Advertisement

ಇನ್ನೂ ತಲಾ 300 ಮೀಟರ್‌ ಬ್ರೇಕ್‌ವಾಟರ್‌ ವಿಸ್ತರಣೆಗೆ ಬೇಡಿಕೆ

10:45 AM Aug 10, 2018 | |

ಗಂಗೊಳ್ಳಿ: ಕೋಡಿಯಲ್ಲಿ 900 ಮೀ. ಹಾಗೂ ಗಂಗೊಳ್ಳಿಯ ಕಡಲಿನಲ್ಲಿ 700 ಮೀ. ಉದ್ದದ ಬ್ರೇಕ್‌ ವಾಟರ್‌ ಕಾಮಗಾರಿ ಇನ್ನೇನು ಮುಗಿಯುವ ಹಂತದಲ್ಲಿದೆ. ಆದರೆ ಎರಡೂ ಬದಿಯಲ್ಲಿ ಸ್ವಲ್ಪ ಮಟ್ಟಿಗಿನ ಬ್ರೇಕ್‌ ವಾಟರ್‌ ಕಡಿಮೆಯಾಗಿರುವುದರಿಂದ ಈಗ ಸಮುದ್ರದ ಅಲೆಗಳು ಈ ಬ್ರೇಕ್‌ ವಾಟರೊಳಗೆ ನುಸುಳಿ ಬರುವುದರಿಂದ ಗಂಗೊಳ್ಳಿ ಬಂದರಿನಲ್ಲಿರುವ ಬೋಟುಗಳ ಸಂಚಾರಕ್ಕೆ ತೊಂದರೆಯಾಗಲಿದೆ. 

Advertisement

ಸಮುದ್ರ ತೀರದಲ್ಲಿ ಕಡಲ್ಕೊರೆತದ ಶಾಶ್ವತ ತಡೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ 102 ಕೋ.ರೂ. ವೆಚ್ಚದ ಬ್ರೇಕ್‌ ವಾಟರ್‌ ಕಾಮಗಾರಿ 2015 ರಲ್ಲಿ ಮಂಜೂರಾಗಿದ್ದು, ಕಾಮಗಾರಿ ಈಗ ಕೊನೆಯ ಹಂತದಲ್ಲಿದೆ. ಆದರೆ ಕೋಡಿ ಹಾಗೂ ಗಂಗೊಳ್ಳಿ ಕಡಲ ತೀರದ ಎರಡೂ ಬದಿಯಲ್ಲಿ ಬ್ರೇಕ್‌ ವಾಟರ್‌ ಕೊನೆಯಲ್ಲಿ ತಲಾ 300 ಮೀ. ತಡೆಗೋಡೆ ವಿಸ್ತರಿಸಿದರೆ ಅಲೆಗಳು ಒಳ ನುಸುಳಿ ಬರುವುದು ತಪ್ಪುತ್ತದೆ.

ಮೀನುಗಾರಿಕೆ ನಿಷೇಧ ಅಂತ್ಯವಾಗಿ, ಮತ್ತೆ ಹೊಸ ಮೀನುಗಾರಿಕೆ ಋತು ಆರಂಭವಾಗಿದ್ದು, ಗಂಗೊಳ್ಳಿಯಲ್ಲಿ ಇನ್ನಷ್ಟೇ ಬೋಟುಗಳು ಮೀನುಗಾರಿಕೆಗೆ ತೆರಳಬೇಕಿದೆ. ಆದರೆ ಈಗ ಈ ಬ್ರೇಕ್‌ ವಾಟರ್‌ ಸಮಸ್ಯೆಯಿಂದಾಗಿ ಬೋಟುಗಳು ತೆರಳಲು ತೊಡಕಾಗಿದೆ.

ಗಂಗೊಳ್ಳಿ ಬಂದರಿನಿಂದ 338 ಟ್ರಾಲರ್‌, 36 ಪರ್ಸಿನ್‌, 1,945 ಗಿಲ್‌ನೆಟ್‌ ಹಾಗೂ ಮಾಟುಬಲೆ, 1,456 ಯಾಂತ್ರೀಕೃತವಲ್ಲದ ದೋಣಿಗಳು, ಬೀಡುಬಲೆ, 23 ಪಾತಿ ದೋಣಿಗಳು ಸೇರಿ ಒಟ್ಟು 3,798 ಬೋಟುಗಳು ಮೀನುಗಾರಿಕೆಗೆ ತೆರಳುತ್ತವೆ.

ತಿಂಗಳೊಳಗೆ ಪೂರ್ಣ
ಈ 102 ಕೋಟಿ ರೂ. ವೆಚ್ಚದ ಬ್ರೇಕ್‌ ವಾಟರ್‌ ಕಾಮಗಾರಿ ಪೂರ್ಣಗೊಳ್ಳಲು ಮುಂದಿನ ವರ್ಷದ ಡಿಸೆಂಬರ್‌ ವರೆಗೆ ಕಾಲಾವಕಾಶವಿದ್ದರೂ, ಈ ತಿಂಗಳಾಂತ್ಯದೊಳಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ. 

Advertisement

ಇದರಿಂದ ಸಮಸ್ಯೆಯೇನು?
ಎರಡೂ ಬದಿಯಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ 300 ಮೀಟರ್‌ ಕೊರತೆಯಾಗಿರುವುದರಿಂದ ಸಮುದ್ರದ ಅಲೆಗಳು ಈ ಬ್ರೇಕ್‌ ವಾಟರೊಳಗೆ ನುಗ್ಗಿ ಬರುತ್ತಿದೆ. ಇದರಿಂದ ಗಂಗೊಳ್ಳಿ ಬಂದರಿನಿಂದ ಬೋಟುಗಳು ಹೊರ ಹೋಗಲು ಅಥವಾ ಒಳ ಬರಲು ತೊಂದರೆಯಾಗುತ್ತಿದೆ. ಮೊದಲಾದರೆ ತಡೆಗೋಡೆಯಿರಲಿಲ್ಲ. ಕಡಲು ಪ್ರಕ್ಷುಬ್ಧಗೊಂಡಾಗ ಬೋಟುಗಳು ಆಚೆ-ಈಚೆ ಹೋಗುತ್ತಿದ್ದವು. ಆದರೆ ಈಗ ಬೋಟುಗಳು ಈ ತಡೆಗೋಡೆಗೆ ಹೋಗಿ ಢಿಕ್ಕಿ ಹೊಡೆಯುವ ಸಂಭವವಿದೆ. 

ಸಚಿವರಿಗೂ ಮನವಿ
ಈ ಸಂಬಂಧ ಗಂಗೊಳ್ಳಿ- ಕೋಡಿ ಭಾಗದ ಮೀನುಗಾರರೆಲ್ಲ ರಾಜ್ಯ ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡಗೌಡ ಅವರು ಗಂಗೊಳ್ಳಿ ಬಂದರಿಗೆ ಭೇಟಿ ಕೊಟ್ಟ ಸಂದರ್ಭ ಬ್ರೇಕ್‌ ವಾಟರ್‌ ವಿಸ್ತರಣೆಗೆ ಮನವಿ ಮಾಡಿದ್ದೇವೆ. ಪ್ರಸ್ತಾವನೆ ಕಳುಹಿಸಲು ತಿಳಿಸಿದ್ದಾರೆ. ಇಲಾಖೆಗೂ ಮನವಿ ಮಾಡಿದ್ದೇವೆ. ಎರಡೂ ಬದಿಯಲ್ಲಿ ತಲಾ 300 ಮೀಟರನ್ನು ತುರ್ತಾಗಿ ವಿಸ್ತರಿಸಲಿ. ಇಲ್ಲದಿದ್ದರೆ ಬೋಟುಗಳು ಕಡಲಿಗಿಳಿಯಲು ಸಮಸ್ಯೆಯಾಗಲಿದೆ.
-ರಮೇಶ್‌ ಕುಂದರ್‌,
ಅಧ್ಯಕ್ಷರು, ಗಂಗೊಳ್ಳಿ ಪರ್ಸಿನ್‌ ಮೀನುಗಾರರ
ಸ್ವಸಹಾಯ ಸಂಘ

2ನೇ ಹಂತದಲ್ಲಿ ವಿಸ್ತರಣೆ
ಈಗಷ್ಟೇ ಮೊದಲ ಹಂತದ ಕಾಮಗಾರಿ ಮುಗಿದಿದೆ. ಇನ್ನು ಬೋಟುಗಳ ಸಂಚಾರ, ಅಲ್ಲಿನ ಪರಿಸ್ಥಿತಿ ನೋಡಿಕೊಂಡು 1 ವರ್ಷದೊಳಗೆ ಅದರಿಂದ ಸಮಸ್ಯೆ ಆಗುತ್ತಿದ್ದರೆ, ಆ ಕುರಿತು ಎರಡನೇ ಹಂತದ ಕಾಮಗಾರಿಗೆ ಪ್ರಸ್ತಾವನೆ ಕಳುಹಿಸಲಾಗುವುದು. ಈಗ ಮಾಡಿರುವ ಕಾಮಗಾರಿಯಲ್ಲಿಯೂ ಸುಮಾರು 40 ಮೀಟರ್‌ ವಿಸ್ತರಣೆ ಮಾಡಿದ್ದೇವೆ. ಪುಣೆಯ ಸಿಡಬ್ಲ್ಯೂಪಿಎಸ್‌ (ಸೆಂಟರ್‌ ವಾಟರ್‌ ಪವರ್‌ ರಿಸೋರ್ಸ್‌) ತಂಡ ನೀಡಿದ ಅಧ್ಯಯನ ವರದಿಯಂತೆ ಈ ಕಾಮಗಾರಿ ಮಾಡಲಾಗಿದೆ.
-ನಾಗರಾಜ್‌
ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ
ಉಡುಪಿ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next