ಬೆಂಗಳೂರು: ನೆರೆ ಪೀಡಿತ ಕೊಡಗು ಹಾಗೂ ಕೇರಳದ ಸಂತ್ರಸ್ತರಿಗೆ ಪ್ರತ್ಯೇಕವಾಗಿ ತಲಾ 500 ಕ್ವಿಂಟಾಲ್ ಅಕ್ಕಿ, 100 ಕ್ವಿಂಟಾಲ್ ಸಕ್ಕರೆ, 50,000 ರೂ. ಮೊತ್ತದ ಸಾಂಬಾರ್ ಪುಡಿ, 8000 ರೂ. ಮೌಲ್ಯದ ಹೊದಿಕೆಗಳನ್ನು ಕೆಪಿಸಿಸಿ ಸೋಮವಾರ ರವಾನಿಸಿತು.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಬಳಿ ಸಾಮಗ್ರಿ ಹೊತ್ತ 10 ಟ್ರಕ್‌ಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಕಾಂಗ್ರೆಸ್ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಸಹ ತಮ್ಮ ಎರಡು ತಿಂಗಳ ಗೌರವ ಧನವನ್ನು ಸಂತ್ರಸ್ತರ ನೆರವಿಗೆ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನೆರೆ ಹಾವಳಿಯಿಂದಾಗಿ ಕೇರಳ ಹಾಗೂ ಕೊಡಗಿನ ಜನ ತತ್ತರಿಸಿದ್ದಾರೆ. ಅವರ ನೆರವಿಗೆ ಧಾವಿಸುವಂತೆ ಎಐಸಿಸಿ ಅಧ್ಯಕ್ಷರಾದ ರಾಹುಲ್‌ಗಾಂಧಿಯವರು ಸೂಚಿಸಿದ್ದು, ಅದರಂತೆ ಕೇರಳ ಹಾಗೂ ಕೊಡಗಿನ ಸಂತ್ರಸ್ತರಿಗೆ ಪಕ್ಷದ ವತಿಯಿಂದ ಅಗತ್ಯ ವಸ್ತುಗಳನ್ನು ರವಾನಿಸಲಾಗಿದೆ ಎಂದು ಹೇಳಿದರು.
ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಸೋಮವಾರ ಕೊಡಗಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಚಿವ ಯು.ಟಿ.ಖಾದರ್ ಅವರು ಸ್ಥಳದಲ್ಲಿದ್ದು, ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಆ.23ರಂದು ನಾವು ಕೊಡಗಿಗೆ ಭೇಟಿ ನೀಡಲಿದ್ದೇವೆ. ಎಲ್ಲರೂ ಒಟ್ಟಿಗೆ ತೆರಳಿದರೆ ತೊಂದರೆಯಾಗಲಿದ್ದು, ಪರಿಸ್ಥಿತಿ ಅವಲೋಕಿಸಿ ಪ್ರತ್ಯೇಕ ತಂಡಗಳಲ್ಲಿ ತೆರಳಿದ್ದೇವೆ ಎಂದು ತಿಳಿಸಿದರು.
ದೇಣಿಗೆಗೆ ಎರಡು ತಿಂಗಳ ಗೌರವಧನ: ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಮಾತನಾಡಿ, ಸಂತ್ರಸ್ತರಿಗೆ ಅಗತ್ಯವಿರುವ ವಸ್ತುಗಳನ್ನು ರವಾನಿಸಲಾಗಿದೆ. ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಸಹ ನೆರವಿಗೆ ಧಾವಿಸಿದ್ದು, ಎರಡು ತಿಂಗಳ ಗೌರವ ಧನ ನೀಡಲಿದ್ದಾರೆ. ಅದರಂತೆ ಸುಮಾರು 10 ಕೋಟಿ ರೂ. ನೆರವು ನೀಡಲಾಗುವುದು ಎಂದು ತಿಳಿಸಿದರು.