ್ಜೆ ಕಾಲೇಜಿಗೆ ಆಗ್ರಹಿಸಿ ಸಾಕಷ್ಟು ಮನವಿಗಳು ಕೂಡ ಸರಕಾರಕ್ಕೆ ತಲುಪಿವೆ. ಆದರೆ ವಂಡ್ಸೆ ಭಾಗಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಾತ್ರ ಗಗನ ಕುಸುಮವಾಗಿಯೇ ಉಳಿದುಕೊಂಡಿದೆ. ವಂಡ್ಸೆಯ ನೆಂಪುವಿನಲ್ಲಿರುವ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಹತ್ತಿರ ಪದವಿ ಕಾಲೇಜು ಆರಂಭಿಸಲು ಮೂಲ ವ್ಯವಸ್ಥೆಗಳಿದ್ದು ಸಂಬಂಧಪಟ್ಟ ಇಲಾಖೆಯ ಅ ಧಿಕಾರಿಗಳು ಪರಿಶೀಲನೆ ನಡೆಸಿದ್ದರು. ರಾಜ್ಯಮಟ್ಟದ ಅ ಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರಿಂದ ಪ್ರಥಮ ದರ್ಜೆ ಕಾಲೇಜು ಮಂಜೂರಾತಿಯಾಯಿತು ಎಂದೇ ಜನ ನಂಬಿದ್ದರು. ಆದರೆ ಈ ಬಗ್ಗೆ ಯಾವುದೇ ಬೆಳವಣಿಗೆಗಳು ಮುಂದೆ ಕಂಡು ಬಾರದಿರುವುದು ಶಿಕ್ಷಣಾಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ.

Advertisement

ಸಾಕಷ್ಟು ವರ್ಷಗಳಿಂದ ಈ ಭಾಗದ ಜನಪ್ರತಿನಿಧಿಗಳು ಇಲ್ಲಿ ಪದವಿ ಕಾಲೇಜು ಸ್ಥಾಪನೆಯ ಬಗ್ಗೆ ಸರಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ.

ಈ ಭಾಗದ ಗ್ರಾ.ಪಂ. ಗ್ರಾಮಸಭೆಗಳಲ್ಲಿ ಕಾಲೇಜಿನ ಆವಶ್ಯಕತೆಯ ಬಗ್ಗೆ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸುವ ಕೆಲಸ ಕೂಡ ಆಗಿದೆ. ಸರಕಾರ ಮಟ್ಟದಿಂದ ಹೊಸ ಪದವಿ ಕಾಲೇಜುಗಳಿಗೆ ಅನುಮತಿ ನೀಡದಿರುವುದು ಈ ಹಿನ್ನಡೆಗೆ ಕಾರಣವಾಗಿದೆ.

ನೆಂಪುವಿನಲ್ಲಿ ಸರಕಾರಿ ಪ.ಪೂ. ಕಾಲೇಜು ಇದೆ. ಕೆರಾಡಿಯಲ್ಲಿ ವರಸಿದ್ಧಿ ವಿನಾಯಕ ಪ.ಪೂ. ಕಾಲೇಜು ಇದೆ. ಕೊಲ್ಲೂರಿನಲ್ಲಿಯೂ ಮೂಕಾಂಬಿಕಾ ಪ.ಪೂ. ಕಾಲೇಜು ಇದೆ. ಈ ಎಲ್ಲ ಕಾಲೇಜುಗಳಲ್ಲಿ ಪ.ಪೂ. ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಪ್ರಸ್ತಾವಿತ ನೆಂಪುವಿನಲ್ಲಿ ಪದವಿ ಕಾಲೇಜು ಆದರೆ ಇಲ್ಲಿಗೆ ಬರುತ್ತಾರೆ. ಎಲ್ಲ ದೃಷ್ಟಿಯಿಂದಲೂ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ವಂಡ್ಸೆ ನೆಂಪುವಿನಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಾದರೆ ಅನುಕೂಲವಾಗುತ್ತದೆ ಎಂದು ವಿದ್ಯಾಭಿಮಾನಿಗಳು ತಿಳಿಸುತ್ತಾರೆ.

ಇವತ್ತು ಈ ಭಾಗದ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ಹೋಗಬೇಕಾದರೆ ಕುಂದಾಪುರ ಬೈಂದೂರು, ಶಂಕರನಾರಾಯಣಕ್ಕೆ ಹೋಗಬೇಕು. ಪ್ರಸ್ತುತ ಸರಕಾರಿ ಕಾಲೇಜು ಇರುವುದು ಶಂಕರನಾರಾಯಣ, ಬೈಂದೂರು, ಕೋಟೇಶ್ವರದಲ್ಲಿ ಮಾತ್ರ. ಕೊಲ್ಲೂರಿನಿಂದ ಈಚೆಯ ವಿದ್ಯಾರ್ಥಿಗಳು ಸರಕಾರಿ ಡಿಗ್ರಿ ಕಾಲೇಜಿಗೆ ಹೋಗಬೇಕಾದರೆ ಬೈಂದೂರು, ಕೋಟೇಶ್ವರಕ್ಕೆ ಹೋಗಬೇಕು. ಕುಂದಾಪುರಕ್ಕೆ ಹೋಗಿ ಅಲ್ಲಿಂದ ಇನ್ನೊಂದು ಬಸ್‌ ಮೂಲಕ ಕೋಟೇಶ್ವರ ತಲುಪಬೇಕಾಗುತ್ತದೆ. ಇನ್ನೂ ಶಂಕರನಾರಾಯಣಕ್ಕೆ ಈ ಮಾರ್ಗದಿಂದ ಬಸ್‌ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಇಲ್ಲಿ ಪದವಿ ಕಾಲೇಜು ಆದರೆ ಈ ಪರಿಸರದ ಎಲ್ಲ ವಿದ್ಯಾರ್ಥಿಗಳು ಪದವಿ ಶಿಕ್ಷಣ ದೊರಕುತ್ತದೆ. ಈ ಬಗ್ಗೆ ವಿದ್ಯಾಭಿಮಾನಿಗಳು ಪದವಿ ಕಾಲೇಜಿನ ಕನಸಿಗೆ ಬೆಂಬಲ ನೀಡಿ, ಸಂಬಂ ಧಿಸಿದವರ ಮೇಲೆ ಒತ್ತಡ ತರಬೇಕಾದ ಆವಶ್ಯಕತೆ ಇದೆ. ಕುಗ್ರಾಮ ಪ್ರದೇಶಗಳನ್ನು ಹೊಂದಿರುವ ಈ ಪರಿಸರಕ್ಕೆ ಪ್ರಥಮ ದರ್ಜೆ ಕಾಲೇಜಿನ ಅವಶ್ಯವಿದೆ.

Advertisement

ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ
ನೆಂಪುವಿನಲ್ಲಿ ಸರಕಾರಿ ಪದವಿ ಕಾಲೇಜು ಆರಂಭಕ್ಕೆ ಸ್ಥಳೀಯರು, ವಿದ್ಯಾಭಿಮಾನಿಗಳು ಬೇಡಿಕೆ ಇಟ್ಟಿದ್ದು ಆ ಬಗ್ಗೆ ಶಿಕ್ಷಣಸಚಿವರ ಗಮನಕ್ಕೂ ತರಲಾಗಿದೆ. ಕೊಲ್ಲೂರು ಸಹಿತ ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
-ಬಿ.ಎಂ.ಸುಕುಮಾರ ಶೆಟ್ಟಿ,, ಶಾಸಕರು, ಬೈಂದೂರು ಕ್ಷೇತ್ರ.

ಆಸುಪಾಸಿನ ವಿದ್ಯಾರ್ಥಿಗಳಿಗೆ ಅನುಕೂಲ
ನೆಂಪುವಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಬಳಿ ಸರಕಾರಿ ಪದವಿ ಕಾಲೇಜು ಆರಂಭಿಸುವುದು ಸೂಕ್ತ. ಇದರಿಂದ ಆಸುಪಾಸಿನ ವಿದ್ಯಾರ್ಥಿಗಳಿಗೆ ಅನುಕೂಲ. ಕೋಟೇಶ್ವರ,ಕುಂದಾಪುರ, ಬೈಂದೂರು ಮುಂತಾದೆಡೆಗೆ ತೆರಳುವುದು ತಪ್ಪುತ್ತದೆ.
-ಉದಯಕುಮಾರ್‌ ಶೆಟ್ಟಿ, ಅಧ್ಯಕ್ಷರು, ವಂಡ್ಸೆ.ಗ್ರಾ.ಪಂ.

ಒಂದೇ ಸೂರಿನಡಿ ಪರಿಪೂರ್ಣ ಸೌಲಭ್ಯ
ಸರಕಾರಿ ಪ.ಪೂ. ಕಾಲೇಜು ಹೊಂದಿರುವ ನೆಂಪು ಪರಿಸರ ಪದವಿ ಕಾಲೇಜು ಆರಂಭಕ್ಕೆ ಯೋಗ್ಯವಾಗಿದೆ.ಅಲ್ಲದೇ ಒಂದೇ ಸೂರಿನಡಿ ಪರಿಪೂರ್ಣ ಸೌಲಭ್ಯ ಶಿಕ್ಷಣ ಒದಗಿಸಿದಂತಾಗುವುದು.
ಶಿಕ್ಷಣಾಭಿಮಾನಿಗಳು, ನೆಂಪು

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next