ಮುಂಡಗೋಡ: ತಾಲೂಕಿನಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಹೆರಿಗೆಗೆಂದು ಆಸ್ಪತ್ರೆಗೆ ಬರುತ್ತಿರುವಾಗ ಮಾರ್ಗ ಮಧ್ಯೆ 108 ಆಂಬ್ಯುಲೆನ್ಸ್‌ನಲ್ಲಿ ಹೆರಿಗೆಯಾಗುವುದು ಸಾಮಾನ್ಯವಾಗಿದೆ. ಮುಂದುವರಿದ ತಂತ್ರಜ್ಞಾನದಿಂದ ಆಸ್ಪತ್ರೆಗಳಲ್ಲಿ ವೈದ್ಯರು ಸಲೀಸಾಗಿ ಹೆರಿಗೆ ಮಾಡಿಸುತ್ತಿದ್ದು, ಅದರಲ್ಲಿಯೂ 108 ಆಂಬ್ಯುಲೆನ್ಸ್‌ನಲ್ಲಿ ಹೆರಿಗೆಯಾಗುವುದು ವಿಶೇಷವಾಗಿದೆ.
2009 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ 108 ಆಂಬ್ಯುಲೆನ್ಸ್ ಸೇವೆ ಆರಂಭವಾಯಿತು. ಪ್ರತಿವರ್ಷ 30-35 ಹೆರಿಗೆಗಳು ಆಗುತ್ತಿವೆ. 2020-21 ಸಾಲಿನಿಂದ ಈವರೆಗೂ ಆಂಬ್ಯುಲೆನ್ಸ್‌ನಲ್ಲಿ 25 ಮಹಿಳೆಯರಿಗೆ ಹೆರಿಗೆಯಾಗಿವೆ. 108 ಆಂಬ್ಯುಲೆನ್ಸ್‌ನಲ್ಲಿ ಇಬ್ಬರು ಚಾಲಕ ಮತ್ತು ಇಬ್ಬರು ತುರ್ತು ವೈದ್ಯಕೀಯ ತಂತ್ರಜ್ಞರು ಹಗಲು ಮತ್ತು ರಾತ್ರಿ ಪಾಳೆಯಾಗಿ ಕೆಲಸ ನಿರ್ವಹಿಸುತ್ತಾರೆ.
ಹೆರಿಗೆ ನೋವು ಬಂದ ತಕ್ಷಣ ಒಂದು ತಾಸು ಅಥವಾ ಎರಡು ತಾಸಿನಲ್ಲಿ ಹೆರಿಗೆಯಾಗುತ್ತವೆ. ಆಗ ಗರ್ಭಿಣಿಯ ಸ್ಥಿತಿ ನೋಡಿ ಬಹಳ ನೋವು ಕಾಣಿಸಿಕೊಂಡಾಗ ರಸ್ತೆ ಪಕ್ಕದಲ್ಲಿಯೇ ಆಂಬ್ಯುಲೆನ್ಸ್ ನಿಲ್ಲಿಸಿ ಆಶಾ ಕಾರ್ಯಕರ್ತೆ, ಚಾಲಕ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸಹಾಯದಿಂದ ಅಥವಾ ಇವರ್ಯಾರು ಇಲ್ಲದಿದ್ದರೂ ತುರ್ತು ವೈದ್ಯಕೀಯ ತಂತ್ರಜ್ಞರು ಗರ್ಭಿಣಿಗೆ ಧೈರ್ಯ ತುಂಬಿ ಮೊದಲಿನ ಚಿಕಿತ್ಸೆಯ ವರದಿಗಳನ್ನೆಲ್ಲಾ ಪರಿಶೀಲಿಸಿ ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆ ಮಾಡಿಸುತ್ತಿದ್ದಾರೆ. ಹೆರಿಗೆ ವೇಳೆ ತಾಯಿ ಮತ್ತು ಮಗುವಿಗೆ ತೊಂದರೆಯಾಗದ ರೀತಿಯಲ್ಲಿ ಕ್ಲಿಷ್ಟಕರ ಹೆರಿಗೆಗಳೂ ಆಗಿದ್ದಾವೆ.
ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಮಾತನಾಡಿ, 2011ರಿಂದ ನಾನು ತುರ್ತು ವೈದ್ಯಕೀಯ ತಂತ್ರಜ್ಞವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ತಾಲೂಕಿನ ಇಂದೂರ ಗ್ರಾಮದ ಗರ್ಭಿಣಿಯ ಮಗುವಿನ ತಲೆ ಮೊದಲು ಬಾರದೆ ಕಾಲುಗಳು ಮೊದಲು ಬಂದ ಕಷ್ಟಕರವಾದ (ಬ್ರಿಚ್ ಪ್ರಸೆಂಟೇಶನ್), ಕಲಘಟಗಿ ತಾಲೂಕಿನ ಆಲದಕಟ್ಟಿ ಗ್ರಾಮದ ಎಚ್‌ಐವಿ ಸೋಂಕಿತ ಗರ್ಭಿಣಿಯ ಹೆರಿಗೆಯನ್ನು ಪಿಪಿಇ ಕಿಟ್, ಗ್ಲೋಸ್ ಮತ್ತು ಮಾಸ್ಕ್ ಧರಿಸಿ ಮತ್ತು ರಕ್ತ ಕಡಿಮೆ ಇರುವ, ನೀರಿನ ಪ್ರಮಾಣ ಕಡಿಮೆ ಇರುವ, ಗರ್ಭಾವಸ್ಥೆಯಲ್ಲಿ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೇ ಇರುವ, ಹೆಪಟೈಟಿಸ್ ಬಿ ಇರುವ ಹೆರಿಗೆಗಳನ್ನು ಕೂಡ ಮಾಡಿಸಿದ್ದೇನೆ. ಕೋವಿಡ್ ಮತ್ತು ಲಾಕ್‌ಡೌನ್ ನಡುವೆಯೂ 108 ಆಂಬ್ಯುಲೆನ್ಸ್ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ್ದೇವೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತೀ ಹೆಚ್ಚು 108 ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆಯಾದ ತಾಲೂಕು ಮುಂಡಗೋಡ ಆಗಿದೆ. ನಾನೇ ಈ ಎಲ್ಲಾ ಹೆರಿಗೆಗಳನ್ನು ಸುರಕ್ಷಿತವಾಗಿ ಮಾಡಿಸಿದ್ದೇನೆ. ಇದಕ್ಕೆ ನಮ್ಮ ಸಿಬ್ಬಂದಿ, ಪೊಲೀಸ್ ಹಾಗೂ ಸಾರ್ವಜನಿಕರು ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.