ಕಾರವಾರ: ಡೆಲ್ಟಾ ಪ್ಲಸ್ ರೂಪಾಂತರಿ ಆತಂಕ ಹೆಚ್ಚಾದ ಹಿನ್ನಲೆ ಉತ್ತರಕನ್ನಡ ಗೋವಾ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕದಿಂದ ಗೋವಾ ತೆರಳುವ ಕಾರವಾರದ ಮಾಜಾಳಿ ಗಡಿಯಲ್ಲಿ ಪ್ರವೇಶಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ.
ಕೋವಿಡ್ ನೆಗೆಟಿವ್ ವರದಿ ಇಲ್ಲದೆ ಹೋದರೆ ಗೋವಾ ಗಡಿಯಲ್ಲಿ ಕೋವಿಡ್ ಪರೀಕ್ಷೆಗಾಗಿ 270 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ.
ಇದರಿಂದ ಪ್ರತಿನಿತ್ಯ ಗೋವಾಕ್ಕೆ ಉದ್ಯೋಗಕ್ಕೆ ತೆರಳುವವರಿಗೆ ತೊಂದರೆ ಉಂಟಾಗುತ್ತಿದೆ. ಮಂಗಳವಾರ ಏಕಾಏಕಿಯಾಗಿ ಈ ರೀತಿಯ ಕ್ರಮಗಳನ್ನ ಗೋವಾ ಸರ್ಕಾರ ಕೈಗೊಂಡಿದ್ದು ಮಾಹಿತಿ ಇಲ್ಲದೇ ಆಗಮಿಸಿದ ವಾಹನ ಸವಾರರು ಪರದಾಡುವಂತಾಯಿತು.
ದಿನದಿಂದ ದಿನಕ್ಕೆ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆ ಕರ್ನಾಟಕ ಗಡಿಯಲ್ಲಿಯೂ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದ್ದು ಆರ್‌ಟಿಪಿಸಿಆರ್ ವರದಿ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಇಲ್ಲವಾದಲ್ಲಿ ಕ್ವಾರಂಟೈನ್ ಸೀಲ್ ಹಾಕಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ.